Advertisement

ದಟ್ಟಾರಣ್ಯದಲ್ಲಿ ಮತ್ತೆ ಹರಳುಕಲ್ಲು ದಂಧೆ ? ಬೆಲೆಬಾಳುವ ನೈಸರ್ಗಿಕ ಸಂಪತ್ತು ಕಳ್ಳರ ಪಾಲು

12:41 AM Jan 11, 2022 | Team Udayavani |

ಸುಬ್ರಹ್ಮಣ್ಯ: ಹಲವು ವರ್ಷಗಳ ಹಿಂದೆ ಅಕ್ರಮ ಹರಳುಕಲ್ಲು ದಂಧೆ ನಡೆಯುತ್ತಿದ್ದ ದಟ್ಟಾರಣ್ಯದಲ್ಲಿ ಮತ್ತೆ ದಂಧೆ ಆರಂಭವಾಗಿರುವ ದೂರು ಕೇಳಿ ಬಂದಿದ್ದು, ಬೆಲೆಬಾಳುವ ನೈಸರ್ಗಿಕ ಸಂಪತ್ತು ಕಳ್ಳರ ಪಾಲಾಗುತ್ತಿದೆ.

Advertisement

ಪುಷ್ಪಗಿರಿ ತಪ್ಪಲಿನ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗೆ ಸೇರಿದ ಸುಬ್ರಹ್ಮಣ್ಯ ಸಮೀಪದ ಸುಟ್ಟತ್‌ಮಲೆ, ಕೂಜುಮಲೆಯಲ್ಲಿ ದಂಧೆ ಅವ್ಯಾಹತವಾಗಿದೆ. ಸ್ಥಳದಲ್ಲಿ ಪತ್ತೆಯಾಗಿರುವ ಪರಿಕರಗಳು, ಕುರುಹುಗಳು ಇದನ್ನು ದೃಢಪಡಿಸಿವೆ.

ಹಲವು ವರ್ಷಗಳ ಹಿಂದೆ ಇಲ್ಲಿ ಹರಳುಕಲ್ಲು ತೆಗೆಯಲು ದ.ಕ. ಮತ್ತು ಕೊಡಗು ಜಿಲ್ಲೆಗಳಿಂದ ಆಗಮಿಸುತ್ತಿದ್ದ ತಂಡಗಳ ಮಧ್ಯೆ ವಾಗ್ವಾದ, ಜಗಳ ನಡೆಯುತ್ತಿತ್ತು. ಸುರಂಗದೊಳಗೆ ಅಗೆಯುವಾಗ ಮಣ್ಣು ಕುಸಿದು ಪ್ರಾಣ ಕಳೆದುಕೊಂಡ ಘಟನೆಗಳೂ ನಡೆದಿದ್ದವು. ಬಳಿಕ ಅರಣ್ಯ ಇಲಾಖೆ ದಂಧೆಗೆ ತಡೆಯೊಡ್ಡಿತ್ತು. ಇದೀಗ ಮತ್ತೆ ಅದೇ ಸ್ಥಳದಲ್ಲಿ 10ರಿಂದ 30 ಜನರು ಮಣ್ಣು ಬಗೆದು ಹರಳು ಸಂಗ್ರಹ ಮಾಡುತ್ತಿದ್ದಾರೆ ಎನ್ನಲಾಗಿದೆ.

ಮಣ್ಣು ಬಗೆದು ಗುಂಡಿ ತೋಡಲಾಗಿದ್ದು ಆಳಕ್ಕೆ ಇಳಿಯಲು ಮೆಟ್ಟಿಲುಗಳನ್ನು ಮಾಡಲಾಗಿದೆ. ಮಣ್ಣು ಸಮೇತ ಹರಳು ಕಲ್ಲು ಮೇಲೆತ್ತಲು ರಾಟೆ ಕಟ್ಟಿ ಹಗ್ಗ ಇಳಿಸಲಾಗಿದೆ. ಹರಳು ಕಲ್ಲುಗಳನ್ನು ತೊಳೆದು ಶುಚಿಗೊಳಿಸಲು ನೀರು ತುಂಬುವ ತೊಟ್ಟಿಯನ್ನೂ ನಿರ್ಮಿಸಲಾಗಿದೆ.

ಆರೋಪ
ಸ್ಥಳದಿಂದ ಮೂರ್‍ನಾಲ್ಕು ಕಿ.ಮೀ. ಅಂತರದಲ್ಲಿ ಅರಣ್ಯ ಇಲಾಖೆಯ ಕಾವಲು ಠಾಣೆ ಇದ್ದು, ಅಕ್ರಮ ಚಟುವಟಿಕೆ ಬಗ್ಗೆ ಗೊತ್ತಿದ್ದರೂ ಇಲಾಖೆ ಜಾಣ ಮೌನ ವಹಿಸಿದೆ ಎಂಬ ಆರೋಪ ವ್ಯಕ್ತವಾಗಿದೆ. ಕಲ್ಮಕಾರು, ಕೊಲ್ಲಮೊಗ್ರು, ಬಾಳುಗೋಡು, ಉಪ್ಪುಕಳ, ಗಾಳಿಬೀಡು ಮೊದಲಾದೆಡೆ ದಂಧೆಕೋರರಿಗೆ ಮಾಹಿತಿದಾರರಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

ದಂಧೆಯ ಕರಾಳ ಮುಖ
1990ರಲ್ಲಿ ಮೊದಲ ಬಾರಿಗೆ ಕೂಜುಮಲೆಯಲ್ಲಿ ಹರಳುಕಲ್ಲು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಆಗ ಜನಕ್ಕೆ ಅದರ ಬೆಲೆ ತಿಳಿದಿರಲಿಲ್ಲ. ಕಡಮಕಲ್‌ ರಬ್ಬರ್‌ ಎಸ್ಟೇಟ್‌ಗೆ ಕೆಲಸಕ್ಕೆ ಬಂದಿದ್ದ ಕಾರ್ಮಿಕನೋರ್ವ ಕಲ್ಲುಗಳನ್ನು ಸಂಗ್ರಹಿಸಿ ಸಂಪಾದನೆ ದಾರಿ ಕಂಡುಕೊಂಡಿದ್ದ. ಬಳಿಕ ಈ ವಿಚಾರ ಊರಿನವರಿಗೆ ತಿಳಿಯಿತು ಎನ್ನಲಾಗಿದೆ. ಕೆಲವು ವರ್ಷಗಳ ಹಿಂದೆ ಹರಳುಕಲ್ಲು ಅಗೆಯುವ ಸಂದರ್ಭ ಮಣ್ಣಿನಡಿಗೆ ಸಿಲುಕಿ ಇಬ್ಬರು ಮೃತಪಟ್ಟಿದ್ದರು.

ಅಪಾಯದ ಭೀತಿ
ಈ ಕೃತ್ಯದಿಂದ ಮುಂದೆ ಈ ಭಾಗದಲ್ಲಿ ಪ್ರಕೃತಿಕವಾಗಿ ಅನಾಹುತ ಸಂಭವಿಸುವ ಆತಂಕ ಸ್ಥಳೀಯರದು. ಕೆಲವು ವರ್ಷಗಳ ಹಿಂದೇ ಇದೇ ಭಾಗದಲ್ಲಿ ಭಾರೀ ಮಳೆಯಿಂದ ಹಾನಿ ಸಂಭವಿಸಿತ್ತು. ಜಿಲ್ಲಾಡಳಿತವು ಸೂಕ್ತ ಕ್ರಮ ಕೈಗೊಂಡು ದಂಧೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.

ಕೆಜಿಗೆ 40 ಸಾವಿರ ರೂ.!
ಹರಳುಕಲ್ಲು ಕೆ.ಜಿ.ಗೆ 20 ಸಾವಿರದಿಂದ 40 ಸಾವಿರ ರೂ. ವರೆಗೆ ಮಾರಾಟವಾಗುತ್ತದೆ. ದಿನದಲ್ಲಿ 10ರಿಂದ 100 ಕೆ.ಜಿ. ವರೆಗೆ ಸಂಗ್ರಹ ಮಾಡಲಾಗುತ್ತದೆ ಎನ್ನಲಾಗಿದೆ.

ದಂಧೆ ನಡೆಯುತ್ತಿರುವ ಮಾಹಿತಿಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಒಂದು ಕಡೆ ನಮ್ಮ ವ್ಯಾಪ್ತಿಯಲ್ಲಿ ದಂಧೆ ನಡೆಸುತ್ತಿರುವ ಬಗ್ಗೆ ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಇನ್ನೊಮ್ಮೆ ಅಲ್ಲಿಗೆ ತೆರಳಿ ಸಮಗ್ರವಾಗಿ ಪರಿಶೀಲಿಸಲಾಗುವುದು.
– ಪ್ರವೀಣ್‌, ಎಸಿಎಫ್ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next