ಅಂಬಾನಿ ಸಾಹೇಬ್ರು ಜಿಯೋ ಸಿಮ್ ದಯಪಾಲಿಸಿದ ಮೇಲಂತೂ ನಮ್ಮ ಹಾಸ್ಟೆಲ್‌ನಲ್ಲಿ ಹಬ್ಬವೋ ಹಬ್ಬ. 4ಜಿ ಮೊಬೈಲ್ ಇಲ್ಲದ ನಾವು ಗೆಳೆಯರ ಹಾಟ್‌ಸ್ಪಾಟ್‌ಗೆ ಕಾಯುತ್ತಿದ್ದೆವು. ಯಾರದ್ದಾದ್ರೂ ರೂಮಿಗೆ ಕಂಪ್ಯೂಟರ್ ಬಂದರೆ, ಗೇಮ್ ಆಡಿಯೋ ಅದನ್ನು ಲಗಾಡಿ ತೆಗೆಯುತ್ತಿದ್ದೆವು!
ಹಾಸ್ಟೆಲ್ ಕೂಡ ಗರ್ಲ್ಫ್ರೆಂಡ್‌ನಂತೆ. ಮರೆಯೋಕ್ಕೆ ಆಗೋಲ್ಲ. ಈ ವರ್ಷ ಪಿಜಿಯ ಓದು ಮುಗಿಯುತ್ತದೆ, ಹಾಸ್ಟೆಲ್ ಬಿಟ್ಟು ಹೋಗಬೇಕಲ್ಲ ಅನ್ನೋ ಬೇಸರ ಕಾಡುತ್ತಿದೆ. ಬಿಟ್ಟು ಹೋಗಲು ಮನಸ್ಸೇ ಆಗುತ್ತಿಲ್ಲ.
ಆರಂಭದಲ್ಲಿ ಕೇವಲ ಅನ್ನ ಸಿಕ್ಕರೆ ಸಾಕಾಗಿದ್ದ ನಮಗೆ ಉಪ್ಪು- ಖಾರದ ಪುಡಿಯ ನೀರೇ ಮೃಷ್ಟಾನ್ನ ಭೋಜನವಾಗಿತ್ತು. ಇದನ್ನೆಲ್ಲ ಸಹಿಸಿಕೊಂಡು ಮಾಡಿದ ಕೀಟಲೆಗಳೂ ಒಂದೆರಡಲ್ಲ. ರಾತ್ರಿ ಕರೆಂಟ್ ಹೋದ ಕೂಡಲೇ, ಪಾಪದ ಹುಡುಗರಿಗೆ ರಗ್ಗು ಹೊದಿಸಿ, ಹೊಡೆದು ನಾಪತ್ತೆ ಆಗುತ್ತಿದ್ದೆವು! ಕದ್ದು ಸಿಗರೇಟ್ ಸೇದಿಯೂ ಏನೋ ಸುಖ ಕಾಣುತ್ತಿದ್ದೆವು. ಆ ಹುಡುಗಿ ಹೀಗೆ, ಅವಳು ಹಾಗೆ ಅಂತೆಲ್ಲ ಮಾತಿಗೆ ಕುಳಿತರೆ, ರಾತ್ರಿ ಬೆಳಗಾಗಿದ್ದು ತಿಳಿಯುತ್ತಿರಲಿಲ್ಲ. ನಮ್ಮ ಫ್ರೀಡಮ್ ನೋಡಿ, ಮನೆಯಿಂದ ಕಾಲೇಜಿಗೆ ಬರುತ್ತಿದ್ದ ಹುಡುಗರಿಗೆ ಹೊಟ್ಟೆಕಿಚ್ಚಾಗುತ್ತಿತ್ತು.
ಅಂಬಾನಿ ಸಾಹೇಬ್ರು ಜಿಯೋ ಸಿಮ್ ದಯಪಾಲಿಸಿದ ಮೇಲಂತೂ ನಮ್ಮ ಹಾಸ್ಟೆಲ್‌ನಲ್ಲಿ ಹಬ್ಬವೋ ಹಬ್ಬ. ರೀಚಾರ್ಜ್ ಅಂತ ಅಂಗಡಿಗೆ ಓಡುವುದು ತಪ್ಪಿತು. 4ಜಿ ಮೊಬೈಲ್ ಇಲ್ಲದ ನಾವು ಗೆಳೆಯರ ಹಾಟ್‌ಸ್ಪಾಟ್‌ಗೆ ಕಾಯುತ್ತಿದ್ದೆವು. ನಮ್ಮ ಆಂÂಡ್ರಾಯ್ಡ ಮೊಬೈಲ್‌ಗೆ ಜೀವ ನೀಡಿದ ಜಿಯೋ ಗೆಳೆಯರನ್ನು ಎಂದೂ ಮರೆಯುವಂತಿಲ್ಲ. ಅಂತರ್ಜಾಲದಲ್ಲಿ ಅನಕ್ಷರಸ್ಥರಾದ ನಮಗೆ, ಜಿಯೋ ಬಂದು ಜ್ಞಾನ ತುಂಬಿದ್ದಂತೂ ನಿಜ. ಯಾರ ಭಯವಿಲ್ಲದೆ ಮಾಡಿದ ಕೀಟಲೆಗಳನ್ನು ನೆನೆಸಿಕೊಂಡರೆ, ನಾಚಿಕೆಯಾಗುವಂಥ ಕ್ಷಣಗಳೂ ಕಣ್ಮುಂದೆ ನಿಲ್ಲುತ್ತವೆ. ಒಂಥರಾ ನ್ಯಾಶನಲ್ “ಜಿಯೋ’ಗ್ರಫಿ ಚಾನೆಲ್‌ನಂತೆ ಆ ದೃಶ್ಯಗಳೆಲ್ಲ ಪ್ರಸಾರಗೊಳ್ಳುತ್ತಿವೆ.
ಈ ಹಾಸ್ಟೆಲ್ ವಿಚಿತ್ರ ಹುಡುಗರಿಗೂ ನೆಲೆ ಕಲ್ಪಿಸಿತ್ತು. ಒಬ್ಬನಿದ್ದ, ನಿಪುಣ ಕಳ್ಳ. ಪ್ಯಾಂಟ್- ಷರ್ಟ್ ಕದಿಯುವುದು, ಮೊಬೈಲನ್ನು ಎಗರಿಸೋದರಲ್ಲಿ ಬಹಳ ಎಕ್ಸ್‌ಪರ್ಟ್. ಒಂದು ದಿನ ಸ್ನೇಹಿತರೆಲ್ಲರೂ ಸೇರಿ ಅವನನ್ನು ಹಿಡಿಯಲೇಬೇಕೆಂದು ಪಣ ತೊಟ್ಟೆವು. ಸಖತ್ತಾಗಿ ಒಂದು ಪ್ಲ್ರಾನ್ ಮಾಡಿ, ಅವನಿಗಾಗಿ ಹೊಂಚು ಹಾಕಿ ಕುಳಿತಿದ್ದೆವು. 500 ರೂ.ನ ನೋಟ್ ಇಟ್ಟು ರೂಮ್‌ನ ಬಾಗಿಲು ಹಾಕದೇ, ಬೇರೆ ರೂಮ್‌ನಲ್ಲಿ ಕುಳಿತು ನೋಡುತ್ತಿದ್ದೆವು. ಆ ಕಳ್ಳ ಮೆಲ್ಲಗೆ ಬಂದ. ಈ ಬಾರಿ ಅವನ ಗ್ರಹಚಾರ ಕೆಟ್ಟಿತ್ತು. ಸಿಕ್ಕಿಬಿದ್ದ! ಹುಡುರು ಎಲ್ಲರೂ ಸೇರಿ, ಸರಿಯಾಗಿ ಪೆಟ್ಟುಕೊಟ್ಟರು. ಆದರೆ, ಆತ ಮನನೊಂದು ಕಾಲೇಜನ್ನೇ ತೊರೆದುಬಿಟ್ಟ. ಯಾವತ್ತೋ ಬಂದು, ಎಕ್ಸಾಮ್ ಬರೆದು ಹೋದ.
ಸ್ನೇಹಿತರಲ್ಲಿ ಯಾರಾದರೂ ಹುಡುಗಿ ಜೊತೆ ಕಂಡರೆ ಸಾಕು, ಅವತ್ತು ಅವನೇ ಹಾಸ್ಟೆಲ್‌ನ ಹೀರೋ. ಆ ದಿನ ರಾತ್ರಿ ಎಲ್ಲ ಬರೀ ಆ ಬಗ್ಗೆಯೇ ಮಾತುಗಳು. ಮತ್ತೆ ಮತ್ತೆ ಅವನನ್ನು ಕೆಣಕುವುದರಲ್ಲಿ ಏನೋ ಸುಖ ಸಿಗುತ್ತಿತ್ತು. ಹೀಗೆ ದಿನಾಲೂ ಒಬ್ಬೊಬ್ಬರು ಬಕ್ರಾ ಸಿಗುತ್ತಿದ್ದರು. ಹುಡ್ಗಿàರನ್ನು ಸೆಳೆಯಲು ಹಾಸ್ಟೆಲ್‌ನಲ್ಲೇ ಮಾಡಿಕೊಳ್ತಿದ್ದ ಫಿಟೆ°ಸ್ ತಯಾರಿ ನೆನೆದರೆ, ಈಗಲೂ ನಗು ಉಕ್ಕುತ್ತೆ! ಯಾರದೋ ರೂಮಿನಲ್ಲಿ ಕಂಪ್ಯೂಟರ್ ಬಂದರೆ, ಅಲ್ಲಿ ಗೇಮ್ ಆಡಿಯೇ ಆ ಸಿಸ್ಟಮ್ ಅನ್ನು ಲಗಾಡಿ ತೆಗೆಯುತ್ತಿದ್ದೆವು!
ಐಪಿಎಲ್ ಬೆಟ್ಟಿಂಗ್ ಕಟ್ಟಿ ಸೋತಾಗ, ಎಲ್ಲಿ ದುಡ್ ಕೊಡ್ಬೇಕಾಗುತ್ತೋ ಅಂತ “ಭೂಗತ’ರಾಗಿ ಓಡಾಡಿದ್ದು ಈಗಲೂ ನಗು ತರಿಸುತ್ತದೆ. ನಮ್ಮ ಪಕ್ಕದ ರೂಮಿನಲ್ಲಿ, ನಮಗೆ ಗೊತ್ತಿದ್ದವರ ಪೈಕಿ ಒಬ್ಬನ ಬಳಿ ಮಾತ್ರ ಬೈಕ್ ಇತ್ತು. ಅವನೋ ಯಾರಿಗೂ ಇಲ್ಲವೆನ್ನದೆ, ಎಲ್ಲ ಕಷ್ಟಗಳಿಗೂ ನೆರವಾಗುತ್ತಿದ್ದ. ರಾತ್ರಿ ಎಷ್ಟೊತ್ತಾದರೂ “ಲೇ ಶಿಷ್ಯ, ಗಾಡಿ ಬೇಕಿತ್ತಲೇ…’ ಅಂದರೆ ಸಾಕು, “ಕೀ ಅಲ್ಲಿದೆ ನೋಡು’ ಎನ್ನುತ್ತಿದ್ದ. “ಎಲ್ಲಿಗೆ? ಯಾಕೆ?’ ಎಂದು ಮರುಮಾತನಾಡದೆ ಗಾಡಿ ಕೊಡುತ್ತಿದ್ದ.
ಇಂಥ ಗೆಳೆಯರನ್ನೆಲ್ಲ ಬಿಟ್ಟು ಹೋಗಬೇಕಲ್ಲ ಎನ್ನುವ ದುಃಖ ಈಗ ಆವರಿಸುತ್ತಿದೆ. ಈಗ ಬದುಕು ಬೆಂಗಳೂರಿನತ್ತ… ಒಂದು ಕೆಲಸ ಹುಡುಕಲು… ಇಂಥ ಗೆಳೆಯರು ಆ ಮಹಾನಗರದಲ್ಲೂ ಸಿಗುತ್ತಾರಾ? ಕೃಪೆ ತೋರು, ದೇವರೇ…
ರಾಥೋಡ ಜಯಪ್ಪನಾಯ್ಕ