Advertisement

ಕಲರ್‌ಫ‌ುಲ್‌ “ಭರಾಟೆ’ಯಲ್ಲಿ ಭರ್ಜರಿ ಮನರಂಜನೆ

10:41 AM Oct 20, 2019 | Lakshmi GovindaRaju |

“ಚಿನ್ನಾ, ಜೀವನದಲ್ಲಿ ಎದ್ದು-ಬಿದ್ದು ನಿಂತಿರೋ ಜೀವ ಇದು. ಬಲಿಪಾಡ್ಯಮಿ ನನ್ನದೇ, ದೀಪಾವಳಿಯೂ ನನ್ನದೇ…’ “ಚಿಕ್ಕಂದಿನಿಂದಲೂ ನನಗೆ ಹೊಡೆದಾಟ ಅಂದರೆ ಇಷ್ಟ ಇಲ್ಲ. ಆದರೆ, ಹೊಡೆದಾಟಕ್ಕೆ ನಾನಂದ್ರೆ ತುಂಬಾ ಇಷ್ಟ…’ “ಸಲಾಂ ಹೊಡೆಯೋ ಸೀನೇ ಇಲ್ಲ ಡಾರ್ಲಿಂಗ್‌, ಸುಮ್ನೆ ನುಗ್ತಾ ಇರೋದೆ, ತೊಡೆ ತಟ್ತಾ ಇರೋದೇ…’ “ಮರ್ನೆ ಕೆ ಲಿಯೇ ನಹಿ, ಮಾರ್ನೇಕೋ ಆಯಾ ಹು..’

Advertisement

ಇಂತಹ ಖಡಕ್‌ ಡೈಲಾಗ್‌ ಓದಿದ ಮೇಲೆ, ಪಕ್ಕಾ ಕಮರ್ಷಿಯಲ್‌ ಸಿನಿಮಾ ಅನ್ನೋದು ಗ್ಯಾರಂಟಿ. ಇಲ್ಲಿರೋದು ಸ್ಯಾಂಪಲ್‌ ಡೈಲಾಗ್‌ ಮಾತ್ರ. ಸಿನಿಮಾದುದ್ದಕ್ಕೂ ಪವರ್‌ಫ‌ುಲ್‌, ಮೀನಿಂಗ್‌ಫ‌ುಲ್‌, ಕಲರ್‌ಫ‌ುಲ್‌ ಡೈಲಾಗಳದ್ದೇ ಸದ್ದು. ಹೌದು, ಬೇರೆ ಮಾತೇ ಇಲ್ಲ. “ಭರಾಟೆ’ ನಿರೀಕ್ಷೆ ಹುಸಿಗೊಳಿಸಿಲ್ಲ. ಮೃಷ್ಟಾನ್ನ ಭೋಜನ ಸವಿದಷ್ಟೇ ತೃಪ್ತಿಗೆ “ಭರಾಟೆ’ ಕಾರಣವಾಗುತ್ತೆ. ಪರಭಾಷೆಯ ಕೆಲವು ಸಿನಿಮಾಗಳ ಬಗ್ಗೆ ಬೀಗುತ್ತಿದ್ದವರಿಗೆ ನಿಜವಾಗಿಯೂ “ಭರಾಟೆ’ ಉತ್ತರವಾಗಬಹುದೇನೋ? ಅಷ್ಟರ ಮಟ್ಟಿಗೆ ಇಲ್ಲಿ ವರ್ಣಮಯವಾಗಿ, ಅಬ್ಬರವಾಗಿ, ಅದ್ಧೂರಿಯಾಗಿ ರೂಪಗೊಂಡಿದೆ.

ಶೀರ್ಷಿಕೆಗೆ ತಕ್ಕಂತೆಯೇ ಸಿನಿಮಾದೊಳಗಿನ ಅಂಶಗಳೂ ಖಡಕ್‌ ಆಗಿವೆ. ಒಂದು ಹಂತದಲ್ಲಿ ಕಥೆ ಎಲ್ಲೆಲ್ಲಿ ಸಾಗುತ್ತೆ, ಅಲ್ಲಿ ಕಾಣೋರು ಯಾರ್ಯಾರು, ಅವರಿಗೆಲ್ಲಾ ಏನು ಸಂಬಂಧ ಎಂಬ ಪ್ರಶ್ನೆ ಗಿರಕಿ ಹೊಡೆಯುವುದು ನಿಜ. ಅದೆಲ್ಲದ್ದಕ್ಕೂ ನಿರ್ದೇಶಕರು, ಉತ್ತರವಾಗುತ್ತಲೇ, ಚಿತ್ರವನ್ನು “ಭರ್ಜರಿ’ಯಾಗಿ ನೋಡಿಸಿಕೊಂಡು ಹೋಗುತ್ತಾರೆ. ಚಿತ್ರ ಇಷ್ಟ ಆಗೋದೇ ಮೇಕಿಂಗ್‌ನಿಂದ. ಪ್ರತಿಯೊಂದು ಫ್ರೇಮ್‌ ಪೇಂಟಿಂಗ್‌ನಂತೆ ಕಂಗೊಳಿಸುತ್ತವೆ. ಚಿತ್ರಮಂದಿರದ ಪರದೆಯ ಸಮಸ್ಯೆಯೋ ಏನೋ, ಕೆಲವೆಡೆ, ಏನೋ ಕೊರತೆ ಎಂಬಂತಿತ್ತು.

ಕನ್ನಡದ ಮಟ್ಟಿಗೆ ಭರಪೂರ ಆ್ಯಕ್ಷನ್‌ ಜೊತೆಗೆ ಒಂದೊಳ್ಳೆಯ ಸಂದೇಶ ಸಾರುವ ಸಿನಿಮಾ ಆಗಿ “ಭರಾಟೆ’ ಇಷ್ಟ ಆಗುತ್ತೆ. ಇಲ್ಲಿ ಕಥೆಗಿಂತ ಚಿತ್ರಕಥೆ ಇಷ್ಟವಾಗುತ್ತೆ. ರಾಜಸ್ಥಾನದಿಂದ ಕರ್ನಾಟಕದವರೆಗೂ ಕಥೆ ಅಲೆದಾಟವಿದೆ. ಒಂದು ಸರಳ ಕಥೆಯನ್ನು ರೋಚಕವೆನಿಸುವ ನಿರೂಪಣೆಯೊಂದಿಗೆ, ಎಲ್ಲೂ ಕಿರಿ ಕಿರಿ ಇಲ್ಲದಂತೆ ತೋರಿಸಿಕೊಂಡು ಹೋಗುವ ತಾಕತ್ತು ಚಿತ್ರದಲ್ಲಿದೆಯಾದರೂ, ಸಿನಿಮಾ ಅವಧಿಯನ್ನು ಕೊಂಚ ಕಡಿಮೆ ಮಾಡಬಹುದಿತ್ತು. ಕೆಲವು ಅನಗತ್ಯ ದೃಶ್ಯಗಳಿಗೆ ಕತ್ತರಿ ಹಾಕಲು ಸಾಧ್ಯವಿತ್ತು.

ಅವುಗಳನ್ನು ಗುರುತಿಸಿ, ತೆಗೆದು ಪಕ್ಕಕ್ಕಿಟ್ಟಿದ್ದರೆ, “ಭರಾಟೆ’ಯ ಆರ್ಭಟ ಇನ್ನಷ್ಟು ಮಜವಾಗಿರುತ್ತಿತ್ತು. ಆದರೂ, ತೆರೆ ಮೇಲಿನ ಆ ಹಾವಳಿಯ ಸದ್ದು ಜೋರಾಗಿಯೇ ಇದೆ. ತೆರೆ ಮೇಲಿನ ಹೀರೋನನ್ನು ಹೊಗಳುವಷ್ಟೇ, ತೆರೆ ಹಿಂದೆ ಮಾಡಿರುವ ಪ್ರತಿಯೊಬ್ಬರ ಕೆಲಸವನ್ನೂ ಗುಣಗಾನ ಮಾಡಲೇಬೇಕು. ತೆರೆಹಿಂದೆ ಸಾಕಷ್ಟು ಹೀರೋಗಳಿದ್ದಾರೆ. ಮೊದಲ ಹೀರೋ ಆಗಿ ನಿರ್ಮಾಪಕರು ಕಂಡರೆ, ಅವರ ಜೊತೆಯಲ್ಲಿ ನಿರ್ದೇಶಕರೂ ಕಾಣುತ್ತಾರೆ. ಇನ್ನು, “ಭರಾಟೆ’ಯಲ್ಲಿ ಸದ್ದು ಮಾಡೋದೇ ಆ್ಯಕ್ಷನ್‌, ಎಲ್ಲಾ ಸ್ಟಂಟ್‌ ಮಾಸ್ಟರ್ಗಳೂ ಅಲ್ಲಿ ಅಲ್ಟಿಮೇಟ್‌ ಎನಿಸುತ್ತಾರೆ.

Advertisement

ಅಷ್ಟರ ಮಟ್ಟಿಗೆ ಪ್ರತಿಯೊಬ್ಬರ ಕೆಲಸಗಳು ಕಾಣಸಿಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಕಲನಕಾರ ಇಲ್ಲಿ ಇನ್ನೊಂದು ಹೈಲೈಟ್‌ ಎನ್ನಲೇಬೇಕು. ಲೋಡ್‌ಗಟ್ಟಲೆ ಕಲಾವಿದರನ್ನು ಒಂದೇ ಸ್ಕ್ರೀನ್‌ ಮೇಲೆ ತುಂಬಾ ಅದ್ಭುತವಾಗಿ ತೋರಿಸಿರುವುದು “ಭರಾಟೆ’ಯ ಇನ್ನೊಂದು ಚಾಲೆಂಜ್‌. ಅದನ್ನಿಲ್ಲಿ ಅಷ್ಟೇ ನೀಟ್‌ ಎಡಿಟ್‌ ಮಾಡಿದ್ದಾರೆ. ತೆರೆಮೇಲಿನ ಏಕಾಗ್ರತೆಗೆ ಛಾಯಾಗ್ರಹಣದ ಕೊಡುಗೆಯೂ ಇದೆ. ಒಟ್ಟಾರೆ, ಇಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ, ಕಲಾವಿದರ ದಂಡು, ಅದ್ಭುತ ತಾಣ, ಹೀಗೆ ಯಾವುದಕ್ಕೂ ಕೊರತೆ ಇಲ್ಲ.

ತುಸು ಅವಧಿ ಹೆಚ್ಚು ಅನ್ನುವ ಮಾತು ಬಿಟ್ಟರೆ, ಆ್ಯಕ್ಷನ್‌, ಮೇಕಿಂಗ್‌ ಸೇರಿದಂತೆ ಇತರೆ ಕೆಲ ಸೂಕ್ಷ್ಮ ವಿಚಾರಗಳಲ್ಲಿ “ಭರಾಟೆ’ ಮಿಂಚಿದೆ. ಇದೊಂದು ಆಯುರ್ವೇದ ಪರಂಪರೆಯ ಕುಟುಂಬದ ಹಿನ್ನೆಲೆಯಲ್ಲಿ ಸಾಗುವ ಚಿತ್ರವಿದು. ಹೀರೋ ಕುಟಂಬ ರಾಜಸ್ಥಾನಕ್ಕೆ ಯಾಕೆ ಹೋಗುತ್ತೆ ಎಂಬುದಕ್ಕೂ ಒಂದು ಫ್ಲ್ಯಾಶ್‌ಬ್ಯಾಕ್‌ ಇದೆ. ಮೂರ್‍ನಾಲ್ಕು ಖಳನಟರು ಆ ಹೀರೋ ಮೇಲೆ ಯಾಕೆ ಅಟ್ಯಾಕ್‌ ಮಾಡ್ತಾರೆ ಅನ್ನುವುದಕ್ಕೂ ಒಂದು ಫ್ಲ್ಯಾಶ್‌ಬ್ಯಾಕ್‌ ಇದೆ. ಹೀರೋ ಯಾಕೆ, ಕರ್ನಾಟಕಕ್ಕೆ ಬರ್ತಾನೆ ಎಂಬುದಕ್ಕೂ ಒಂದು ಫ್ಲ್ಯಾಶ್‌ಬ್ಯಾಕ್‌ ಇದೆ.

ಬಲ್ಲಾಳನ ಕಥೆ ಒಂದಾದರೆ, ರತ್ನಾಕರನ ಕಥೆ ಇನ್ನೊಂದು. ಪಲ್ಲವ ಹಾಗು ನಾಯಕ ಇವರ ಕಥೆ ಒಂದೊಂದು. ಅವರೆಲ್ಲಾ ಯಾರು ಎಂಬುದನ್ನಿಲ್ಲಿ ಬಿಡಿಸಿ ಹೇಳಿದರೆ ಮಜ ಇರಲ್ಲ. ಸುಮ್ಮನೆ ನೋಡಿ ಭರಪೂರ ಮನರಂಜನೆ ಕಣ್ತುಂಬಿಕೊಳ್ಳಬೇಕಷ್ಟೇ. ಶ್ರೀಮುರಳಿ ಅವರಿಲ್ಲಿ ಎಂದಿಗಿಂತ ಹ್ಯಾಂಡ್‌ಸಮ್‌. ಅಷ್ಟೇ ಖದರ್‌ ತುಂಬಿರುವ ಆ್ಯಕ್ಷನ್‌ ಹೀರೋ ಆಗಿ ಇಷ್ಟವಾಗುತ್ತಾರೆ. ಅವರು ಹರಿಬಿಡುವ ಮಾತುಗಳು, ಖಳನಟರಿಗೆ ಕೊಡುವ ಪಂಚ್‌ಗಳು ಭರಾಟೆಯ ಮೈಲೇಜ್‌ ಹೆಚ್ಚಿಸಿವೆ. ಎರಡು ಪಾತ್ರದಲ್ಲೂ ಶ್ರೀಮುರಳಿ ಅವರು ಸ್ಕೋರ್‌ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಒಂದು ಶಾಂತಸ್ವರೂಪ ಪಾತ್ರ, ಇನ್ನೊಂದು ಉಗ್ರಸ್ವರೂಪ ಪಾತ್ರ.

ಹಾವಳಿ, ದೀಪಾವಳಿ ಎರಡೂ ಅವರ ಕ್ಯಾರೆಕ್ಟರ್‌ನಲ್ಲೇ ಇದೆ. ಅದನ್ನು ತೆರೆಮೇಲೆ ಕಾಣಬೇಕು. ಶ್ರೀಲೀಲಾ ಗ್ಲಾಮರ್‌ ಗೊಂಬೆಯೂ ಹೌದು, ಲವಲವಿಕೆಯ ನಟಿಯೂ ಹೌದು. ಇನ್ನು ಸಾಯಿಕುಮಾರ್‌, ರವಿಶಂಕರ್‌, ಅಯ್ಯಪ್ಪ “ಸಹೋದರರ ಸವಾಲ್‌’ ಕೂಡ ಕಮಾಲ್‌ ಮಾಡಿದೆ. ತಾರಾ, ಸುಮನ್‌, ಶರತ್‌, ಅವಿನಾಶ್‌, ಗಿರಿ ಹೇಳುತ್ತಾ ಹೋದರೆ ಕಲಾವಿದರ ಪಟ್ಟಿ ಉದ್ದವಾಗುತ್ತೆ. ಪ್ರತಿ ಪಾತ್ರವೂ ಪ್ರಾಮುಖ್ಯತೆ ಹೊಂದಿದೆ. ಅರ್ಜುನ್‌ ಜನ್ಯ ಸಂಗೀತದಲ್ಲಿ ಎರಡು ಹಾಡು ಗುನುಗುವಂತಿವೆ. ಭರಾಟೆಯ ಕಥೆಗೆ ತಕ್ಕಂತೆ ಹಿನ್ನೆಲೆ ಸಂಗೀತವೂ ಜೋರಾಗಿದೆ. ಗಿರೀಶ್‌ ಛಾಯಾಗ್ರಹಣ ಚಿತ್ರದ ಮತ್ತೊಂದು ಪ್ಲಸ್‌.

ಚಿತ್ರ: ಭರಾಟೆ
ನಿರ್ಮಾಣ: ಸುಪ್ರೀತ್‌
ನಿರ್ದೇಶನ: ಚೇತನ್‌ಕುಮಾರ್‌
ತಾರಾಗಣ: ಶ್ರೀಮುರಳಿ, ಶ್ರೀಲೀಲಾ, ತಾರಾ, ಸುಮನ್‌, ಸಾಯಿಕುಮಾರ್‌, ರವಿಶಂಕರ್‌, ಅಯ್ಯಪ್ಪ, ಶರತ್‌, ಅವಿನಾಶ್‌, ಸಾಧು ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next