Advertisement

ಗಾಂಧೀನಗರ ಪಾರ್ಕ್‌ನ ಪ್ರೀತಿಯ ಅಜ್ಜ !

10:27 AM Apr 01, 2018 | Team Udayavani |

ಮಹಾನಗರ: ಆಟವಾಡುವ ಮಗುವೊಂದು ಎಡವಿದಾಗ ತತ್‌ ಕ್ಷಣವೇ ಅಲ್ಲಿಗೆ ಹೋಗಿ ಅದನ್ನು ಎತ್ತಿ ಮುದ್ದಾಡುತ್ತಾರೆ. ಜಾರು ಬಂಡಿಯಲ್ಲಿ ಆಟವಾಡಿದ ಆ ಮಗು ನೇರವಾಗಿ ಆ ಅಜ್ಜನಲ್ಲಿಗೆ ಬಂದು, ಒಂದು ಚಾಕಲೇಟ್‌ ಪಡೆದು ಸಂತಸ ಪಡುತ್ತದೆ. ಈ ಸಂತಸ ಆ ಅಜ್ಜನ ಖುಷಿಯನ್ನೂ ಹೆಚ್ಚಿಸುತ್ತದೆ. ಈ ಹಿರಿಯ ನಾಗರಿಕರೊಬ್ಬರು ನಿಜಕ್ಕೂ ಮಮತೆಯಿಂದಲೇ ಈ ಉದ್ಯಾನಕ್ಕೆ ಹೊಸ ಬೆಳಕು ತುಂಬಿದ್ದಾರೆ.

Advertisement

ಹೆಸರು ಉಲ್ಲೇಖೀಸಬೇಡಿ
ಲೇಡಿಹಿಲ್‌ ಸಮೀಪದ ಗಾಂಧೀ ನಗರದಲ್ಲಿರುವ ಮಹಾತ್ಮಾ ಗಾಂಧಿ ಪಾರ್ಕ್‌ನಲ್ಲಿ ನಿಮಗೆ ಈ ಅಜ್ಜ ಸಿಗುತ್ತಾರೆ. ಇಲ್ಲಿ ಮಕ್ಕಳು ಆನಂದದಿಂದ ಕುಣಿದು ಕುಪ್ಪಳಿಸಲು ಕಾರಣವೇ ಈ ಪ್ರೀತಿಯ ಅಜ್ಜ. ಪಾರ್ಕ್‌ಗೆ ಸುಮಾರು 8 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕೊಡುಗೆಯಾಗಿ ನೀಡಿ ‘ತನ್ನ ಹೆಸರನ್ನು ಉಲ್ಲೇಖ ಮಾಡಬೇಡಿ’ ಎಂದು ಕೋರಿದ್ದಾರೆ!

ಮಹಾನಗರ ಪಾಲಿಕೆ ಉದ್ಯಾನ ಗಾಂಧಿನಗರ ಪಾರ್ಕ್‌ ಟ್ರಸ್ಟ್‌ ಸಹಯೋಗದಲ್ಲಿ ನಿರ್ವಹಣೆಯಾಗುತ್ತಿರುವ ಪಾರ್ಕ್ ನಲ್ಲಿ ಮಕ್ಕಳಿಗೆ ಹೊಸ ಹುರುಪು ಸಿಗಲಿ, ಖುಷಿಯಿಂದ ಆಟವಾಡಲಿ ಎಂಬ ಕಾಳಜಿಯಿಂದ ಅಜ್ಜ ತಮ್ಮ ಪತ್ನಿಯ ನೆನಪಿನಲ್ಲಿ ಪರಿಕರಗಳನ್ನು ಒದಗಿಸಿದ್ದಾರೆ.

ಹೆಸರು ಹೇಳಲು ಸುತರಾಂ ಒಪ್ಪದ ಮಕ್ಕಳ ಪ್ರೀತಿಯ ಅಜ್ಜ ಉದಯವಾಣಿ ‘ಸುದಿನ’ ಜತೆಗೆ ಮಾತನಾಡಿ, `ನನ್ನ ಪತ್ನಿಗೆ ಸಮಾಜ ಸೇವೆ ಮಾಡಬೇಕು ಎಂಬ ತುಡಿತವಿತ್ತು. ಅದಕ್ಕಾಗಿ ಆಕೆ ಸಂಘಟನೆಗೆ ಕೈಜೋಡಿಸಿದ್ದರು. ಒಮ್ಮೆ ನಾವು ಕೇರಳ ಪ್ರವಾಸ ಹೋಗಿದ್ದಾಗ ಅಲ್ಲಿನ ಪಾರ್ಕ್‌ನಲ್ಲಿ ಪುಟಾಣಿಗಳು ಆಟವಾಡುವ ದೃಶ್ಯ ಕಂಡು ಸಂಭ್ರಮಿಸಿದೆವು.ನಮ್ಮ ವ್ಯಾಪ್ತಿಯ ಮಕ್ಕಳಿಗೂ ಇಂಥ ಅವಕಾಶವಿದ್ದರೆ ಎಂದೆನಿಸಿತು. ಅದಕ್ಕಾಗಿ ಇರುವ ಹಣ ಸೇರಿಸಿ ಆಟೋಟ ಪರಿಕರಗಳನ್ನು ಈ ಪಾರ್ಕ್‌ಗೆ ನೀಡಲು ನಿರ್ಧರಿಸಿದೆವು. ಆದರೆ, ಅಷ್ಟರಲ್ಲಾಗಲೇ ನನ್ನ ಪತ್ನಿಯನ್ನು ಕಳೆದುಕೊಂಡೆ. ಆದರೆ, ಮೊದಲೇ ನಿರ್ಧರಿಸಿದಂತೆ ಹಾಗೂ ಹೆಂಡತಿಯ ಆಸೆಯಂತೆ ಪುಟ್ಟ ಮಕ್ಕಳಿಗೆ ಆಟವಾಡುವ ಪರಿಕರಗಳನ್ನು ತಂದು ಆಕೆಯ ಹೆಸರಿನಲ್ಲಿ ಇಲ್ಲಿಗೆ ಪರಿಕರಗಳನ್ನು ಕೊಡಲಾಗಿದೆ. ಇಲ್ಲಿ ಅದರಲ್ಲಿ ನೂರಾರು ಪುಟಾಣಿಗಳು ಬಂದು ಆಟವಾಡುವುದನ್ನು ನೋಡಿದಾಗ ಮನಸ್ಸು ಸಂತಸಗೊಳ್ಳುತ್ತದೆ’ ಎಂದರು

ಮನಪಾ ಕಣ್ಣು ತೆರೆಯಲಿ!
ಪಾರ್ಕ್‌ ನಿತ್ಯವೂ ನೂರಾರು ಜನರಿಂದ ಗಿಜಿಗುಡುತ್ತಿದೆ. ಪಾಲಿಕೆ ಈ ಪಾರ್ಕ್‌ ನ ನಿರ್ವಹಣೆ ಹೊಣೆ ಹೊತ್ತಿದೆ. ಈ ಪಾರ್ಕ್‌ಗೆ ಪಾಲಿಕೆಯಿಂದ ಸಿಕ್ಕಿರುವ ಸೌಲಭ್ಯ ಕಡಿಮೆ. ಖಾಸಗಿ ನೆಲೆಯಲ್ಲೇ ಬೆಳೆಯುತ್ತಿದೆ. ಪಾರ್ಕ್‌ನಲ್ಲಿರುವ ಬಾವಿ ನೀರು ಕಲುಷಿತವಾಗಿದೆ. ಗಿಡಗಳ ಬಗ್ಗೆ ನಿರ್ವಹಣೆ ಪೂರ್ಣಮಟ್ಟದಲ್ಲಿ ಆಗುತ್ತಿಲ್ಲ ಎಂಬ ದೂರು ಇಲ್ಲಿನ ಸಾರ್ವಜನಿಕರಿಂದ ವ್ಯಕ್ತವಾಗಿದೆ. 

Advertisement

ಮಕ್ಕಳಿಗೂ-ದೊಡ್ಡವರಿಗೂ ಪೂರಕ ಪರಿಕರ 
‘ವೃತ್ತಿಯಲ್ಲಿ ನಾನು ವೈದ್ಯ. ಈಗ ಪೂರ್ಣಕಾಲಿಕವಾಗಿ ವೃತ್ತಿ ನಿರ್ವಹಿಸುತ್ತಿಲ್ಲ. ಪ್ರತಿ ಸಂಜೆ 4 ರಿಂದ ರಾತ್ರಿ 8ರ ವರೆಗೆ ನಾನು ಈ ಪಾರ್ಕ್‌ ನಲ್ಲಿ ಮಕ್ಕಳ ಜತೆಗೆ ಬೆರೆಯುವೆ. ಇಲ್ಲಿ ಸಿಗುವ ಖುಷಿ ಬೇರೆಲ್ಲೂ ಸಿಗದು. ಪುಟಾಣಿಗಳಿಗೆ ಚಾಕಲೇಟ್‌ ನೀಡುವ ಮೂಲಕ ಅವರ ಖುಷಿಯಲ್ಲಿ ಭಾಗಿಯಾಗುವೆ. ಮಕ್ಕಳು ಆಟವಾಡಲು ವಿಭಿನ್ನ ಮಾದರಿಯ ಜಾರುಬಂಡಿ, ಉಯ್ನಾಲೆ, ವಿಮಾನ ಆಕೃತಿ ಸೇರಿದಂತೆ ವಿವಿಧ ಪರಿಕರಗಳು ಇಲ್ಲಿವೆ. ಅದರ ಜತೆಗೆ ಪೋಷಕರಿಗೆ ಉಪಯೋಗವಾಗುವಂತೆ ವ್ಯಾಯಾಮಕ್ಕೆ ಸಂಬಂಧಿಸಿದ ಪರಿಕರಗಳೂ ಇಲ್ಲಿವೆ. ನೂರಾರು ಮಹಿಳೆಯರು, ಪುರುಷರು ಇದರಲ್ಲಿ ಪಾಲ್ಗೊಳ್ಳುತ್ತಾರೆ’ ಎನ್ನುತ್ತಾರೆ ಮಕ್ಕಳ ಪ್ರೀತಿಯ ಅಜ್ಜ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next