Advertisement

ಅನುದಾನಕೆ ಕಾಯುತಿಹರು ಏಕಪೋಷಕ ಆರೈಕೆ ಮಕ್ಕಳು

01:13 AM Jan 31, 2022 | Team Udayavani |

ಉಡುಪಿ: ಕೋವಿಡ್‌ನಿಂದ ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ಏಕ ಪೋಷಕ ಆರೈಕೆಯಲ್ಲಿರುವ ಮಕ್ಕಳ ಸಹಿತವಾಗಿ ಕೋವಿಡೇತರ ಕಾರಣದಿಂದ ಏಕ ಪೋಷಕ ಆರೈಕೆಯಲ್ಲಿರುವ ಮಕ್ಕಳ ಪೋಷಣೆಗೆ ಸರಕಾರದಿಂದ ಅನುದಾನವೇ ಬಿಡುಗೆಯಾಗಿಲ್ಲ.

Advertisement

ಕೊರೊನಾದಿಂದ ಅನೇಕರು ಜೀವ ಕಳೆದುಕೊಂಡಿದ್ದಾರೆ. ಮಕ್ಕಳು, ಇಡೀ ಕುಟುಂಬ ಅನಾಥವಾಗಿರುವ ನಿದರ್ಶನಗಳಿವೆ. ಕೊರೊನಾ ಆವರಿಸಿ ಒಂದೂವರೆ ವರ್ಷ ಕಳೆದರೂ ಇಂತಹ ಮಕ್ಕಳ ಪ್ರಾಯೋಜಕತ್ವಕ್ಕೆ ಅನುದಾನ ಮಾತ್ರ ಬಿಡುಗಡೆ ಆಗಿಲ್ಲ.

ಕೊರೊನಾದಿಂದ ತಂದೆ ಅಥವಾ ತಾಯಿಯನ್ನು ಕಳೆದುಕೊಂಡ ಜಿಲ್ಲೆಯ 65 ಗಂಡು, 64 ಹೆಣ್ಣು ಮಕ್ಕಳು ಏಕ ಪೋಷಕರ ಆರೈಕೆಯಲ್ಲಿದ್ದಾರೆ. 129 ಮಕ್ಕಳಲ್ಲಿ 31ಮಕ್ಕಳಿಗೆ ಪ್ರಾಯೋಜಕತ್ವ ಯೋಜನೆ ಅನ್ವಯವಾಗುವುದಿಲ್ಲ. 89 ಮಕ್ಕಳಿಗೆ ಪ್ರಾಯೋಜಕತ್ವ ಅನ್ವಯವಾಗುತ್ತದೆ.

ಕೊರೊನೇತರ ಕಾರಣದಿಂದ 85 ಗಂಡು, 93 ಹೆಣ್ಣು ಮಕ್ಕಳು ಏಕಪೋಷಕ ಆರೈಕೆಯಲ್ಲಿದ್ದಾರೆ. ಕೊರೊನೇತರ ಕಾರಣದಿಂದ 10 ಗಂಡು, 5 ಹೆಣ್ಣು ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಈ ಮಕ್ಕಳ ಆರೈಕೆಗೂ ಅನುದಾನ ಬಂದಿಲ್ಲ.

ಪ್ರಾಯೋಜಕತ್ವ ಯೋಜನೆ
ಏಕ ಪೋಷಕರ ಆರೈಕೆಯಲ್ಲಿರುವ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಪ್ರಾಯೋಜಕತ್ವ ಯೋಜನೆಯಡಿ ಪ್ರತಿ ತಿಂಗಳು ಮೂರು ವರ್ಷಕ್ಕೆ ಅನ್ವಯವಾಗುವಂತೆ ಒಂದು ಸಾವಿರ ರೂ. ಸಹಾಯಧನ ನೀಡಲಾಗುತ್ತದೆ.ಜಿಲ್ಲೆಯಲ್ಲಿ 332 ಮಕ್ಕಳನ್ನು ಈ ರೀತಿಯಲ್ಲಿ ಗುರುತಿಸಿದ್ದು, 228 ಮಕ್ಕಳು ಯೋಜನಾ ಸೌಲಭ್ಯ ಪಡೆಯಲು ಅರ್ಹರಿದ್ದಾರೆ. 72 ಮಕ್ಕಳು 0-6ವರ್ಷದೊಳಗಿನವ ರಾಗಿರುವುದಿಂದ ಈ ಯೋಜನೆ ಇವರಿಗೆ ಅನ್ವಯಿಸುತ್ತಿಲ್ಲ.

Advertisement

ಯೋಜನೆಯ ಸ್ಪಷ್ಟತೆಯಿಲ್ಲ
ಕೊರೊನಾದಿಂದ ಏಕ ಪೋಷಕ ಆರೈಕೆಯಲ್ಲಿ ಇರುವ ಮಕ್ಕಳು ಹಾಗೂ ಕೊರೊನೇತರ ಕಾರಣ
ದಿಂದ ಏಕ ಪೋಷಕ ಆರೈಕೆಯಲ್ಲಿರುವ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣ ಘಟಕದಿಂದ ಗುರುತಿಸಲಾಗಿದೆ. ಪ್ರಾಯೋಜಕತ್ವ ಯೋಜನೆಯಡಿ ಸಹಾಯಧನ ನೀಡಲಾಗುತ್ತದೆ. ಕೊರೊನಾದಿಂದ ಹೀಗಾಗಿರುವ ಮಕ್ಕಳಿಗೆ ವಿಶೇಷ ಪ್ರಾಯೋಜಕತ್ವ ಯೋಜನೆಯಿದೆ. ಆದರೆ, ಮಾರ್ಗಸೂಚಿ ಇನ್ನೂ ಬಂದಿಲ್ಲ. 0-6 ವರ್ಷದ ಮಕ್ಕಳಿಗೆ ಇದು ಅನ್ವಯವಾಗುವುದಿಲ್ಲ. ಇಂತಹ ಮಕ್ಕಳಿಗೆ ಏಕಪೋಷಕ ಯಾರಿದ್ದಾರೋ ಅವರೇ ಆರೈಕೆ ನೋಡಿಕೊಳ್ಳಬೇಕು. ಸರಕಾರದ ಸಹಾಯಧನ ಸಿಗುವುದಿಲ್ಲ. ಆ ಮಗು ಶಾಲೆಗೆ ಸೇರಿದ ಆನಂತರದ ಮೂರು ವರ್ಷ ಮಾತ್ರ
ಸಹಾಯಧನ ನೀಡಲಾಗುತ್ತದೆ. ಹೀಗಾಗಿ ಇಡೀಯೋಜನೆಯಲ್ಲೇ ಸ್ಪಷ್ಟತೆಯಿಲ್ಲ ಎಂಬ ಆರೋಪವಿದೆ.

ಅನುದಾನ ಬಂದಿಲ್ಲ
ಕೊರೊನಾದಿಂದ ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ಏಕ ಪೋಷಕ ಆರೈಕೆಯಲ್ಲಿರುವ ಮಕ್ಕಳು ಹಾಗೂ ಕೊರೊನೇತರ ಕಾರಣದಿಂದ ಏಕಪೋಷಕ ಆರೈಕೆಯಲ್ಲಿರುವ ಮಕ್ಕಳ ಪ್ರಾಯೋಜಕತ್ವ, ವಿಶೇಷ ಪ್ರಾಯೋಜಕತ್ವಕ್ಕೆ ಸರಕಾರದಿಂದ ಅನುದಾನ ಬಂದಿಲ್ಲ. ಅನುದಾನಕ್ಕಾಗಿ ಕಾಯುತ್ತಿದ್ದೇವೆ.
-ಕುಮಾರ ನಾಯ್ಕ,
ಅಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಉಡುಪಿ

-  ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next