Advertisement

ಪಡುಪಣಂಬೂರು-ಬೆಳ್ಳಾಯರು ರೈಲ್ವೇ ಸಂಪರ್ಕ ರಸ್ತೆ

10:13 AM Feb 07, 2018 | |

ಪಡುಪಣಂಬೂರು: ಗ್ರಾಮದ ಮೂಲ ಸೌಕರ್ಯದ ಅಭಿವೃದ್ಧಿಗಾಗಿ ಸ್ವಂತ ಜಮೀನಿನ ಒಂದಷ್ಟು ಭಾಗವನ್ನು
ರಸ್ತೆಗೆಂದು ಬಿಟ್ಟುಕೊಟ್ಟರೂ ಗ್ರಾಮಸ್ಥರಿಗೆ ಮಾತ್ರ ಜಲ್ಲಿ ಕಲ್ಲು-ಮಿಶ್ರಿತ ರಸ್ತೆಯಲ್ಲಿ ಸಂಚರಿಸಲು ಅಸಾಧ್ಯವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಪಡು ಪಣಂಬೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೆಳ್ಳಾಯರು- ರೈಲ್ವೇ ನಿಲ್ದಾಣ ಸಂಪರ್ಕ ರಸ್ತೆಯ ಕಥೆ.

Advertisement

20 ವರ್ಷದ ಹಿಂದೆ
ಬೆಳ್ಳಾಯರು-ಕೆರೆಕಾಡು ಪರಿಶಿಷ್ಟ ಪಂಗಡದ ಕಾಲನಿಯಿಂದ ರೈಲ್ವೇ ನಿಲ್ದಾಣಕ್ಕೆ, ಅಲ್ಲಿಂದ ಚಂದ್ರಮೌಳೀಶ್ವರ ದೇವಸ್ಥಾನದ ದಕ್ಷಿಣ, ಉತ್ತರಕ್ಕೆ ರೈಲ್ವೇ ಮೇಲ್ಸೇತುವೆಯವರೆಗಿನ ಸಂಪರ್ಕ ರಸ್ತೆ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ. ಈ ರಸ್ತೆಯನ್ನು 20 ವರ್ಷದ ಹಿಂದೆ ಸ್ಥಳೀಯ ಗ್ರಾಮಸ್ಥರು ಗ್ರಾಮ ಪಂಚಾಯತ್‌ಗೆ ಹಸ್ತಾಂತರಿಸಿ ಅಭಿವೃದ್ಧಿಪಡಿಸಲು ಆಗ್ರಹಿಸಿದ್ದರು. ಆದರೆ ಒಮ್ಮೆ ಡಾಮರು ಹಾಕುವ ಪ್ರಯತ್ನವಾಗಿ ರಸ್ತೆಗೆ ಜಲ್ಲಿಕಲ್ಲುಗಳು ಬಂದು ಬಿದ್ದಿತೇ ವಿನಃ ಡಾಮರು ಭಾಗ್ಯ ಸಿಕ್ಕಿಲ್ಲ ಎಂಬ ಬೇಸರವನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತಾರೆ.

ದೊಡ್ಡ ದೊಡ್ಡ ಜಲ್ಲಿ ಕಲ್ಲುಗಳು ರಸ್ತೆಯ ಉದ್ದಕ್ಕೂ ಹರಡಿರುವುದರಿಂದ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.
ಈ ರಸ್ತೆಯಲ್ಲಿ ರಿಕ್ಷಾ  ಚಾಲಕರು ಸಂಚರಿಸಲು ಹಿಂಜರಿಯುತ್ತಿದ್ದಾರೆ. ಇದರಿಂದ ರಿಕ್ಷಾಕ್ಕೂ ಹಾನಿ ಎಂಬ
ಮಾತು ಚಾಲಕರಿಂದ ಕೇಳಿ ಬಂದಿದೆ. ಗ್ರಾಮಸ್ಥರು ರೈಲ್ವೇ ನಿಲ್ದಾಣದವರೆಗೆ ಬಂದು ಅನಂತರ ನಡೆದುಕೊಂಡೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ದ್ವಿಚಕ್ರ ವಾಹನಗಳ ಸಂಚಾರದಲ್ಲೂ ಸಹ ಕೆಲವೊಂದು ಅಡಚಣೆಯಾಗುತ್ತದೆ ಎಂಬ ಅಸಹಾಯಕತೆಯನ್ನು ಗ್ರಾಮಸ್ಥರು ಹೇಳಿಕೊಳ್ಳುತ್ತಿದ್ದಾರೆ. ಇಲ್ಲಿನ ಸ್ಥಳೀಯ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ, ಶಾಸಕ, ಸಂಸದರಿಗೆ ನೇರವಾಗಿ ಮನವಿ ಮಾಡಿಕೊಂಡಿದ್ದರೂ ಭರವಸೆ ಸಿಕ್ಕಿದೇ ಹೊರತು ಪರಿಹಾರ ಮಾತ್ರ ಸಿಕ್ಕಿಲ್ಲ.

ಈ ಬಗ್ಗೆ ಸ್ಥಳೀಯ ಪಂಚಾಯತ್‌ ಸದಸ್ಯರಾದ ವಿನೋದ್‌ ಎಸ್‌. ಸಾಲ್ಯಾನ್‌ ಪ್ರತಿಕ್ರಿಯಿಸಿ, ಪಂಚಾಯತ್‌ ನಿಂದ ಈ ರಸ್ತೆಯ ಅಭಿವೃದ್ಧಿಗೆ ಅನುದಾನದ ಕೊರತೆ ಇದೆ. ಆದರೂ ಸಹ ಕಳೆದ ವರ್ಷ ಸಚಿವ ಆಂಜನೇಯ ಅವರು ಗ್ರಾಮ ವಾಸ್ತವ್ಯ ಹೊಂದಿದಾಗ ಅವರಲ್ಲಿ ಪಂಚಾಯತ್‌ ಮೂಲಕ ಮನವಿ ಮಾಡಿಕೊಂಡಿದ್ದೇವೆ. ಸಮಾಜ ಕಲ್ಯಾಣ ಇಲಾಖೆಯಿಂದ ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂಬ ಭರವಸೆ ಸಿಕ್ಕಿದೆ ಎಂದರು.

Advertisement

ಚುನಾವಣೆಯ ಬಹಿಷ್ಕಾರ 
ರಸ್ತೆ ದುರವಸ್ಥೆಯಿಂದ ಬೇಸತ್ತಿರುವ ಗ್ರಾಮಸ್ಥರು ತಮ್ಮ ಜಮೀನು ಉಚಿತವಾಗಿ ನೀಡಿದ್ದರೂ ಸಹ ಅಭಿವೃದ್ಧಿಯಾಗಿಲ್ಲ. ಈ ಬಗ್ಗೆ ಮನವಿಯನ್ನು ನಿರಂತರವಾಗಿ ನೀಡಿದ್ದರೂ ಸಹ ಪ್ರಯೋಜನ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ರಸ್ತೆ
ಡಾಮರು ಆಗುವವರೆಗೆ ಸಾರ್ವತ್ರಿಕ ಚುನಾವಣೆಯಲ್ಲಿ ಪಾಲ್ಗೊಳ್ಳದೆ ಮತದಾನವನ್ನು ಬಹಿಷ್ಕರಿಸುತ್ತೇವೆ ಎಂದು ಪಂಚಾಯತ್‌ಗೆ ನೀಡಿದ 31 ಮಂದಿ ಗ್ರಾಮಸ್ಥರ ಸಹಿಯುಳ್ಳ ಮನವಿಯಲ್ಲಿ ಉಲ್ಲೇಖಿಲಾಗಿದೆ. 

ಅನುದಾನದ ಕೊರತೆ
ಈ ರಸ್ತೆಯ ಆರಂಭದ ಕೆರೆಕಾಡು ಮುಖ್ಯ ರಸ್ತೆಯಿಂದ ಪರಿಶಿಷ್ಟ ಪಂಗಡದ ಕಾಲನಿಗೆ ಪ್ರವೇಶಿಸುವಲ್ಲಿ ಜಿ.ಪಂ. ಸದಸ್ಯರ ನೆರವಿನಿಂದ ರೂ. 2 ಲಕ್ಷದ ವೆಚ್ಚದಲ್ಲಿ ಡಾಮರು ಸಹಿತ ಕಾಂಕ್ರೀಟ್‌ ಅಳವಡಿಸಲಾಗಿದೆ. ಅದರ ಮುಂದುವರಿದ ಭಾಗದಲ್ಲಿ ರಸ್ತೆಯ ಡಾಮರು ಕಾಮಗಾರಿಗೆ ದೊಡ್ಡ ಮೊತ್ತದ ಅನುದಾನ ಅಗತ್ಯವಿದೆ. ಗ್ರಾಮ ಪಂಚಾಯತ್‌ಗೆ ಗ್ರಾಮಸ್ಥರು ಮನವಿ ಮಾಡಿಕೊಂಡಿರುವುದರಿಂದ ಪರಿಶೀಲನೆ ನಡೆಸಿ ನೇರವಾಗಿ ಶಾಸಕರು ಹಾಗೂ ಸಂಸದವರಿಗೆ ಕಳುಹಿಸಿದ್ದೇವೆ. ವಿವಿಧ ಸಂಬಂಧಿತ ಇಲಾಖೆಯ ಗಮನಕ್ಕೂ ತಂದಿದ್ದೇವೆ.
-ಮೋಹನ್‌ದಾಸ್‌, ಅಧ್ಯಕ್ಷರು,
ಪಡುಪಣಂಬೂರು ಗ್ರಾ.ಪಂ.

ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next