Advertisement

ಅನುದಾನ ಬಿಡುಗಡೆ ಬಾಕಿ: ಗ್ರಂಥಾಲಯ ಕಾಮಗಾರಿಗೆ ಗ್ರಹಣ

03:24 PM Jan 03, 2018 | Team Udayavani |

ಸುಳ್ಯ:ತಾಲೂಕಿನ 10 ಲಕ್ಷ ರೂಪಾಯಿ ವೆಚ್ಚದ ಉದ್ದೇಶಿತ ಎರಡು ಸಾರ್ವಜನಿಕ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಅನುದಾನ ಪೂರ್ಣ ಬಿಡುಗಡೆಯಾಗದೆ ಎರಡು ವರ್ಷಗಳಿಂದ ಯೋಜನೆ ನನೆಗುದಿಗೆ ಬಿದ್ದಿದೆ. ಪ್ರತೀ ಗ್ರಾಮ ಪಂಚಾಯತ್‌ನಲ್ಲಿ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಿ ಪ್ರಾಥಮಿಕ ಆವಶ್ಯಕತೆಯೊಂದನ್ನು ಈಡೇರಿಸುವ ಕನಸನ್ನು ಸರಕಾರ ಹೊಂದಿದ್ದರೂ, ತಾಲೂಕಿನ ಎರಡೂ ಕಟ್ಟಡ ಕಾಮಗಾರಿಗಳಿಗೆ ಮಂಜೂರಾದ ಪೈಕಿ ಅರ್ಧದಷ್ಟು ಅನುದಾನ ನೀಡದೆ ಸತಾಯಿಸುತ್ತಿದೆ.

Advertisement

ಉದ್ದೇಶಿತ ಎರಡು ಕಟ್ಟಡಗಳಿಗೆ ಮಂಜೂರಾದ ಮೊತ್ತದ ಪೈಕಿ ಅರ್ಧದಷ್ಟು ಹಣವನ್ನು ಗ್ರಂಥಾಲಯ ಇಲಾಖೆ ಅನ್ಯಯೋಜನೆಗಳಿಗೆ ಹೊಂದಿಸಿಕೊಂಡಿದ್ದರಿಂದ ಈಗ ಈ ಎರಡು ಕಟ್ಟಡಗಳಿಗೆ ನೀಡಲು ಅನುದಾನ ಕೊರತೆ ಎನ್ನಲಾಗುತ್ತಿದೆ.

5 ಲಕ್ಷ ರೂ. ಬಿಡುಗಡೆ
2015ನೇ ಸಾಲಿನಲ್ಲಿ ತಾಲೂಕಿನ ದೇವಚಳ್ಳ ಮತ್ತು ಅರಂತೋಡು ಗ್ರಾ.ಪಂ.ನಲ್ಲಿ ಎರಡು ಸಾರ್ವಜನಿಕ ಗ್ರಂಥಾಲಯ ನಿರ್ಮಾಣಕ್ಕಾಗಿ ತಲಾ 5 ಲಕ್ಷ ರೂ.ನಂತೆ ಒಟ್ಟು 10 ಲಕ್ಷ ರೂ. ಮಂಜೂರಾಗಿದ್ದು, ಕಾಮಗಾರಿಯ ಹೊಣೆಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. ಆದರೆ ಗ್ರಂಥಾಲಯ ಇಲಾಖೆ ನಿರ್ಮಿತಿ ಕೇಂದ್ರಕ್ಕೆ ಕೇವಲ 5 ಲಕ್ಷ ರೂ. ನೀಡಿದೆ.

ಬಿಡುಗಡೆಯಾಗಿದ್ದ ಅರ್ಧದಷ್ಟು ಮೊತ್ತದಲ್ಲಿ ಎರಡೂ ಕಟ್ಟಡಗಳ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ನೆಲಹಾಸು, ಪೈಂಟಿಂಗ್‌, ಕಿಟಕಿ, ಬಾಗಿಲು ಮತ್ತಿತರ ಚಿಕ್ಕ ಪುಟ್ಟ ಕೆಲಸಗಳಷ್ಟೇ ಬಾಕಿ ಉಳಿದಿವೆ. ಬಾಕಿ ಕಂತನ್ನು ನೀಡಲು ಇಲಾಖೆಗೆ ಸಾಧ್ಯವಾಗದೆ ಕಟ್ಟಡದ ಪೂರ್ಣ ಕಾಮಗಾರಿ ಸ್ಥಗಿತಗೊಂಡಿದ್ದು, ನಿರ್ಮಿತಿ ಕೇಂದ್ರವೂ ಅಸಹಾಯಕವಾಗಿದೆ.

ಇಲಾಖೆ ಅನುದಾನ
ತಾಲೂಕಿನ ಉದ್ದೇಶಿತ ಎರಡು ಕಟ್ಟಡಗಳಿಗೆ ಸ್ಥಳೀಯ ಪಂಚಾಯತ್‌ ತಲಾ 5 ಸೆಂಟ್ಸ್‌ ಜಾಗವನ್ನು ಇಲಾಖೆಗೆ ಹಸ್ತಾಂತರಿಸಿದೆ. ಹೀಗಾಗಿ ಇವೆರಡು ಕಟ್ಟಡಗಳ ಅನುದಾನ ನೀಡಿ ಪೂರ್ಣಗೊಳಿಸಿ, ನಿರ್ವಹಿಸಬೇಕಾದ್ದು ಗ್ರಂಥಾಲಯ ಇಲಾಖೆಯ ಹೊಣೆ. ದ.ಕ. ಜಿಲ್ಲೆಯಲ್ಲಿ ಗ್ರಂಥಾಲಯದ ಕೇಂದ್ರ ಕಚೇರಿ ಮಂಗಳೂರಿನ ಬಾವುಟಗುಡ್ಡೆಯಲ್ಲಿಕುವ ಕೇಂದ್ರ ಗ್ರಂಥಾಲಯವೇ ಆಗಿದೆ. ಬಾಕಿಯಿರುವ ಅನುದಾನ ಬಗ್ಗೆ ವಿಚಾರಿಸಿದಾಗ ಇಲ್ಲಿನ ಅಧಿಕಾರಿಗಳು ಬೆಂಗಳೂರಿನ ಗ್ರಂಥಾಲಯ ಆಯುಕ್ತರ ಕಚೇರಿಯಿಂದಲೇ ಬಿಡುಗಡೆಯಾಗಬೇಕಿದ್ದು, ಹಣ ಬಂದಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ.

Advertisement

ಜನಪ್ರತಿನಿಧಿಗಳ ನಿರಾಸಕ್ತಿ
ಎರಡು ಬಾರಿ ತಾ.ಪಂ. ಕೆಡಿಪಿ ಸಭೆಯಲ್ಲಿ ಪ್ರಸ್ತಾವವಾಗಿ ಸ್ಥಗಿತಗೊಂಡ ನಿರ್ಮಾಣ ಕಾಮಗಾರಿ ಬಗ್ಗೆ ಗ್ರಂಥಾಲಯ ಇಲಾಖೆಗೆ ಚುರುಕು ಮುಟ್ಟಿಸಿ ಸಾರ್ವಜನಿಕ ಉಪಯೋಗಕ್ಕೆ ಮೀಸಲಿಡುವ ನಿರ್ಧಾರವಾಗಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು ಅನುದಾನ ಬಿಡುಗಡೆಗೊಳಿಸಲು ಒತ್ತಡ ಹಾಕಿ ಶೀಘ್ರ ಬಾಕಿಯಿರುವ ಕಾಮಗಾರಿ ಪೂರ್ಣಗೊಳಿಸಲು ಆಸಕ್ತಿ ವಹಿಸದಿರುವುದರಿಂದ ಇಲಾಖೆಯೂ ಅನುದಾನ ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿದೆ.

ಪತ್ರ ಬರೆಯಲಾಗಿದೆ
ಎರಡು ನಿರ್ಮಾಣ ಕಟ್ಟಡಗಳು ಗ್ರಂಥಾಲಯ ಇಲಾಖೆಗೊಳಪಟ್ಟಿವೆ. ಬಾಕಿ ಮೊತ್ತ ಬೆಂಗಳೂರಿನ ಗ್ರಂಥಾಲಯ ಇಲಾಖೆ ಆಯುಕ್ತರ ಕಚೇರಿಯಿಂದಲೇ ಬಿಡುಗಡೆಯಾಗಬೇಕಾಗಿದೆ. ದ.ಕ. ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ವಿಚಾರಿಸಿದಾಗ ಹಣ ಬಂದಿಲ್ಲ ಎಂಬ ಉತ್ತರ ಬರುತ್ತಿದೆ. ಇಲಾಖಾ ಆಯುಕ್ತರ ಕಚೇರಿಗೆ ಪತ್ರ ಬರೆಯಲಾಗಿದೆ.
ಹರೀಶ್‌
  ನಿರ್ಮಿತಿ ಕೇಂದ್ರದ ಅಧಿಕಾರಿ

ಬಾಗಿಲು ನಿರ್ಮಿಸಿ
ಅರಂತೋಡಿನಲ್ಲಿ ಉದ್ದೇಶಿತ ಕಟ್ಟಡ ಎದುರುಗಡೆ ಇತರ ಕಟ್ಟಡಗಳಿವೆ. ಹೀಗಾಗಿ ರಾತ್ರಿ ವೇಳೆ ನಿರ್ಮಾಣ ಹಂತದಲ್ಲಿರುವ ಕಟ್ಟಡದೊಳಗೆ ತೆರಳುವ ಮದ್ಯವ್ಯಸನಿಗಳು ಕಟ್ಟಡವನ್ನು ತಮ್ಮ ಅಡ್ಡೆಯನ್ನಾಗಿಸಿಕೊಂಡಿದ್ದಾರೆ. ಕಟ್ಟಡದೊಳಗಡೆ ಸಾಕಷ್ಟು ಮದ್ಯದ ಬಾಟಲಿ ಹಾಗೂ ಇತರ ನಿರುಪಯುಕ್ತ ವಸ್ತುಗಳು ರಾಶಿ ಬಿದ್ದಿವೆ. ಕಟ್ಟಡದ ಒಳಗಡೆ ಪ್ರವೇಶಿಸದಂತೆ ಬಾಗಿಲು ನಿರ್ಮಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಬಗ್ಗೆ ಶೀಘ್ರ ಅಳವಡಿಸಲಾಗುವುದು ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಭರತ್‌ ಕನ್ನಡ್ಕ

Advertisement

Udayavani is now on Telegram. Click here to join our channel and stay updated with the latest news.

Next