Advertisement

Puttur ಕಾರಂತ ಬಾಲವನ ಅಭಿವೃದ್ಧಿಗೆ ಅನುದಾನ: ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ

11:07 PM Oct 10, 2023 | Team Udayavani |

ಪುತ್ತೂರು: ಪುತ್ತೂರನ್ನು ಜಾಗತಿಕವಾಗಿ ಗುರುತಿಸುವಂತೆ ಮಾಡಿದ್ದು ಡಾ| ಕೆ. ಶಿವರಾಮ ಕಾರಂತ ಅವರ ಸಾಹಿತ್ಯ. ಸಾಂಸ್ಕೃತಿಕ ಕ್ಷೇತ್ರದ ಅವರ ಕರ್ಮಭೂಮಿ ಬಾಲವನವನ್ನು ಕಾರಂತರ ಆಶಯಕ್ಕೆ ತಕ್ಕಂತೆ ಅಭಿವೃದ್ಧಿಪಡಿಸಲು ಸರಕಾರದಿಂದ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಶಾಸಕ ಅಶೋಕ್‌ ಕುಮಾರ್‌ ರೈ ಹೇಳಿದರು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪರ್ಲಡ್ಕ ಡಾ| ಶಿವರಾಮ ಕಾರಂತರ ಬಾಲವನ ಹಾಗೂ ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಸಂಯುಕ್ತ ಆಶ್ರಯದಲ್ಲಿ ಪರ್ಲಡ್ಕ ಡಾ| ಶಿವರಾಮ ಕಾರಂತ ಬಾಲವನದಲ್ಲಿ ಮಂಗಳವಾರ ನಡೆದ ಡಾ| ಶಿವರಾಮ ಕಾರಂತರ 122ನೇ ಜನ್ಮದಿನೋತ್ಸವ, ಬಾಲವನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ, ಸಭಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರಂತರ ಕೊಡುಗೆಗೆ ಬೆಲೆ ಕಟ್ಟಲಾಗದು. ಅವರ ಬಹು ಕ್ಷೇತ್ರದ ಸಾಧನೆಗಳನ್ನು ಆಸಕ್ತಿಯಿಂದ ಗಮನಿಸಿದಾಗ ಅದರ ಮೌಲ್ಯ ಅರಿತುಕೊಳ್ಳಲು ಸಾಧ್ಯವಿದೆ ಎಂದರು.

ಮುಂಬಯಿ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ| ತಾಳ್ತಜೆ ವಸಂತ ಕುಮಾರ್‌ ಕಾರಂತರ ಸ್ಮರಣೆ ಮಾಡಿ, ಕಾರಂತರೆಂದರೆ ಕಡಲು, ಪರ್ವತ, ಪ್ರವಾಹ ಇದ್ದ ಹಾಗೆ. ಈ ಕಾರಣಕ್ಕಾಗಿಯೇ ಅವರ ಪ್ರತಿಬಿಂಬವನ್ನು ಕಾಲಮಿತಿಯೊಳಗೆ ಹಿಡಿದಿಡುವುದು ಕಷ್ಟ. ಅವರ ಒಂದೊಂದು ಕೃತಿಯೂ ಇನ್‌ಸ್ಟಿಟ್ಯೂಟ್‌ನಂತೆ. ಕಾರಂತರು ಪ್ರಾದೇಶಿಕ, ವಾಸ್ತವ ನೆಲೆಯಿಂದ ಕೃತಿ ರಚಿಸಿದ್ದಾರೆ ಎಂದ ಅವರು ಯಕ್ಷಗಾನವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಕಾರಂತರು ನೀಡಿದ ಕೊಡುಗೆ ಮಹತ್ವದ್ದಾಗಿದೆ ಎಂದರು.

ಗೌರವ, ಕೃತಿ ವಿತರಣೆ
ಇದೇ ವೇಳೆ ಕಾರಂತರ ಒಡನಾಡಿ ಪಡಾರು ಮಹಾಬಲೇಶ್ವರ ಭಟ್‌ ಮಂಚಿ ಅವರನ್ನು ಗೌರವಿಸಲಾಯಿತು. ತಾಲೂಕಿನ ಸರಕಾರಿ ಶಾಲೆಗಳಿಗೆ “ಬಾಲವನ ಭಾರ್ಗವ’ ಕೃತಿಯನ್ನು ನೀಡಲಾಯಿತು.

Advertisement

ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ, ತಹಶೀಲ್ದಾರ್‌ ಜೆ. ಶಿವಶಂಕರ್‌, ಶಿಕ್ಷಣಾಧಿಕಾರಿ ಲೋಕೇಶ್‌ ಎಸ್‌.ಆರ್‌., ನಗರಸಭೆ ಪೌರಾಯುಕ್ತ ಮಧು ಎಸ್‌. ಮನೋಹರ್‌, ಕಸಾಪ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್‌ ನಾಯಕ್‌, ರೋಹಿಣಿ ಚಂದ್ರನಾಥ ಆಚಾರ್ಯ ವೇದಿಕೆಯಲ್ಲಿದ್ದರು.

ಸಹಾಯಕ ಆಯುಕ್ತ ಗಿರೀಶ್‌ ನಂದನ್‌ ಸ್ವಾಗತಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್‌ ಜಿ. ವಂದಿಸಿದರು. ಡಾ| ರಾಜೇಶ್‌ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು. ಸಂಜಯನಗರ ಶಾಲಾ ಮುಖ್ಯಶಿಕ್ಷಕ ರಮೇಶ್‌ ಉಳಯ, ಚಿತ್ರಕಲಾ ಶಿಕ್ಷಕ ಜಗನ್ನಾಥ ಅರಿಯಡ್ಕ ವಿವಿಧ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದರು.

ಬಾಲವನ ಪ್ರಶಸ್ತಿ ಪ್ರದಾನ
ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವರ್ಣಚಿತ್ರ ಕಲಾವಿದ ಕೆ. ಚಂದ್ರನಾಥ ಆಚಾರ್ಯ ಅವರಿಗೆ ಬಾಲವನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಾಲು ಹೊದೆಸಿ, ಪೇಟ ತೊಡಿಸಿ, ಫಲಪುಷ್ಪ, ಸ್ಮರಣಿಕೆ, 25 ಸಾವಿರ ರೂ.ಗಳೊಂದಿಗೆ ಗೌರವಿಸಲಾಯಿತು. ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ| ವರದರಾಜ ಚಂದ್ರಗಿರಿ ಅಭಿನಂದನ ಮಾತುಗಳನ್ನಾಡಿದರು.

ನೊಬೆಲ್‌ ಗೂ ಮಿಗಿಲು
ನನಗೆ ಹುಟ್ಟೂರಿನಲ್ಲಿ ಸಿಕ್ಕ ಗೌರವ ನೊಬೆಲ್‌ಗಿಂತಲೂ ಮಿಗಿಲಾದುದು. ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣ ಎಂದು ಚಂದ್ರನಾಥ ಆಚಾರ್ಯ ಕೃತಜ್ಞತೆ ಸಲ್ಲಿಸಿದರು.

 

 

Advertisement

Udayavani is now on Telegram. Click here to join our channel and stay updated with the latest news.

Next