Advertisement

ಕೆರೆ ಪುನಶ್ಚೇತನಕ್ಕೆ ಅನುದಾನ ಕೊರತೆ, ಕಾಮಗಾರಿ ಸ್ಥಗಿತ 

02:05 PM Dec 23, 2017 | Team Udayavani |

ಉಪ್ಪಿನಂಗಡಿ: ಪಟ್ಟಣದ ಕೆರೆಮೂಲೆ ಪ್ರದೇಶದಲ್ಲಿ ಕೆರೆ ಪುನಶ್ಚೇತನ ಕಾಮಗಾರಿಯೊಂದು ಅನುದಾನ ಸಾಲದೆ
ಅಪೂರ್ಣವಾಗಿದೆ. ಹೆಚ್ಚುವರಿ ಅನುದಾನ ಬಿಡುಗಡೆಯಾಗಿ, ಕಾಮಗಾರಿ ಪೂರ್ಣ ಗೊಳ್ಳದಿದ್ದರೆ ಈವರೆಗೆ ಖರ್ಚು ಮಾಡಿದ 25 ಲಕ್ಷ ರೂ. ಅನುದಾನವೂ ವ್ಯರ್ಥವಾಗುವ ಭೀತಿ ಎದುರಾಗಿದೆ.

Advertisement

ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪಂಚಾಯತ್‌ ವ್ಯಾಪ್ತಿಯ ಕೆರೆಮೂಲೆ ಎಂಬಲ್ಲಿನ ಕೆರೆ 60 ವರ್ಷ ಹಳೆಯದು. ಈ ವಾರ್ಡ್‌ನ ಸದಸ್ಯರೇ ಈಗ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷರೂ ಆಗಿದ್ದಾರೆ.

ಕೆರೆಗಳ ಪುನಶ್ಚೇತನಕ್ಕೆ ಹೆಚ್ಚಿನ ಒತ್ತು ನೀಡಿರುವ ಸಿದ್ದರಾಮಯ್ಯ ಸರಕಾರ, ಎಲ್ಲ ಶಾಸಕರಿಗೆ ಕಟ್ಟಪ್ಪಣೆ ಮಾಡಿ,
ಯೋಜನೆ ರೂಪಿಸುವಂತೆ ತಿಳಿಸಿತ್ತು. ಅದರಂತೆ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಸರಕಾರಿ ಜಾಗದ ಈ ಕೆರೆಯನ್ನು ಆಯ್ಕೆ ಮಾಡಿಕೊಂಡರು. ನಬಾರ್ಡ್‌ ಯೋಜನೆಯಡಿ 25 ಲಕ್ಷ ರೂ. ಮಂಜೂರುಗೊಂಡು, ಗುತ್ತಿಗೆ ವಹಿಸಿದ್ದರು. 25 ಲಕ್ಷ ರೂ. ಅನುದಾನ ಖರ್ಚಾಗುವ ತನಕ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರು, ಮೂರು ತಿಂಗಳಿಂದ ಅದನ್ನು ಸ್ಥಗಿತಗೊಳಿಸಿದ್ದಾರೆ.

ಕೆರೆಯನ್ನು 15 ಅಡಿ ಆಳದವರೆಗೆ ತೋಡಿ ನೀರು ನಿಲ್ಲಿಸಲಾಗಿದೆ. ಮೂರು ಭಾಗಗಳಲ್ಲಿ ಆವರಣ ಗೋಡೆ ನಿರ್ಮಿಸಿದ್ದು, ಉಳಿದ ಒಂದು ಪಾರ್ಶ್ವದ ಗೋಡೆ ಕಟ್ಟಲು ಅನುದಾನ ಸಾಲದೆ ಕಾಮಗಾರಿ ಸ್ಥಗಿತಗೊಂಡಿದೆ. ಹೆಚ್ಚುವರಿ ಅನುದಾನಕ್ಕೆ ಇನ್ನೂ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ. ಮಳೆಗಾಲಕ್ಕೆ ಮುನ್ನ ಬದಲಿ ವ್ಯವಸ್ಥೆ ಮಾಡದಿದ್ದಲ್ಲಿ ಎಲ್ಲ ಕಾಮಗಾರಿ ವ್ಯರ್ಥವಾಗುತ್ತದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಈ ಮೊದಲು ಕೆರೆಮೂಲೆಯ ಈ ಜಲಮೂಲ ಶುದ್ಧ ನೀರಿನಿಂದ ನಳನಳಿಸಿ, ಸುತ್ತಲಿನವರಿಗೆ ಆಸರೆಯಾಗಿತ್ತು. ಆದರೆ ಬರಬರುತ್ತಾ ಅವಗಣನೆಗೆ ಒಳಗಾಗಿ, ಹೂಳು ತುಂಬಿ ಬರಡು ಭೂಮಿಯಂತಾಗಿತ್ತು. ಪುನಶ್ಚೇತನಕ್ಕೆ ಯಾರೂ ಆಸಕ್ತಿ ವಹಿಸಿರಲಿಲ್ಲ. ಈ ಕೆರೆ ಕಾಮಗಾರಿ ಪೂರ್ಣಗೊಂಡರೆ ಈ ಭಾಗದ ಹಿರ್ತಡ್ಕ, ಮಠ ಹಾಗೂ ಆಸುಪಾಸಿನ ಕೃಷಿಕರಿಗೆ
ಹಾಗೂ ಸುಮಾರು 500 ಜನರಿಗೆ ಕುಡಿಯುವ ನೀರಿಗೆ ಆಸರೆಯಾಗುತ್ತದೆ. ಈ ಬಾರಿ ಶಾಸಕರು ಇಚ್ಛಾಶಕ್ತಿ ಪ್ರದರ್ಶಿಸಿದ್ದಾರೆ. ಕೆರೆಯ ಒಂದು ಪಾರ್ಶ್ವದ ಆವರಣ ಗೋಡೆ ಕಾಮಗಾರಿ ಪೂರ್ಣಗೊಂಡು, ಕೆರೆಮೂಲೆ ಹೆಸರು ಉಳಿಯಲಿ ಎಂದು ಸ್ಥಳೀಯರು ಆಶಿಸಿದ್ದಾರೆ.

Advertisement

ಈ ಸ್ಥಳ ಕೆರೆಮೂಲೆ ಎಂದೇ ಪ್ರಸಿದ್ಧಿ. ಇತ್ತೀಚೆಗೆ ಕೆರೆ ಪಾಳು ಬಿದ್ದಿತ್ತು. ಶಾಸಕರ ಪ್ರಯತ್ನದಿಂದಾಗಿ ಕೆರೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಈಗ ಕೆರೆ 15 ಅಡಿ ಆಳವಿದ್ದು, ನೀರು ತುಂಬಿದೆ. ಇನ್ನೂ 10 ಅಡಿ ಆಳಕ್ಕೆ ತೋಡಿದರೆ ನೀರಿನ ನಿಧಿ ಒದಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ, ಗ್ರಾ.ಪಂ. ಅಧ್ಯಕ್ಷರೂ ಆಗಿರುವ ಈ ವಾರ್ಡ್‌ನ ಸದಸ್ಯ ಅಬ್ದುಲ್‌ ರಹಿಮಾನ್‌. ಕೊಳವೆ ಬಾವಿಗಳ ನೀರು ಶಾಶ್ವತವಲ್ಲ. ಅದರೆ ಇಂತಹ ಕೆರೆಗಳು ಸಿಗುವುದು
ವಿರಳ. ಕೆರೆ ಪುನಶ್ಚೇತನಕ್ಕೆ ಶಾಸಕರು ಒತ್ತು ನೀಡಿರುವುದು ಸಂತೋಷದ ವಿಷಯ. ಕೆರೆ ಗತ ವೈಭವ ಪಡೆಯಲಿದ್ದು, ಮತ್ತೆ ಸುತ್ತ ಹಸಿರು ವನ ಕಂಗೊಳಿಸಲಿದೆ ಎನ್ನುವ ನಿರೀಕ್ಷೆ ಸಾಮಾಜಿಕ ಕಾರ್ಯಕರ್ತ ನೌಫ‌ಲ್‌ ಎಂ. ಅವರದು.

ಉಳಿಸಲು ಪ್ರಯತ್ನಿಸುವೆ
ಸರಕಾರದ ಯೋಜನೆಯಂತೆ ಗ್ರಾಮೀಣ ಭಾಗದ ಸರಕಾರಿ ಜಾಗದಲ್ಲಿರುವ ಕೆರೆಗಳ ಪುನಶ್ಚೇತನಕ್ಕೆ ಸರಕಾರ ಆದೇಶಿಸಿತ್ತು. ಅದರಂತೆ ನಬಾರ್ಡ್‌ ಯೋಜನೆಯಡಿ 25 ಲಕ್ಷ ರೂ. ಬಿಡುಗಡೆಗೊಳಿಸಿದ್ದು, 9 ಅಡಿ ಆಳದೊಂದಿಗೆ ಶಾಶ್ವತ ನೀರು ಉಳಿಸುವ ಕಾಮಗಾರಿ ನಡೆದಿದೆ. ಆದರೆ, ಒಂದು ಭಾಗದ ಆವರಣಗೋಡೆಗೆ ಅನುದಾನದ ಕೊರತೆಯಾಗಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಮತ್ತೆ 15 ಲಕ್ಷ ರೂ. ಬಿಡುಗಡೆಗೊಳಿಸಿ ಕೆರೆಯನ್ನು ಉಳಿಸಲು ಪ್ರಯತ್ನಿಸುವೆ.
– ಶಕುಂತಳಾ ಟಿ. ಶೆಟ್ಟಿ, ಶಾಸಕರು

ಅನುದಾನದ ಬೇಡಿಕೆ ಸಲ್ಲಿಕೆ
ಮಳೆಗಾಲಕ್ಕೆ ಮುನ್ನ ಕಾಮಗಾರಿ ಪೂರ್ಣಗೊಳಿಸಲೇಬೇಕಾದ ಅನಿವಾರ್ಯ ಇದೆ. ಆದರೆ ಹಣಕಾಸು ಕೊರತೆಯಿಂದ ಕಾಮಗಾರಿ ಪೂರ್ಣಗೊಳಿಸಲು ಅಸಾಧ್ಯವಾಗಿದೆ. ಈಗಾಗಲೇ ಸ್ಥಳೀಯ ಪಂಚಾಯತ್‌ನ ಸಹಭಾಗಿತ್ವ ಕೋರಿ ಮನವರಿಕೆ ಮಾಡಲಾಗಿದೆ. ಇಲ್ಲದಿದ್ದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅನುದಾನದ ಬೇಡಿಕೆಯನ್ನು ಶಾಸಕರಿಗೆ ಸಲ್ಲಿಸಲಾಗುವುದು.
–  ರೋಹಿದಾಸ್‌,
   ನಬಾರ್ಡ್‌ ಸಹಾಯಕ ಎಂಜಿನಿಯರ್‌, ಪುತ್ತೂರು

ಎಂ.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next