ಈ ಹಕ್ಕಿಯನ್ನು ಬೂದುತಲೆ ಮೈನಾ ಅಂತಲೂ ಕರೆಯುವುದಿದೆ. ಚಿಕ್ಕ ಹಕ್ಕಿಯಾದರೂ ಈ ಹಕ್ಕಿಯ ಬದುಕು ವಿಸ್ಮಯಗಳ ಆಗರ. ಈ ಹಕ್ಕಿ ಆಹಾರ ಸೇವಿಸುವುದನ್ನು ನೋಡುವುದೇ ಸೊಗಸು.Gray-Headed Htarling (Sturnus malabaricus (Gmelin) R Myna ಇದು ತಲೆಕೆಳಗಾಗಿ ಆಹಾರ ಸೇವಿಸುತ್ತಾ, ಹಾಗೇ ನರ್ತಿಸುತ್ತಾ ಇರುತ್ತದೆ.
ಕೆಲವೊಮ್ಮ ಕೀಟ, ಕೀಟದ ಮೊಟ್ಟೆ, ಕಂಬಳಿ ಹುಳ, ಅದರ ಮೊಟ್ಟೆ ಎಲ್ಲವನ್ನೂ ಕಬಳಿಸಿ, ತಿನ್ನುವುದುಂಟು. ಮಕರಂದ, ಕೀಟ, ಮೊಟ್ಟೆ, ಹಣ್ಣು, ಕೆಲವೊಮ್ಮೆ ಪಪ್ಪಾಯದಂಥ ಹಣ್ಣನ್ನೂ ಕುಕ್ಕಿ ಸ್ವಾಹ ಮಾಡುತ್ತದೆ. ಕೇರಳದ ಕುಂಬಳ ಕಾಸರಗೋಡಿನಲ್ಲಿ ನಾಲ್ಕು -ಐದು ದಿನ ಈ ಹಕ್ಕಿಯ ಸಂಗದಲ್ಲಿ ಕಳೆಯುವ ಅವಕಾಶ ಸಿಕ್ಕಿತು. ಆಗ ಈ ಹಕ್ಕಿಯ ಕುರಿತು ಅನೇಕ ವಿಸ್ಮಯದ ಸಂಗತಿ ತಿಳಿಯಲು ಸಾಧ್ಯವಾಯಿತು.
ಭಾರತದ ಒಳ ಭಾಗದಲ್ಲಿ ಇದರ ನಾನಾ ತಳಿಗಳಿವೆ. ಅಲ್ಲದೇ ಭಾರತದಲ್ಲಿ ಇದರ ರೋಸಿ -ಸಾರಿಕಾ, ಚುಕ್ಕೆ ಹೊಳೆವ ರೆಕ್ಕೆ ಸಾರಿಕಾ, ಬ್ರಾಹ್ಮನಿ ಸಾರಿಕಾ, ಕೊಮನ್ ಸಾರಿಕಾ, ಏಷಿಯಾದ ಪೈಯx ಸಾರಿಕಾ ಹೀಗೆ ವರ್ಗಗಳಿವೆ. ಗುಬ್ಬಚ್ಛಿಯಂಥ ಈ ಹಕ್ಕಿ -ಸ್ಟುರ್ನಿಡಿಯಾ ಕುಟುಂಬಕ್ಕೆ ಸೇರಿದೆ. ಈ ಹಕ್ಕಿ ಕೇವಲ 14 ಗ್ರಾಂ. ಭಾರವಿದೆ. ಈ ಗುಂಪಿನ ದೊಡ್ಡ ಹಕ್ಕಿ 36 ಸೆಂ.ಮೀಯಷ್ಟು ದೊಡ್ಡದಿದ್ದು, 400 ಗ್ರಾಂ ಭಾರ ಇರುತ್ತದೆ. ಈ ಜಾತಿಯಲ್ಲಿ ಸುಮಾರು 25 ವಿವಿಧ ಹಕ್ಕಿಗಳಿವೆ. ಈ ಗುಂಪಿನ ಬಿಳಿಕುತ್ತಿಗೆ ಮೈನಾ ಸುಮಾರು 50 ಸೆಂ.ಮೀ ದೊಡ್ಡದಿದೆ. ಏಷಿಯಾದ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಸುಮಾರು 39 ವಿವಿಧ ಬಣ್ಣದ ಹಕ್ಕಿಗಳಿವೆ. ನಮ್ಮಲ್ಲಿ ಸುಮಾರು 24 ಜಾತಿಯ ಹಕ್ಕಿಗಳು ಕಾಣಸಿಗುತ್ತವೆ. ಮಾನವ ನಿರ್ಮಿತ ತೋಟದ ಪರಿಸರದಲ್ಲಿ, ಆರ್ಕಿಡ್ ಮತ್ತು ಗುಲ್ ಮೊಹರ್, ಬೂರಲ ಮರಗಳಿರುವಲ್ಲಿ ಸಾಮಾನ್ಯವಾಗಿ ಈ ಹಕ್ಕಿಗಳೂ ಗುಂಪಾಗಿ ಕಾಣಸಿಗುತ್ತವೆ.
ಆ ಹೂವಿಗೆ ಬರುವ ಕೀಟಗಳನ್ನು ಮತ್ತು ಮಕರಂದವನ್ನು ಹೀರಲು ಇವು ಗುಂಪಾಗಿ ಬರುತ್ತವೆ. ಅಲ್ಲಿ ತಮ್ಮ ದನಿಯಿಂದ ಇತರ ತನ್ನ ಸಹಚರಿಗಳ ಜೊತೆ ಸಂಭಾಷಣೆ ನಡೆಸುತ್ತವೆ. ಇದೇ ಈ ಹಕ್ಕಿಯ ವಿಶೇಷತೆ. ಹಾಗೆಯೇ, ಇದು, ಕುಟುಂಬ ವ್ಯವಸ್ಥೆಯನ್ನು ಹೊಂದಿದೆ. ಅನೇಕ ಹಕ್ಕಿಗಳು ಗುಂಪಾಗಿ ವಾಸಿಸುತ್ತವೆ. ಈ ಹಕ್ಕಿಯ ತಲೆ ತಿಳಿ ಬೂದು ಬಣ್ಣ ಇದ್ದು , ಮೇಲೆ ಬಿಳಿಯಗೆರೆಯಿಂದ ಕೂಡಿದೆ. ಎದೆ ಹೊಟ್ಟೆ, ತಿಳಿ ಮಣ್ಣು ಬಣ್ಣ. ರೆಕ್ಕೆ ಮತ್ತು ಬಾಲದ ಮೇಲ್ಭಾಗದ ಗರಿಗಳು ಬೂದು ಬಣ್ಣದಿಂದಿರುತ್ತವೆ. ರೆಕ್ಕೆಯ ಅಂಚಿನಲ್ಲಿ ಕಪ್ಪು ಬಣ್ಣದ ರೇಖೆಯಂತೆ ಹಾಗೂ ರೆಕ್ಕೆಯ ಮಧ್ಯ ಕಪ್ಪು ಚಿತ್ತಾರವಿದೆ.
ಚುಂಚಿನ ಬುಡದಲ್ಲಿಹೊಳೆವ ಸಿಲ್ವರ್ ಬಣ್ಣವಿದೆ. ಕೆನ್ನೆ ಹಾಗೂ ಕಣ್ಣಿನ ಸಮೀಪದ ವರೆಗೆ ಹೊಳೆವ ನೀಲಿ ಬಣ್ಣ ಇದರ ಚೆಲುವನ್ನು ಹೆಚ್ಚಿಸಿದೆ. ಇದರ ಚುಂಚು ತಿಳಿಹಳದಿ ಇದ್ದು -ತುದಿಯಲ್ಲಿ ಬೂದು ಬಣ್ಣವಿದೆ. ಕಾಲು ತಿಳಿ ಗುಲಾಬಿ ಬಣ್ಣದ್ದು.
ಮೈನಾ ಹಕ್ಕಿಯಲ್ಲಿ ಕಾಲಿನ ಮೇಲೆ ವರ್ತುಲಾಕಾರವಾಗಿ ಕಂದು ಬಣ್ಣದ ರೇಖೆ ಇರುವುದು ಸೂಕ್ಷ್ಮವಾಗಿ ಗಮನಿಸಿದರೆ ಕಾಣುವುದು. ಕಾಲು, ಕಾಲಿನ ಬೆರಳು ಸದೃಢವಾಗಿದೆ. ಬಾಲ ಉದ್ದವಿದ್ದು, ಅದರ ಅಡಿಯಲ್ಲಿ ಕಂದುಬಣ್ಣ ಗೆರೆಗಳಿವೆ. ಇಲ್ಲಿರುವ ಕಂದು ಬಣ್ಣ ಆಧರಿಸಿಯೇ ಈ ಹಕ್ಕಿಗೆ ಬೂದು ತಲೆಯ ಸಾರಿಕಾ ಎಂಬ ಹೆಸರು ಬಂದಿದೆ.
ಚಳಿಗಾಲದಲ್ಲಿ ಸಮುದ್ರ ಮಟ್ಟದಿಂದ ಕಡಿಮೆ ಎತ್ತರ ಇರುವ ಪ್ರದೇಶಕ್ಕೂ ವಲಸೆ ಹೋಗುತ್ತವೆ. ಏಷಿಯಾ, ಆಫ್ರಿಕಾಗಳಲ್ಲೂ ಈ ತಳಿಯ ಹಕ್ಕಿಗಳಿವೆ.
ಹೆಣ್ಣು ಹಕ್ಕಿ ಕಾವು ಕೊಡುತ್ತದೆ. ಮರಿ ಮಾಡದೇ ಇರುವ ಸಂದರ್ಭದಲ್ಲಿ ಒಂದು ಗುಂಪಿನಲ್ಲಿ ಸಾವಿರಕ್ಕಿಂತ ಹೆಚ್ಚು ಹಕ್ಕಿಗಳು ಇರುತ್ತವೆ. ಎಲ್ಲವೂ ಒಟ್ಟಾಗಿ, ಭಿನ್ನವಾಗಿ ಹಾರಾಟ ಮಾಡುವ ದೃಶ್ಯ ಮನಮೋಹಕವಾಗಿರುತ್ತದೆ.
ಈ ಹಕ್ಕಿಗಳ ದನಿಯ ಅಧ್ಯಯನ ನಡೆಯ ಬೇಕಿದೆ. ಎಷ್ಟು ವಿಧದ ದನಿಯನ್ನು ಇದು ಅನುಕರಿಸುವುದು? ತನ್ನ ಜೊತೆ ಇರುವ ಹಕ್ಕಿಗಳ ದನಿಯನ್ನು ಮಾತ್ರ ಅನುಕರಿಸುವುದೋ?ಇಲ್ಲವೇ ಇತರ ಹಕ್ಕಿಗಳ ದನಿಯನ್ನೂ ಅನುಕರಿಸುವುದೋ? ಹೀಗೆ ಅನುಕರಣೆ ಮಾಡುವುದರ ಉದ್ದೇಶ ಏನು? ಈ ಎಲ್ಲದರ ಬಗ್ಗೆ ಸಂಶೋಧನೆ ನಡೆಯಬೇಕು.