Advertisement

ಹೊಸ ರೈಲು ಮಾರ್ಗಕ್ಕೆ ಸಿಗುವುದೇ ಅನುದಾನ

03:09 PM Feb 01, 2018 | Team Udayavani |

ಚಾಮರಾಜನಗರ: ಕೇಂದ್ರ ಸರ್ಕಾರದ ಸಾಮಾನ್ಯ ಬಜೆಟ್‌ನಲ್ಲೇ ರೈಲ್ವೆ ಬಜೆಟ್‌ ವಿಲೀನವಾಗಿರುವುದರಿಂದ ಜನತೆ ಜಿಲ್ಲೆಗೇನು ದೊರಕಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಜಿಲ್ಲೆಗೆ ಯಾವೊಂದು ಯೋಜನೆಯೂ ದೊರಕದೇ ಶೂನ್ಯ ಸಂಪಾದನೆಯಾಗಿತ್ತು. ಈ ಬಾರಿಯಾದರೂ ಈ ಬಜೆಟ್‌ನಿಂದ ಆಶಾದಾಯಕ ಕೊಡುಗೆ ದೊರಕಬಹುದೇ ಎಂಬುದು ಕುತೂಹಲ ಮೂಡಿದೆ.

Advertisement

ರೈಲ್ವೆ ಬಜೆಟ್‌ ಸಾಮಾನ್ಯ ಬಜೆಟ್‌ನಲ್ಲೇ ಅಡಕಗೊಳಿಸಿ ಕಳೆದ ವರ್ಷದಿಂದ ಬಜೆಟ್‌ ಮಂಡಿಸಲಾಗುತ್ತಿದೆ. ಕಳೆದ ಬಾರಿ ಸಾಮಾನ್ಯ ಬಜೆಟ್‌ನಲ್ಲಿ ರೈಲ್ವೆ ಸೇರಿ ಜಿಲ್ಲೆಗೆ ಯಾವ ಯೋಜನೆಯಾಗಲಿ, ಅನುದಾನವಾಗಲಿ ದೊರಕಿರಲಿಲ್ಲ.

ನಿರೀಕ್ಷೆ‌ಗಳು: ಬೆಂಗಳೂರಿನ ಹೆಜಾಲದಿಂದ, ಕನಕಪುರ, ಮಳವಳ್ಳಿ, ಕೊಳ್ಳೇಗಾಲ ಮೂಲಕ ಚಾಮರಾಜನಗರ ತಲುಪುವ 129 ಕಿ.ಮೀ. ಉದ್ದದ, 1330 ಕೋಟಿ ರೂ. ವೆಚ್ಚದ ನೂತನ ರೈಲ್ವೆ ಮಾರ್ಗವನ್ನು ಕಳೆದ ಯುಪಿಎ ಸರ್ಕಾರದ ಅವಧಿಯಲ್ಲಿ, ಅಂದಿನ ರೈಲ್ವೆ ಸಚಿವ ಮಲ್ಲಿಕಾರ್ಜುನಖರ್ಗೆ ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದರು. ಅದಕ್ಕಾಗಿ ಪ್ರಥಮ ಹಂತವಾಗಿ 10 ಕೋಟಿ ರೂ. ನೀಡಿದ್ದರು. ಕಳೆದ ಬಜೆಟ್‌ನಲ್ಲಿ ಈ ಮಾರ್ಗಕ್ಕಾಗಿ ಯಾವುದೇ ಅನುದಾನ ಬಿಡುಗಡೆ ಯಾಗಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಅನುದಾನ ನಿರೀಕ್ಷಿಸಲಾಗಿದೆ. 

ಕವಲಂದೆಯಲ್ಲಿ ರೈಲ್ವೆ ಕ್ರಾಸಿಂಗ್‌ ಪಾಯಿಂಟ್‌: ಚಾಮರಾಜನಗರದಿಂದ ನಂಜನಗೂಡಿಗೆ 35 ಕಿ.ಮೀ. ಅಂತರವಿದ್ದು, ಯಾವುದೇ ಕ್ರಾಸಿಂಗ್‌ ಪಾಯಿಂಟ್‌ ಇಲ್ಲ. ಹೀಗಾಗಿ ರೈಲು ತಡವಾಗಿ ಹೊರಟಾಗ, ರೈಲ್ವೆ ವ್ಯಾಗನ್‌ಗಳು ಸಂಚರಿಸಿದಾಗ ರೈಲುಗಳು ನಂಜನಗೂಡು ಅಥವಾ ನಗರದಲ್ಲೇ ತಡವಾಗಿ ಹೊರಡಬೇಕಾಗಿದೆ. ಕವಲಂದೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ, ರೈಲ್ವೆ ಕ್ರಾಸಿಂಗ್‌ ಪಾಯಿಂಟ್‌ ಮಾಡಿದರೆ ಬಹಳ ಅನುಕೂಲವಾಗಲಿದೆ.
 
 ಸ್ವತ್ಛತಾ ಘಟಕ: ಚಾಮರಾಜ ನಗರ ರೈಲ್ವೆ ನಿಲ್ದಾಣದಲ್ಲಿ ಸ್ವತ್ಛತಾ ಘಟಕ ಸ್ಥಾಪಿಸಬೇಕು. ಮೈಸೂರಿನಲ್ಲಿರುವ ಸ್ವತ್ಛತಾ ಘಟಕದಲ್ಲಿ ಈಗ ಹೆಚ್ಚು ಒತ್ತಡವಿದ್ದು, ಅನೇಕ ರೈಲುಗಳು ಅಲ್ಲೇ ನಿಲ್ಲಬೇಕಾಗಿದೆ. ಅದಕ್ಕೆ ಸ್ಥಳಾವಕಾಶವೂ ಇಲ್ಲದಂತಾಗಿದೆ. ಚಾಮರಾಜನಗರದಲ್ಲಿ ಸ್ವತ್ಛತಾ ಘಟಕ ಸ್ಥಾಪಿಸಿದರೆ ಮೈಸೂರಿನಲ್ಲಿ ನಿಲ್ಲುವ ರೈಲುಗಳು ಚಾಮರಾಜನಗರಕ್ಕೆ ಬರುತ್ತವೆ. ಪ್ರಯಾಣಿಕರಿಗೂ ಅನುಕೂಲವಾಗುತ್ತದೆ. ಅಲ್ಲದೇ ಇಲ್ಲಿನ ನಿಲ್ದಾಣದಲ್ಲಿ ರೈಲುಗಳೂ ತಂಗಲು ಅವಕಾಶವಾಗುತ್ತದೆ.

ನಂಜನಗೂಡು-ಮೈಸೂರು ರೈಲುಗಳ ಸಂಚಾರ ಹೆಚ್ಚಿಸಬೇಕಿದೆ: ನಂಜನಗೂಡು ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಮೈಸೂರು, ಚಾಮರಾಜನಗರದಿಂದ ಬರುವುದರಿಂದ ರೈಲುಗಳ ಸಂಚಾರ ಮಾಡಬೇಕಾಗಿದೆ. ಅಲ್ಲದೆ, ಚಾಮರಾಜನಗರದಿಂದ ಬೆಂಗಳೂರಿಗೆ ಸೀಮಿತವಾಗಿ ಎಕ್ಸ್‌ಪ್ರೆಸ್‌ ರೈಲೊಂದನ್ನು ಮಂಜೂರು ಮಾಡಬೇಕೆಂಬುದು ಪ್ರಯಾಣಿಕರ ಒತ್ತಾಯವಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ರೈಲ್ವೆಯ ಈ ಬೇಡಿಕೆಗಳಲ್ಲಿ ಕೆಲವಾದರೂ ಈಡೇರಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ ಜನತೆ. 

Advertisement

ಸಂಸದರ ಮನವಿ ರೈಲ್ವೆ ಬಜೆಟ್‌ ಅಲ್ಲದೇ ಸಾಮಾನ್ಯ ಬಜೆಟ್‌ನಲ್ಲಿ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು (NಐಕಉR) ಬಜೆಟ್‌ನಲ್ಲಿ ಮಂಜೂರು ಮಾಡಿಕೊಡುವಂತೆ ಸಂಸದ ಆರ್‌.ಧ್ರುವನಾರಾಯಣ ಕೇಂದ್ರ ಸಚಿವ ಅನಂತಕುಮಾರ್‌ರಿಗೆ ಮನವಿ ಸಲ್ಲಿಸಿದ್ದಾರೆ. ಈ ಸಂಸ್ಥೆ ದೇಶದ 7 ರಾಜ್ಯಗಳಲ್ಲಿ ಸ್ಥಾಪಿತವಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಇಲ್ಲ. ಅಭಿವೃದ್ಧಿ ಹೊಂದುತ್ತಿರುವ ಚಾಮರಾಜನಗರ ಜಿಲ್ಲೆಗೆ ಈ ಸಂಸ್ಥೆಯನ್ನು ಮಂಜೂರು ಮಾಡಿಕೊಡಬೇಕು ಎಂಬುದು ಸಂಸದರ ಬೇಡಿಕೆ. ಹಾಗೆಯೇ ಜಿಲ್ಲೆಗೆ ಇನ್ನೊಂದು ನವೋದಯ ವಿದ್ಯಾಲಯವನ್ನು ಮಂಜೂರು ಮಾಡಿಕೊಡಬೇಕೆಂದು ಸಚಿವ ಪ್ರಕಾಶ್‌ ಜಾವಡೇಕರ್‌ರಿಗೆ ಸಂಸದರು ಮನವಿ ಸಲ್ಲಿಸಿದ್ದಾರೆ.

ರೈಲುಸಂಚಾರ ವಿಸ್ತರಿಸಿ ರಾಜ್ಯದ ಚಾಮರಾಜನಗರ ರಾಜ್ಯದ ಕೊನೆ ರೈಲ್ವೆ ನಿಲ್ದಾಣವಾಗಿದೆ. ಮೈಸೂರಿಗೆ ಬರುವ ಅನೇಕ ರೈಲುಗಳನ್ನು ಚಾಮರಾಜನಗರಕ್ಕೆ ವಿಸ್ತರಿಸಿದರೆ ಪ್ರಯಾಣಿಕರಿಗೆ ಬಹಳ ಅನುಕೂಲವಾಗುತ್ತದೆ. ಜಿಲ್ಲೆಯ ಜನತೆಗೆ ಮುಖ್ಯವಾಗಿ ಹುಬ್ಬಳ್ಳಿ-ಧಾರವಾಡದಿಂದ ಮೈಸೂರಿಗೆ ಬರುವ, ಹಾಗೂ ಶಿವಮೊಗ್ಗದಿಂದ ಮೈಸೂರಿಗೆ ಬರುವ ರೈಲನ್ನು ಚಾಮರಾಜನಗರಕ್ಕೆ ವಿಸ್ತರಿಸಬೇಕೆಂಬುದು ಪ್ರಯಾಣಿಕರ ಒತ್ತಾಯವಾಗಿದೆ. ಹಾಗೆಯೇ ಚಾಮರಾಜನಗರದಿಂದ ಮೈಸೂರಿಗೆ ಬೆಳಗ್ಗೆ 10.30 ರ ನಂತರ ಮಧ್ಯಾಹ್ನ 3 ಗಂಟೆವರೆಗೆ ರೈಲು ಸಂಚಾರ ಇಲ್ಲ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಿದ್ದು ಈ ಅವಧಿಯಲ್ಲಿ ಇನ್ನೊಂದು ಹೆಚ್ಚುವರಿ ರೈಲನ್ನು ಕಾರ್ಯಾಚರಣೆ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
 
ಕೆ.ಎಸ್‌.ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next