ಕಲಬುರಗಿ: ರಾಜ್ಯಸಭಾ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶನಿವಾರ ಭರ್ಜರಿ ಸ್ವಾಗತ ನೀಡಲಾಗಿದೆ.
ಕಳೆದ ವರ್ಷ ರಾಜ್ಯಸಭಾ ಸದಸ್ಯರಾದ ಬಳಿಕ ಖರ್ಗೆ ಸಂಸತ್ತಿನ ಮೇಲ್ಮನೆಯ ಅಧಿಕೃತ ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡಿದ್ದರು. ತದನಂತರ ಅವರು ಕಲಬುರಗಿ ಜಿಲ್ಲೆಗೆ ಆಗಮಿಸರಲಿಲ್ಲ.
ಸುಮಾರು ಒಂದೂವರೆ ವರ್ಷದ ಬಳಿಕ ಖರ್ಗೆ ಅವರು ಕಲಬುರಗಿಗೆ ಬಂದಿರುವ ಹಿನ್ನಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅದ್ಧೂರಿಯಾಗಿ ಸ್ವಾಗತ ಕೋರಿ ಅಭಿನಂದನಾ ಕಾರ್ಯಕ್ರಮ ಆಯೋಜಸಲಾಗಿದೆ.
ಬೆಂಗಳೂರಿನಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಖರ್ಗೆ ಅವರನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬರ ಮಾಡಿಕೊಂಡರು. ಅಲ್ಲಿಂದ ಬೃಹತ್ ಮೆರವಣಿಗೆಯಲ್ಲಿ ಅವರನ್ನು ಭವಾನಿ ಕಲ್ಯಾಣ ಮಂಟಪದವರಿಗೆ ಕರೆದುಕೊಂಡು ಬರಲಾಯಿತು.
ಮರೆವಣಿಗೆಯುದ್ಧಕ್ಕೂ ಪುಷ್ಪಗಳು ಮಳೆಗೆರೆದು, ಜೆಸಿಬಿ ಮೂಲಕ ಬೃಹತ್ ಮಾಲಾರ್ಪಣೆ ಮಾಡಿದ ನೂರಾರು ಕಾರ್ಯಕರ್ತರು ಜಯ ಘೋಷಗಳನ್ನು ಕೂಗುತ್ತಾ ಕುಣಿದು ಕುಪ್ಪಳಿಸಿದರು.
ಅಭಿನಂದನಾ ಕಾರ್ಯಕ್ರಮದಲ್ಲಿ ಕಲಬುರಗಿ, ಯಾದಗಿರಿ, ಬೀದರ್ ಹಾಗೂ ರಾಯಚೂರು ಸೇರಿ ವಿವಿಧ ಜಿಲ್ಲೆಗಳ ನಾಯಕರು, ಮುಖಂಡರು ಹಾಗೂ ಪ್ರಮುಖರು ಪಾಲ್ಗೊಂಡಿದ್ದಾರೆ.