ಕೊಪ್ಪಳ: ಅಜ್ಜನ ಜಾತ್ರೆಗೆ ಬನ್ನಿ ಎನ್ನುವ ಮೂರು ಶಬ್ಧವೇ ದೊಡ್ಡ ಅರ್ಥ ಕೊಡುತ್ತದೆ. ಲಕ್ಷ ಲಕ್ಷ ಭಕ್ತ ಸಮೂಹವು ಗವಿಮಠದಲ್ಲಿ ಸೇರುವಂತೆ ಮಾಡುತ್ತಿದೆ. ಈ ಜಾತ್ರೆ ಜಾತಿ, ಮತ, ಧರ್ಮ, ಭಾಷೆ ಮೀರಿದ ಯಾತ್ರೆಯಾಗಿದೆ. ಇದೆಲ್ಲದಕ್ಕೂ ಕಾರಣನೇ ಆ ಗವಿಸಿದ್ದೇಶ್ವರ ಎಂದು ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.
ಗವಿಸಿದ್ದೇಶ್ವರ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಲಕ್ಷ ಲಕ್ಷ ಭಕ್ತ ಸಮೂಹವನ್ನುದ್ದೇಶಿ ಆಶೀರ್ವಚನ ನೀಡಿದ ಅವರು, ಅಜ್ಜನ ಜಾತ್ರೆಗೆ ಬನ್ನಿ ಎನ್ನುವ ಪದವೇ ನೀವೆಲ್ಲರೂ ಇಲ್ಲಿ ಕೂಡುವಂತೆ ಮಾಡಿದೆ. ಜಾತ್ರೆಯಲ್ಲಿ ಹಲವು ಧರ್ಮ, ಪಂಥ, ಭಾಷೆಯ ಸಮುದಾಯವಿದೆ. ಇಷ್ಟೆಲ್ಲ ಜನ ಸೇರಲು ಸೂತ್ರಧಾರನೇ ಆ ಗವಿಸಿದ್ದೇಶ. ಇಲ್ಲಿ ತಲೆಗಳು ಬೇರೆ ಬೇರೆಯಾದ್ರೂ ರುದ್ರಾಕ್ಷಿ ಸೂತ್ರಧಾರ ಆ ಗದ್ದುಗೆಯ ಗವಿಸಿದ್ದೇಶನು ಎಂದರು.
ಒಬ್ಬ ಚಿಂತಕ, ಸಾಹಸಿ ಯಾರು ಎನ್ನುವ ಕುರಿತು ಬರೆಯುತ್ತಾನೆ. ಈ ಜೀವನದಲ್ಲಿ ಸಾಹಸಿ ಎಂದು ಯಾರಿಗೆ ಕರೆಯಬೇಕು ಎಂದು ಚಿಂತಿಸುತ್ತಾನೆ. ಹತ್ತು ಮಂದಿಯನ್ನು ಹೊಡೆದುರುಳಿಸುವ ವ್ಯಕ್ತಿಯು ನಿಜವಾದ ಸಾಹಸಿಯಲ್ಲ. ಕತ್ತಲ ಅಮಾವಾಸ್ಯೆಯಲ್ಲಿ ನಡೆದು ಹೋಗುವವನು ನಿಜವಾದ ಸಾಹಸಿಯಲ್ಲ. ಆದರೆ ಜೀವನದಲ್ಲಿ ಸೋಲಾದಾಗ ಮೆಟ್ಟಿ ನಿಂತು ಜೀವನದ ಅರ್ಥ ತಿಳಿದು ನಡೆಯುವವನು ನಿಜವಾದ ಸಾಹಸಿ. ಅಂತಹ ವ್ಯಕ್ತಿಯನ್ನು ಸಾಹಸಿ ಎಂದೆನ್ನಬಹುದು. ಆ ಸಾಲಿನಲ್ಲಿ ಸೇರಿದವರು ಖ್ಯಾತ ಕ್ರೀಡಾಪಟು ಡಾ| ಮಾಲತಿ ಹೊಳ್ಳ ಎಂದರು.
ಭಕ್ತಿಯ ಸಾಮ್ರಾಜ್ಯ: ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮಿಗಳು ಭಕ್ತಿಯ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ. ಇಲ್ಲಿಯ ಸಾಗರೋಪಾದಿಯ ಜನಸ್ತೋಮ ನೋಡುವುದೇ ಒಂದು ಭಾಗ್ಯ ಎಂದು ಅಂತಾರಾಷ್ಟ್ರೀಯ ಕ್ರೀಡಾಪಟು ಡಾ| ಮಾಲತಿ ಹೊಳ್ಳ ಹೇಳಿದರು.
ಗವಿಸಿದ್ದೇಶ್ವರ ಮಹಾರಥೋತ್ಸವದ ಧ್ವಜಾರೋಹಣ ನೆರವೇರಿಸಿ, ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ನನ್ನನ್ನು ಗುರುತಿಸಿ ಈ ಜಾತ್ರೆಯ ಮಹಾರಥೋತ್ಸವಕ್ಕೆ ಆಹ್ವಾನಿಸಿದ್ದು ನನ್ನ ಪುಣ್ಯವೇ ಸರಿ. ವಿಕಲಾಂಗೆಯಾಗಿದ್ದಕ್ಕೂ ನನ್ನ ಜೀವನ ಸಾರ್ಥಕವಾಯಿತು. ಇದೊಂದು ಜನ ಸಾಗರ, ಪ್ರವಾಹವೇ ಸರಿ. ನಾನು ಕನಸಿನಲ್ಲಿಯೂ ಮಹಾ ರಥೋತ್ಸವಕ್ಕೆ ಚಾಲನೆ ನೀಡುವೆ ಎಂದುಕೊಂಡಿರಲಿಲ್ಲ. ಇದು ನನ್ನ ಸುದೈವ ಎಂದರು.