ಮುಂಬಯಿ: ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧೀಪತಿ ಶ್ರೀಮದ್ ಸಮ್ಯಮೀಂದ್ರ ತೀರ್ಥ ಸ್ವಾಮೀಜಿ ಅವರಿಗೆ ತಮ್ಮ ನಿಷ್ಠೆಯನ್ನು ಪ್ರದರ್ಶಿಸಲು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ಜಿಎಸ್‌ಬಿ ಸಮಾಜ ಬಾಂಧವರಿಂದ ನ. 19 ರಂದು ಜಿಎಸ್‌ಬಿ ಸಭಾದ ದಹಿಸರ್ ದಹಿಸರ್- ಬೊರಿವಲಿಯ ಜಿಎಸ್‌ಬಿಗ್ರೌಂಡ್, ಎನ್. ಎಲ್. ಕಾಂಪ್ಲೆಕ್ಸ್ ಇಲ್ಲಿ ಭಕ್ತಿನಿಷ್ಠ ರ‍್ಯಾಲಿ ಮತ್ತು ಮಹಾಸಭೆಯನ್ನು ಆಯೋಜಿಸಲಾಗಿದ್ದು, ಇದರ ಪೂರ್ವಭಾವಿ ಸಭೆಯು ನ. 8 ರಂದು ಸಯಾನ್‌ನ ಜಿಎಸ್‌ಬಿ ಸೇವಾ ಮಂಡಲದ ಶ್ರೀ ಗುರುಗಣೇಶ್ ಪ್ರಸಾದ ಸಭಾಗೃಹದಲ್ಲಿ ನಡೆಯಿತು.
ವೇದಮೂರ್ತಿ ಬಂಟ್ವಾಳ ಕೃಷ್ಣ ಭಟ್ ಅವರು ಪ್ರಾರ್ಥನೆಗೈದರು. ವಾಲ್ಕೇಶ್ವರ ಶ್ರೀ ಕಾಶೀ ಮಠದ ಅಧ್ಯಕ್ಷ ಜಿ. ಜಿ. ಪ್ರಭು ಅವರು ಸಭೆಯ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿ ಮಾತನಾಡಿ, ಸಭೆಯ ಉದ್ದೇಶವನ್ನು ವಿವರಿಸಿದರು. ನಮ್ಮ ಪೂಜ್ಯ ಗುರುವರ್ಯರಾದ ಶ್ರೀ ಕಾಶಿ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರಿಂದ ಪರಿತ್ಯಕ್ತ ಶಿವಾನಂದ ಪೈ ಚೋಟುವಿನ ಬಗ್ಗೆ ಮಾಹಿತಿ ನೀಡಿದರು. ಪ್ರಸ್ತುತದ ಅಪಾರ ಸಮಾಜ ಬಾಂಧವರ ವಿರೋಧವಿದ್ದರೂ ಇವರು ಊರಿನಿಂದ ಊರಿಗೆ ಅಲೆದಾಡುತ್ತಿರುವುದು ಕಾಣುತ್ತದೆ. ಅಲ್ಲದೆ ಅವರು ಮುಂಬಯಿಗೂ ಬರುವ ಸುದ್ದಿಯನ್ನು ಹರಡಿಸಲಾಗಿದೆ. ಇದನ್ನು ನಾವೆಲ್ಲರೂ ಪ್ರತಿಭಟಿಸಬೇಕು ಎಂದರು.
ಜಿಎಸ್‌ಬಿ ಸೇವಾ ಮಂಡಲ ಸಯಾನ್ ಅಧ್ಯಕ್ಷ ಯಶವಂತ ಕಾಮತ್ ಅವರು ಮಾತನಾಡಿ, ಜಿಎಸ್‌ಬಿ ಸಭಾ ದಹಿಸರ್, ಬೊರಿವಲಿ ಅವರು ರ್ಯಾಲಿ ಹಾಗೂ ಮಹಾಸಭೆಯನ್ನು ಆಯೋಜಿಸಲು ಮೈದಾನವನ್ನು ನೀಡಿರುವುದಲ್ಲದೆ, ರ್ಯಾಲಿಗೆ ಬೇಕಾದ ಎಲ್ಲಾ ವ್ಯವಸ್ಥೆ, ಸಮಾಜ ಬಾಂಧವರ ಊಟೋಪಚಾರ, ದಹಿಸರ್ ರೈಲು ನಿಲ್ದಾಣದಿಂದ ಸಭೆ ನಡೆಯುವ ಸ್ಥಳಕ್ಕೆ ಉಚಿತ ವಾಹನಗಳ ಸೌಕರ್ಯವನ್ನು ಮಾಡಲಿದ್ದಾರೆ ಎಂದರು.
ಸೇವಾ ಮಂಡಳದ ಮಾಜಿ ಅಧ್ಯಕ್ಷ ಆರ್.ಜಿ. ಭಟ್ ಅವರು ಮಾತನಾಡಿ, ಪೂಜ್ಯ ಗುರುವರ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರಿಗೆ ಶಿವಾನಂದ ಪೈ ಚೋಟು ಎಂಬಾತ ನೀಡಿದ ಉಪಟಳವನ್ನು ವಿವರಿಸಿದರು. ಪ್ರಸ್ತುತ ಸಮಾಜದ ತರುಣ ವರ್ಗದವರು ಮುಂದೆ ಬಂದು ನಮ್ಮ ಗುರುವರ್ಯ ಶ್ರೀಮದ್ ಸಮ್ಯಮೀಂದ್ರ ತೀರ್ಥ ಸ್ವಾಮೀಜಿ ಅವರಿಗೆ ರ್ಯಾಲಿಯ ಮುಖಾಂತರ ಪೂರ್ಣನಿಷ್ಠೆಯನ್ನು ವ್ಯಕ್ತಪಡಿಸಬೇಕು ಎಂದರು.
ಮುಂಬಯಿ ಜಿಎಸ್‌ಬಿ ಸಂಘಟನೆಗಳ ಪ್ರತಿ ನಿಧಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ದರು. ವೇದಮೂರ್ತಿ ಬಂಟ್ವಾಳ ಕೃಷ್ಣ ಭಟ್ ಅವರು, ಶಿವಾನಂದ ಪೈಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ರ್ಯಾಲಿ ಹಾಗೂ ಮಹಾಸಭೆಯ ನೇರ ಪ್ರಸಾರವನ್ನು ಸ್ಪಂದನ ಟಿವಿ ಮತ್ತು ನಮ್ಮ ಕುಡ್ಲ ಚಾನಲ್‌ನಲ್ಲಿ ಪ್ರಸಾರಿಸಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಮಾಜ ಬಾಂಧವರು ಟಿವಿ ಮುಖಾಂತರ ವೀಕ್ಷಿಸುವ ಅವಕಾಶ ಮಾಡಲಾಗಿದೆ ಎಂದರು.
ರ್ಯಾಲಿ ಮತ್ತು ಮಹಾಸಭೆಗೆ ಆಗಮಿಸುವ ಸಮಾಜ ಬಾಂಧವರಿಗಾಗಿ ಜಿಎಸ್‌ಬಿ ಸೇವಾ ಮಂಡಲ ಸಯಾನ್ ವತಿಯಿಂದ ಉಚಿತ ಬಸ್‌ಸೌಕರ್ಯವನ್ನು ಮಾಡಲಾಗಿದೆ. ಆಯಾಯ ವಿಭಾಗದ ಜಿಎಸ್‌ಬಿ ಸಂಘಟನೆ ಯವರಿಂದ ಬಸ್ ಹೊರಡುವಸಮಯ ಮತ್ತು ಸ್ಥಳದ ವಿವರಗಳನ್ನು ಪಡೆಯಬಹುದು ಎಂದು ತಿಳಿಸಲಾಯಿತು. ಜಿಎಸ್‌ಬಿ ಸೇವಾ ಮಂಡಳದ ಕಾರ್ಯದರ್ಶಿ ರಾಮನಾಥ ಕಿಣಿ ವಂದಿಸಿದರು. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿಪಾಲ್ಗೊಂಡಿದ್ದರು.