Advertisement
ರಾಜ್ಯ ಮಟ್ಟದ ಐಟಿಐ ವಿದ್ಯಾರ್ಥಿಗಳ ಎನ್‌ಎಸ್‌ಎಸ್ ಶಿಬಿರ ಸಂದರ್ಭದಲ್ಲಿ, “ಪಲಿಮಾರು ಜನಾರ್ದನ ಪೈ ನೆನಪಿನ ಬಯಲು ರಂಗಮಂಟಪ’ದಲ್ಲಿ ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ನಾಟಕದ ಮೂಲಕ ವಿಟ್ಲದ ಜನತೆಯನ್ನು ಆಕರ್ಷಿಸಿದರು. ಮಕ್ಕಳಲ್ಲಿ ಏಕತೆಯ ಭಾವವನ್ನು ಪ್ರಚೋದಿಸಿ, ಸಾಮೂಹಿಕ ಕ್ರಿಯಾಶಕ್ತಿಯನ್ನು ಹುರಿದುಂಬಿಸಿ ಸೃಜನಶೀಲ ಕಲಾಭಿವ್ಯಕ್ತಿಯನ್ನು ಅನಾವರಣಗೊಳಿಸಲು ನೆರವಾದ ಒಂದು ಅಪೂರ್ವ ನಾಟಕ ಇದಾಗಿತ್ತು.
ಸುಮಾರು 50 ಮಂದಿ ಮಕ್ಕಳಿಂದ ಪ್ರದರ್ಶಿಸಲ್ಪಟ್ಟ ಈ ನಾಟಕ ನೋಡುಗರ ಕಣ್ಮನ ಸೆಳೆಯಿತು. ಈ ಕಾರ್ಯಕ್ರಮದ ಉದ್ದಕ್ಕೂ ಅನೇಕ ಪುಟ್ಟ ಮಕ್ಕಳು ಪ್ರೇಕ್ಷಕರಾಗಿ ಒಂದಿಷ್ಟೂ ಸದ್ದು ಮಾಡದೇ ಆಸಕ್ತಿಯಿಂದ ಭಾಗವಹಿಸಿದ್ದೇ ಈ ನಾಟಕದ ಯಶಸ್ಸಿಗೆ ಸಾಕ್ಷಿ. ಈಗಾಗಲೇ ಪುಸ್ತಕರೂಪದಲ್ಲಿ ಪ್ರಕಟವಾಗಿ, ರಾಜ್ಯಾದ್ಯಂತ ಪ್ರಸಿದ್ಧವಾಗಿರುವ ಮೂರ್ತಿ ದೇರಾಜೆಯವರದೇ ಪ್ರಸಿದ್ಧ ನಾಟಕ “ಕಪ್ಪು ಕಾಗೆಯ ಹಾಡು’ ಇಲ್ಲಿ ರಂಗವೇರಿದ ಪರಿ ಬೇರೆ. ಪ್ರತೀ ಹುಣ್ಣಿಮೆಯಂದು ಬಂದು ಮಕ್ಕಳಿಗೆ ಕತೆ ಹೇಳುವ ಅಜ್ಜನ ಬಾಯಿಯಿಂದ ಕತೆಯಾಗಿ ಪ್ರಾರಂಭವಾಗಿ ಸುಂದರ ದೃಶ್ಯಕಾವ್ಯವಾಗಿ ಪ್ರಕಟವಾಗಿ, ಪ್ರೇಕ್ಷಕರ ಮನ ಸೂರೆಗೊಂಡಿತು.
Related Articles
Advertisement
ಮಕ್ಕಳ ಬಾಲ್ಯದಲ್ಲೇ ಚಿಗುರೊಡೆಯಬಹುದಾದ ಅಸಮಾನತೆಯ ಬೀಜವನ್ನು ಮೊಳಕೆಯೊಡೆಯದಂತೆ ಮಾಡಲು ಸಹಕಾರಿಯಾಗಬಹುದಾದ ಈ ಕಾಗೆಯ ಕತೆ ಅನೇಕ ಸಂಗತಿಗಳ ಒಂದು ರೂಪಕ. ಮಕ್ಕಳಲ್ಲಿ ಕುತೂಹಲ ಮತ್ತು ಬೆರಗನ್ನು ಮೂಡಿಸಿ, ಏಕಾಗ್ರತೆಯನ್ನು ಹೆಚ್ಚಿಸಿ, ಮಕ್ಕಳನ್ನು ತಾವೇ ಯೋಚಿಸುವಂತೆ ಮಾಡಿ, ಆಟದ ಮೂಲಕವೇ ನಾಟಕವನ್ನು ಕಟ್ಟುತ್ತಾ, ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡುತ್ತಿರುವ “ಸಮಸಾಂಪ್ರತಿ’ ರಂಗನಾಟಕ ಶಿಬಿರದ ಬಹಳ ಒಳ್ಳೆಯ ಫಲವೇ ಈ ಒಂದು ಅತ್ಯುತ್ತಮ ಪ್ರದರ್ಶನ. ಜಾದೂಗಾರ ಜೂನಿಯರ್ ಶಂಕರ್ ಅವರ ಬೆಳಕಿನ ವಿನ್ಯಾಸ, ಭಾರವಿ ದೇರಾಜೆ, ಪಾಣಿನಿ ದೇರಾಜೆ, ಯಶಸ್ವಿನಿ ದೇರಾಜೆ, ಮೈಥಿಲಿ ಜೂನಿಯರ್ ಶಂಕರ್ ಇವರ ಸಂಗೀತ ಸಾಂಗತ್ಯ ಇದಕ್ಕಿತ್ತು.
ಸುಧೀರ್ ಬಾಳೆಪುಣಿ ಅವರ ಮುಖವಾಡ- ವೇಷಭೂಷಣ, ರಾಧಾಕೃಷ್ಣ ಮುಳಿಯ ಅವರ ರಂಗ ನಿರ್ಮಾಣ ಮರೆಯುವಂಥವಲ್ಲ. ವಿಟ್ಲದ “ಏರ್ ಸೌಂಡ್ಸ್’ನವರು ತಮ್ಮ ಸಂಸ್ಥೆಯ ಸುವರ್ಣ ವರ್ಧಂತಿಯ ಸಂದರ್ಭದಲ್ಲಿ ಯಾವುದೋ ಹಾಳುಮೂಳು ಕಾರ್ಯಕ್ರಮವನ್ನು ಸಂಯೋಜಿಸದೆ, ಇಂತಹ ಒಂದು ಅಪರೂಪದ ಕಾರ್ಯಕ್ರಮವನ್ನು ಯೋಜಿಸುವ ಮೂಲಕ ಎಲ್ಲರ ಅಭಿನಂದನೆಗೆ ಪಾತ್ರರಾದರು. ಶಾಲೆಯ ಮುಖ್ಯೋಪಾಧ್ಯಾಯರಾದ ವಿಶ್ವನಾಥ ಮತ್ತು ಶಿಕ್ಷಕ ವೃಂದದ ಸಹಕಾರ ವಂದನೀಯ. ತೀರಾ ಸಹಜವಾಗಿ ಅಭಿನಯಿಸಿದ ಎಲ್ಲ ಮಕ್ಕಳು ನೆರೆದ ಪ್ರೇಕ್ಷಕರ ಕೊಂಡಾಟಕ್ಕೆ ಪಾತ್ರರಾದರು. ಎಲ್. ಎನ್. ಭಟ್ ಮಳಿ
ಫೋಟೋ: ಶ್ಯಾಮಪ್ರಸಾದ್ ಕುಂಚಿನಡ್ಕ