ಬೆಂಗಳೂರು: ತೋಟದ ಬೆಳಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ನಿಯಮಿತ (ಹಾಪ್‌ಕಾಮ್ಸ್), ಫೆ.18ರಿಂದ ಮಾರ್ಚ್ ಅಂತ್ಯದವರೆಗೆ ಶೇ.10ರ ರಿಯಾಯ್ತಿ ದರದಲ್ಲಿ “ದ್ರಾಕ್ಷಿ ಮತ್ತು ಕಲ್ಲಂಗಡಿ ಮಾರಾಟ ಮೇಳ’ವನ್ನು ಆಯೋಜಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾಪ್‌ಕಾಮ್ಸ್ ಅಧ್ಯಕ್ಷ ಎ.ಎಸ್.ಚಂದ್ರೇಗೌಡ, ಫೆ.18ರಂದು ಬೆಳಗ್ಗೆ 11 ಗಂಟೆಗೆ ಹಡ್ಸನ್ ವೃತ್ತದ ಹಾಪ್‌ಕಾಮ್ಸ್ ಮಾರಾಟ ಮಳಿಗೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತೋಟಗಾರಿಕಾ ಸಚಿವ ಎಂ.ಸಿ.ಮನಗೊಳಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ.
ಕೃಷಿ ಸಚಿವ ಶಿವಶಂಕರ್ ರೆಡ್ಡಿ, ಶಾಸಕರಾದ ರಾಮಲಿಂಗಾರೆಡ್ಡಿ, ಆರ್.ರೋಷನ್ ಬೇಗ್, ತೋಟಗಾರಿಕಾ ಇಲಾಖೆ ಕಾರ್ಯದರ್ಶಿ ಮಹೇಶ್ವರ್ ರಾವ್, ನಿರ್ದೇಶಕ ವೈ.ಎಸ್.ಪಾಟೀಲ್ ಮತ್ತಿತರರು ಭಾಗವಹಿಸುವರು ಎಂದು ತಿಳಿಸಿದರು.
ಉತ್ತಮ ವಹಿವಾಟು ನಿರೀಕ್ಷೆ: ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಎನ್.ಪ್ರಸಾದ್ ಮಾತನಾಡಿ, 2017-18ನೇ ಸಾಲಿನಲ್ಲಿ 311 ಟನ್ ದ್ರಾಕ್ಷಿ ಮತ್ತು 864.49 ಟನ್ ಕಲ್ಲಂಗಡಿ ವಹಿವಾಟು ನಡೆದಿತ್ತು. ಈ ವರ್ಷ ಕಲ್ಲಂಗಡಿ ಮತ್ತು ದ್ರಾಕ್ಷಿ ಉತ್ತಮ ಬೆಳೆ ಬಂದಿದ್ದು 500 ಮೆಟ್ರಿಕ್ ಟನ್ ದ್ರಾಕ್ಷಿ ಮತ್ತು 1500 ಮೆಟ್ರಿಕ್ ಟನ್ ಕಲ್ಲಂಗಡಿ ಮಾರಾಟ ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ವಿವಿಧ ತಳಿಗಳ ದ್ರಾಕ್ಷಿ, ಕಲ್ಲಂಗಡಿ: ಮೇಳದಲ್ಲಿ ಬೆಂಗಳೂರು ನೀಲಿ, ಶರದ್ ಸೀಡ್‌ಲೆಸ್, ಕೃಷ್ಣ ಶರದ್, ತಾಜ್ ಗಣೇಶ್, ಇಂಡಿಯನ್ ರೆಡ್‌ಗೊಬ್, ಸೂಪರ್ ಸೋನಾಕ, ಮಾಣಿಕ ಚಮನ್, ಜಂಬೂ ಶರದ್, ಆಸ್ಟ್ರೇಲಿಯಾ ರೆಡ್ ಗ್ಲೋಬ್, ಮತ್ತು ದ್ರಾಕ್ಷಿ ರಸಕ್ಕೆ ಉಪಯೋಗಿಸುವ ತಳಿಗಳ ಜತೆಗೆ 13ರಿಂದ 15 ತಳಿಯ ದ್ರಾಕ್ಷಿ ದೊರೆಯಲಿವೆ.
ನಾಮದಾರಿ, ಕಿರಣ್, ಹಳದಿ ತಿರುಳಿನ ಕಲ್ಲಂಗಡಿ ಸೇರಿದಂತೆ ಸುಮಾರು ನಾಲ್ಕೈದು ತಳಿಯ ಕಲ್ಲಂಗಡಿಗಳು ಕೂಡ ಮಾರಾಟಕ್ಕೆ ಲಭ್ಯವಿರಲಿವೆ. ಖರ್ಜೂರ, ಕಿತ್ತಳೆ, ಚಕ್ಕೋತ, ಒಣದ್ರಾಕ್ಷಿ, ಸೇರಿದಂತೆ ಹಲವು ಒಣ ಆಹಾರ ಪದಾರ್ಥಗಳು ಮೇಳದಲ್ಲಿ ದೊರೆಯಲಿವೆ.