ಬಳ್ಳಾರಿ: ಯಾವ ಸರಕಾರ ಎಷ್ಟು ಅನುದಾನ ಕೊಟ್ಟಿದೆ? ಎಷ್ಟು ಅಭಿವೃದ್ಧಿಯಾಗಿದೆ ಎಂಬುದರ ಬಗ್ಗೆ ಚರ್ಚೆಗೆ ಸಿದ್ಧ. ದಿನಾಂಕ ನಿಗದಿಪಡಿಸಿ. ಮಾತುಕತೆ ಮುಗಿದ ಮೇಲೆ ಯಾರು ಕಣದಲ್ಲಿ ಇರಬೇಕು, ಯಾರು ಇರಬಾರದು ಎಂಬುದನ್ನೆಲ್ಲ ನೋಡೋಣ ಎನ್ನುವ ಮೂಲಕ ಸಚಿವ ಡಿ.ಕೆ.ಶಿವಕುಮಾರ್ ಅವರು ಶ್ರೀರಾಮಲು ಸವಾಲ್‌ಗೆ ಜವಾಬು ನೀಡಿದ್ದಾರೆ.
ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ನಗರದ ಎಸ್‌ಪಿ ವೃತ್ತದಲ್ಲಿ ವಾಲ್ಮೀಕಿ ಪುತ್ಥಳಿಗೆ ಬುಧವಾರ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಅನುದಾನ ಬಿಡುಗಡೆ ವಿಷಯದಲ್ಲಿ ಶ್ರೀರಾಮುಲು ಸವಾಲು ಹಾಕಿದ್ದಾರೆ. ಅವರ ಸವಾಲನ್ನು ಸ್ವೀಕರಿಸಿದ್ದು, ಈ ಬಗ್ಗೆ ಚರ್ಚೆಗೆ ದಿನಾಂಕ ನಿಗದಿಪಡಿಸಿ. ನಾವು ಬರುತ್ತೇವೆ ಎಂದು ತಿರುಗೇಟು ನೀಡಿದರು.
ಬಳ್ಳಾರಿ ಜಿಲ್ಲೆಯ ಬಗ್ಗೆ ಇಷ್ಟೆಲ್ಲ ಮಾತನಾಡುತ್ತಿರುವ ಶ್ರೀರಾಮುಲು ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆ ಬಿಟ್ಟು ಪಕ್ಕದ ಜಿಲ್ಲೆಗೆ ಹೋಗಿ ಯಾಕೆ ಸ್ಪರ್ಧಿಸಿದರು ಎಂಬುದಕ್ಕೆ ಸರಿಯಾಗಿ ಉತ್ತರಿಸಲಿ. ಆಮೇಲೆ ಬೇರೆ ಪಕ್ಷದವರ ಬಗ್ಗೆ ಮಾತನಾಡಲಿ ಎಂದರು.
ಇಡೀ ದೇಶದಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಪ್ರತ್ಯೇಕ ಕಾನೂನನ್ನು ಜಾರಿಗೆ ತಂದು ಅವರ ರಕ್ಷಣೆಗಾಗಿ 27 ಸಾವಿರ ಕೋಟಿ ರೂ.ರಾಜ್ಯದಲ್ಲಿ ಮೀಸಲಿಟ್ಟಿದ್ದು ಕಾಂಗ್ರೆಸ್. ರಾಜ್ಯದಲ್ಲಿ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದವರ ಅನುಕೂಲಕ್ಕಾಗಿ ಇಡೀ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಟ್ರೈಬಲ್ ಆಕ್ಟ್ ಜಾರಿಗೆ ತರಲಾಗಿದೆ ಎಂದರು.
ಶ್ರೀರಾಮುಲು ಅಣ್ಣಾ: ಮಾತಿನುದ್ದಕ್ಕೂ ಶ್ರೀರಾಮುಲು ಅಣ್ಣಾ…. ರಾಮುಲು ಅಣ್ಣಾ ಎಂದು ಒತ್ತಿ, ಒತ್ತಿ ಹೇಳಿದ ಡಿ.ಕೆ.ಶಿವಕುಮಾರ್, ಜಿಲ್ಲೆಯ ಅಭಿವೃದ್ಧಿಗೆ ಅವರು ಬೇಕಾದಷ್ಟು ಅನುದಾನ ತಂದಿದ್ದಾರೆ. ಅವರೂ ಬೇಕಾದಷ್ಟು ಮಾಡಿಕೊಂಡಿದ್ದಾರೆ, ಇಟ್ಟುಕೊಂಡಿದ್ದಾರೆ ಬಹಳ ಸಂತೋಷ. ಅವರು ಮಾಡಿದ್ದನ್ನೆಲ್ಲ ನಾವು ಹೇಳ್ಳೋಕೆ ಆಗುತ್ತಾ ಎಂದು ವ್ಯಂಗ್ಯವಾಡಿದರು.
ಶ್ರೀರಾಮುಲು ಅವರು ಹುಟ್ಟು ಕಾಂಗ್ರೆಸ್ಸಿಗರು. ಕಾಂಗ್ರೆಸ್ ಕಾರ್ಪೋರೇಟರ್ ಆಗಿದ್ದವರು. 1999ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋನಿಯಾಗಾಂಧಿ ಪರ ಕಾಂಗ್ರೆಸ್ ಧ್ವಜವನ್ನು ಮೋಟಾರ್ ಸೈಕಲ್‌ಗೆ ಕಟ್ಟಿಕೊಂಡು ಓಡಾಡಿದ್ದರು. ಈಗ ಬಿಜೆಪಿಯಲ್ಲಿರಬಹುದು. ಆದರೆ, ಅವರು ಮೂಲ ಕಾಂಗ್ರೆಸ್ಸಿಗರು.
– ಡಿ.ಕೆ.ಶಿವಕುಮಾರ್, ಸಚಿವ