Advertisement

ಪೊಲೀಸರ ಮಕ್ಕಳ ಸಂಭ್ರಮಕ್ಕೆ ಜುಜುಬಿ ಅನುದಾನ

03:07 PM Jan 01, 2018 | |

ಮಂಗಳೂರು: ಪೊಲೀಸರ ಮಕ್ಕಳಿಗೆ ನವೆಂಬರ್‌ ತಿಂಗಳಲ್ಲಿ ಮಕ್ಕಳ ದಿನಾಚರಣೆ ನಡೆಸಲು ಸರಕಾರದಿಂದ ಒಂದು ಉಪ ವಿಭಾಗಕ್ಕೆ ಕೇವಲ 1,000 ರೂ. ನೀಡಲಾಗುತ್ತಿದ್ದು, ಎಲ್ಲರಲ್ಲೂ ಆಶ್ಚರ್ಯ ಮೂಡುವಂತಾಗಿದೆ. ಈ ಅಲ್ಪ ಮೊತ್ತದಲ್ಲಿ ಮಕ್ಕಳ ದಿನವನ್ನು ಸರಕಾರದ ಹೆಸರಿನಲ್ಲಿ ಆಚರಿಸಬೇಕೇ? ಅಥವಾ ಪೊಲೀಸರೆಂದರೆ ಸರಕಾರಕ್ಕೆ ಅಷ್ಟೊಂದು ತಾತ್ಸಾರವೇ ಎಂಬ ಜಿಜ್ಞಾಸೆ ವ್ಯಕ್ತವಾಗಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯನ್ನು ಗಣನೆಗೆ ತೆಗೆದುಕೊಂಡರೆ ಪೊಲೀಸ್‌ ಇಲಾಖೆಯ ಒಂದೊಂದು ಉಪ ವಿಭಾಗದಲ್ಲಿ 300- 350 ಮಂದಿ ಪೊಲೀಸರು, 180ರಷ್ಟು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮತ್ತು 400 ಮಂದಿ ನಗರ ಸಶಸ್ತ್ರ ಮೀಸಲು ಪಡೆ ಸಿಬಂದಿಯಿದ್ದಾರೆ. ಇವರಲ್ಲಿ ಶೇ. 40ರಷ್ಟು  ಪೊಲೀಸರಿಗೆ ಚಿಕ್ಕ ಮಕ್ಕಳಿರಬಹುದೆಂದು ಅಂದಾಜಿಸಲಾಗಿದೆ. 

ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ  ಬಂಟ್ವಾಳ ಮತ್ತು ಪುತ್ತೂರು ಉಪ ವಿಭಾಗ, ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಉತ್ತರ, ಮಧ್ಯ ಮತ್ತು ದಕ್ಷಿಣ  ಸಹಿತ ಒಟ್ಟು 5 ಉಪ ವಿಭಾಗಗಳಿವೆ. ಇವುಗಳಲ್ಲಿ  ಸುಮಾರು 2,400  ಪೊಲೀಸರಿದ್ದಾರೆ.  ಜಿಲ್ಲೆಯ ವ್ಯಾಪ್ತಿ ದೊಡ್ಡದಿರುವುದರಿಂದ ಎಲ್ಲ 5 ವಿಭಾಗಗಳೂ ಒಟ್ಟು ಸೇರಿ ಕಾರ್ಯಕ್ರಮ ನಡೆಸಲು ಸಾಧ್ಯವಾಗು ತ್ತಿಲ್ಲ. ಹಾಗಾಗಿ ಜಿಲ್ಲಾ ಪೊಲೀಸ್‌ನ 2 ಉಪ ವಿಭಾಗಗಳು ಸೇರಿ ಹಾಗೂ ಮಂಗಳೂರು ಕಮಿಷನರೆಟ್‌ನ ದಕ್ಷಿಣ ಮತ್ತು ಮಧ್ಯ ಉಪ ವಿಭಾಗಗಳು ಒಂದಾಗಿ ಹಾಗೂ ಉತ್ತರ ಉಪ ವಿಭಾಗ ಪ್ರತ್ಯೇಕವಾಗಿ ಪೊಲೀಸ್‌ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಸುವುದು ರೂಢಿ. 

ಸರಕಾರ ಒದಗಿಸುವ ಪುಡಿಗಾಸು ಮಕ್ಕಳ ದಿನ ಆಚರಿಸಲು ಏನೇನೂ ಸಾಕಾಗುತ್ತಿಲ್ಲ. ಸಮಾಜಕ್ಕೆ ರಕ್ಷಣೆ ಒದಗಿಸುವ ಪೊಲೀಸರ ಮಕ್ಕಳ ಸಂಭ್ರ ಮಕ್ಕೆ ಸರಕಾರ ಒದಗಿಸುವುದು ಇಷ್ಟೇನಾ ಎಂಬ ಪ್ರಶ್ನೆಯನ್ನು ಪೊಲೀಸರು ಮಾತ್ರವಲ್ಲ, ಜನ ಸಾಮಾನ್ಯರೂ ಕೇಳುತ್ತಿದ್ದಾರೆ. ಪ್ರಾಯೋಜಕರ ಮೊರೆ ಹೋಗಿ ಮಕ್ಕಳ ದಿನಾಚರಣೆ ನಡೆಸುವುದು ಪೊಲೀಸರಿಗೆ ಅನಿವಾರ್ಯವಾಗಿದೆ. 

ಲಾಗಾಯ್ತಿನಿಂದ  1000 ರೂ.  
ಈ ಕಡಿಮೆ ಅನುದಾನ ಇತ್ತೀಚಿನ ಬೆಳವಣಿಗೆ ಏನಲ್ಲ; ಇದು ಲಾಗಾಯ್ತಿನಿಂದ ನಡೆದು ಬಂದ ಸಂಪ್ರದಾಯ. ಹಾಗಾಗಿ ಎರಡು- ಮೂರು ಉಪ ವಿಭಾಗಗಳ ಪೊಲೀಸರು ಒಟ್ಟು  ಸೇರಿ ಪ್ರಾಯೋಜಕರ ಸಹಕಾರ ಪಡೆದು ಜತೆಯಾಗಿ ಮಕ್ಕಳ ದಿನವನ್ನು ಆಚರಿಸುತ್ತಾರೆ. 

Advertisement

ಅನುದಾನ ಹೆಚ್ಚಿಸುವಂತೆ ಪೊಲೀಸ್‌ ಅಧಿಕಾರಿಗಳು ಹಲವು ಬಾರಿ ಮನವಿ ಮಾಡಿದರೂ ಸರಕಾರ ದಿಂದ  ಸ್ಪಂದನೆ ದೊರೆತಿಲ್ಲ. ಈ ಹಿಂದೆ ಅಜಯ್‌ ಕುಮಾರ್‌ ಸಿಂಗ್‌ (2012-13)  ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಪೊಲೀಸ್‌ ಠಾಣೆಗಳಿಗೆ ನೀಡಲಾಗುತ್ತಿದ್ದ ಮಾಸಿಕ ಸ್ಟೇಷನರಿ ಬಿಲ್‌ ಅನ್ನು 1,000ದಿಂದ 5,000 ರೂ. ಗಳಿಗೆ ಏರಿಸಿದ್ದರು.  ಪ್ರಕರಣಗಳ ತನಿಖೆಗೆ ತೆರಳುವ ಪೊಲೀಸ್‌ ಅಧಿಕಾರಿ/ ಸಿಬಂದಿಗೆ ಇನ್‌ ವೆಸ್ಟಿಗೇಶನ್‌ ಬಿಲ್‌ ಪಾವತಿಗೂ ವ್ಯವಸ್ಥೆ ಮಾಡಿದ್ದರು. ಆದರೆ ಮಕ್ಕಳ ದಿನಾಚರಣೆ ಅನುದಾನ ವನ್ನು ಹೆಚ್ಚಿಸಿರಲಿಲ್ಲ ಎಂದು  ಪೊಲೀಸ್‌ ಸಿಬಂದಿ ಒಬ್ಬರು ತಿಳಿಸಿದ್ದಾರೆ.  

ಹಿಲರಿ ಕ್ರಾಸ್ತಾ 

Advertisement

Udayavani is now on Telegram. Click here to join our channel and stay updated with the latest news.

Next