ಒಂದು ನಾಣ್ಯಕ್ಕೆ ಎರಡು ಮುಖ ಇರುವಂತೆ, ವರ್ಕ್ ಫ್ರಮ್ ಹೋಂಗೆ ಕೂಡಾ ಎರಡು ಮುಖ ಇದೆ. ಮನೇಲಿ ಅಮ್ಮ, “ಅಯ್ಯೋ ನನ್ನ ಮಗಳು ತುಂಬಾ ಕೆಲಸ ಮಾಡ್ತಾಳೆ’ ಅಂತ, ಬೇರೆ ಯಾವ ಕೆಲಸವನ್ನೂ ಹೇಳದೆ, ಕೂತಲ್ಲಿಗೇ ಊಟ- ತಿಂಡಿ ಸಪ್ಲೈ ಮಾಡ್ತಾರೆ ಅನ್ನೋದು ಒಂದು ಮುಖ ವಾದರೆ, ಇನ್ನೊಂದು ಬಾಸ್‌ಗೆ ಕಾಣುವ ಮುಖ. ಬಾಸ್ ಪ್ರಕಾರ, ಆಫೀಸ್ ಟು ಮನೆ ಟ್ರಾವೆಲ್ ಮಾಡುವ 2 ಗಂಟೆ ಉಳಿಯುತ್ತದಲ್ಲ, ಆ ಸಮಯದಲ್ಲೂ ನಾವು ಕೆಲಸ ಮಾಡಬೇಕು.
“ಇದೊಂದು ಕೆಲಸ ಮುಗ್ಸಿ ಲಾಗ್ ಔಟ್ ಮಾಡಿ…’ ಎಂದು ಬಿಡ್ತಾರೆ. ಆ “ಇದೊಂದು ಕೆಲಸ’ ಮಾಡುವಾಗ ರಾತ್ರಿ ಒಂಬತ್ತರ ಮೇಲಾಗಿರುತ್ತದೆ. ಆಫೀಸ್‌ನಲ್ಲಿ ಇರುವಾಗ ಆಗಿದ್ದರೆ, ಸಂಜೆ ಏಳಾಗುತ್ತಿದ್ದಂತೆ ಕುರ್ಚಿಯಿಂದ ಎದ್ದು ಬಿಡಬಹುದಿತ್ತು. ಹೀಗೆ, ವರ್ಕ್ ಫ್ರಮ್ ಹೋಂನ ಲಾಭ ನಷ್ಟಗಳೆ ರಡನ್ನೂ ಅನುಭವಿಸುತ್ತಾ ಕೆಲಸ ಮಾಡುತ್ತಿರುವ ನನಗೆ, ಸಾಥ್ ನೀಡುತ್ತಿರುವುದು ನಮ್ಮಜ್ಜಿ. ಹೂ ಕಟ್ಟುತ್ತಲೋ, ಎಲೆ ಅಡಿಕೆ ಜಗಿಯುತ್ತಲೋ, ಹೂ ಬತ್ತಿ ಹೊಸೆಯುತ್ತಲೋ ಕುಳಿತಿರುತ್ತಾರೆ.
ಮೊನ್ನೆ ಹೀಗಾಯ್ತು- ನಾನು ಆಫೀಸ್ ಕೆಲಸದ ಮಧ್ಯೆ, ಯು ಟ್ಯೂಬ್‌ನಲ್ಲಿ ಏನೋ ನೋಡುತ್ತಲಿದ್ದೆ. ಪಕ್ಕ ಕೂತಿದ್ದ ಅಜ್ಜಿ- “ಏನ್ ನೋಡ್ತಿದ್ದೀಯ?’ ಅಂತ ಇಣುಕಿದರು. ಲಾಕ್‌ಡೌನ್ ಸಮಯದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಏನೇನು ಕೆಲಸ ಮಾಡುತ್ತಿದ್ದಾರೆ ಅನ್ನೋ ವಿಡಿಯೋ ನೋಡುತ್ತಿದ್ದೆ. “ನೋಡಜ್ಜಿ, ಇವರೆಲ್ಲ ಸಿನಿಮಾ ಹೀರೋಯಿನ್‌ಗಳು. ಈಗ ನೋಡು, ಹೇಗೆ ಮನೆಗೆಲಸ ಮಾಡ್ತಿದ್ದಾರೆ’ ಅಂತ ತೋರಿಸಿದೆ. ಅದರಲ್ಲೇನಿದೆ ಮಹಾ ಎನ್ನುವಂತೆ ಮುಖ ಮಾಡಿದ ಅಜ್ಜಿ, ವಿಡಿಯೋ ನೋಡಲು ಆಸಕ್ತಿ ತೋರಿಸಲಿಲ್ಲ. ಆದರೆ, ಅಜ್ಜಿಗೆ ಆ ವಿಡಿಯೋ ಬಗ್ಗೆ ಹೇಳಿ ತಪ್ಪು ಮಾಡಿದೆ ಅಂತ ಎರಡು ದಿನದ ನಂತರ ಅರಿವಾಯ್ತು.
ಅವತ್ತು ಭಾನುವಾರ. ಆಫೀಸ್ ಕೆಲಸ ಇರಲಿಲ್ಲ. ಪಾಪ, ಅಮ್ಮ ಅವತ್ತೂ ನನಗೆ ಯಾವ ಕೆಲಸವನ್ನೂ ಕೊಡದೆ ತಾವೇ ಎಲ್ಲಾ ಕೆಲಸ ಮಾಡುತ್ತಿದ್ದರು. ಅದನ್ನು ಗಮನಿಸಿದ ಅಜ್ಜಿ- “ಯಾಕವ್ವಾ, ಹೀರೋಯಿನ್‌ಗಳೆಲ್ಲ ಮನೆಕೆಲಸ ಮಾಡ್ತಾ ಇದ್ದಾರೆ ಅಂತ ಮೊನ್ನೆ ತೋರ್ಸಿದ್ದೆ. ನೀನ್ಯಾವ ಹೀರೋಯಿನ್‌ಗೆ ಕಡಿಮೆ ಇದ್ದೀ. ತಗಾ ಕಸಬರಿಕೆ. ಮೂಲೆ ಮೂಲೆ ಗುಡಿಸ್ಕೊಂಡು ಬಾ ನೋಡೋಣ…’ ಅಂತ ಕಾಲೆಳೆದು, ಕೈಗೆ ಪೊರಕೆ ಕೊಡಬೇಕೇ? ಇನ್ಮುಂದೆ ಅಜ್ಜಿಗೆ ಏನೂ ತೋರಿಸುವುದಿಲ್ಲ ಅಂತ ಅವತ್ತೇ ನಿರ್ಧಾರ ಮಾಡಿದೆ.
* ಅಪರ್ಣಾ ಪಿ.