ಬೆಂಗಳೂರು: ಎಲ್ಲರೂ ಮೊಬೈಲ್‌ಗಳಲ್ಲಿ ಮುಳುಗಿ ಹೋಗಿರುವ ಹಿನ್ನೆಲೆಯಲ್ಲಿ ಇಂದು ನಗು ಮಾಯವಾಗಿದೆ. ಅಜ್ಜಿ ತನ್ನ ಮೊಮ್ಮಗುವಿನ ಅಳು ನಿಲ್ಲಿಸಲು ಹೇಳುತ್ತಿದ್ದ ಜನಪದ ಹಾಡುಗಳು ಮರೆಯಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಬೇಸರ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಎಲ್.ವಿದ್ಯಾಶಂಕರ ಪ್ರಶಸ್ತಿ ಮತ್ತು ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಹಿರಿಯರು, ಕಿರಿಯರು ಸೇರಿದಂತೆ ಎಲ್ಲರೂ ಇಂದು ಮೊಬೈಲ್‌ನಲ್ಲಿ ಮುಳುಗಿದ್ದು, ಈ ನೆಲದ ಜನಪದ ಸಂಸ್ಕೃತಿ ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮೊಬೈಲ್ ಅಂಗೈಗೆ ಬರುವ ಮೊದಲು, ಈ ಪರಿಸ್ಥಿತಿ ಇರಲಿಲ್ಲ. ಹಳ್ಳಿಯಲ್ಲಿ ಯಾರಧ್ದೋ ಮಗುವನ್ನು ತನ್ನ ಮಗು ಎಂದು ಎತ್ತಿ ಲಾಲಿಹಾಡುತ್ತಿದ್ದ ಆ ತಾಯಿಯ ಬಾಯಲ್ಲಿ ಜನಪದ ಹಾಡುಗಳು ಬರುತ್ತಿದ್ದವು. ಅಂತಹ ಹಾಡು ಕೇಳಿಸಿಕೊಳ್ಳುವುದೇ ಮನಸಿಗೆ ಆನಂದವಾಗುತ್ತಿತ್ತು. ಆದರೆ, ಈಗ ಆ ಸ್ಥಿತಿಯಿಲ್ಲ. ಮೆಟ್ರೋ ರೈಲು, ಬಸ್ ಸೇರಿದಂತೆ ಎಲ್ಲೇ ಪ್ರಯಾಣಿಸಿದರೂ ಮೊಬೈಲ್ ಅವರನ್ನು ಬಿಟ್ಟರೂ, ಅವರು ಮಾತ್ರ ಮೊಬೈಲ್ ಬಿಡದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಮೊಬೈಲ್ ಗೀಳಿನ ಹಿನ್ನೆಲೆಯಲ್ಲಿ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರ ಸೇರಿದಂತೆ ಇನ್ನಿತರ ಕ್ಷೇತ್ರಗಳು ವಿನಾಶದಂಚಿನತ್ತ ಸಾಗುತ್ತಿವೆ. ಇದು ಹೀಗೇ ಮುಂದುವರಿದರೆ ಮುಂದೊಂದು ದಿನ ಮಕ್ಕಳಿಗೆ ಪ್ರೀತಿ ಕೊಡುವುದನ್ನೇ ಮರೆಯುವ ಸ್ಥಿತಿ ಎದುರಾಗುವ ಅಪಾಯವಿದೆ ಎಂದು ಎಚ್ಚರಿಸಿದರು.
ನಿಡುಮಾಮಿಡಿ ಮಹಾಸಂಸ್ಥಾನದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮಾತನಾಡಿ, ವಿದ್ಯಾವಂತ ಮಕ್ಕಳು ತಮ್ಮ ಪೋಷಕರನ್ನು ಮನೆಯಿಂದ ಹೊರಹಾಕುತ್ತಿರುವ ಹಿನ್ನೆಲೆಯಲ್ಲಿ, ಇಂದು ವೃದ್ಧಾಶ್ರಮಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಇಂತಹ ದಿನಗಳಲ್ಲಿ ವಿದ್ಯಾಶಂಕರ ಅವರ ಮಕ್ಕಳು, ತಂದೆಯನ್ನು ಸ್ಮರಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ವಿದ್ಯಾಶಂಕರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಸಂಶೋಧಕ ಪ್ರೊ.ಸಿ.ಮಹಾದೇವಪ್ಪ, ಯುವ ಜನಾಂಗ ಕಂಪ್ಯೂಟರ್ ಮತ್ತು ಮೊಬೈಲ್ ಮೇಲೆ ಹೆಚ್ಚು ಅವಲಂಬಿತರಾಗುತ್ತಿರುವ ಹಿನ್ನೆಲೆಯಲ್ಲಿ ಬರವಣೆಗೆ ಹವ್ಯಾಸ ನಾಶವಾಗುತ್ತಿದೆ. ಇದು ಹೀಗೇ ಮುಂದುವರಿದರೆ ಮುಂದೊಂದು ದಿನ ಪಶ್ಚಾತ್ತಾಪ ಪಟ್ಟುಕೊಳ್ಳುವ ಪ್ರಸಂಗ ಎದುರಾಗಲಿದೆ ಎಂದು ಎಚ್ಚರಿಸಿದರು.
ಹಂಪಿ ವಿವಿಯ ಕನ್ನಡ ಪ್ರಾಧ್ಯಾಪಕ ಡಾ.ಎಸ್.ಎಸ್.ಅಂಗಡಿ ಅವರಿಗೆ ವಿದ್ಯಾಶಂಕರ ಪುರಸ್ಕಾರ ಪ್ರದಾನ ಮಾಡಲಾಯಿತು. ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಬೇಲಿ ಮಠದ ಶಿವರುದ್ರ ಮಹಾಸ್ವಾಮೀಜಿ, ಲೇಖಕ ಪ್ರೊ.ಜಿ.ಅಶ್ವತ್ಥನಾರಾಯಣ, ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ, ಪ್ರತಿಷ್ಠಾನದ ಉಪಾಧ್ಯಕ್ಷೆ ಎನ್.ನಾಗರತ್ನ ಮತ್ತಿತರರು ಉಪಸ್ಥಿತರಿದ್ದರು.