Advertisement

ಇಸ್ತಾಂಬುಲ್ ವಿ.ನಿಲ್ದಾಣದಲ್ಲಿ 31 ಗಂಟೆಗಳ ಕಾಲ ಸಿಲುಕಿಕೊಂಡ ಗ್ರ್ಯಾಮಿ ವಿಜೇತ ರಿಕಿ ಕೇಜ್

01:12 PM Oct 20, 2022 | Team Udayavani |

ಇಸ್ತಾಂಬುಲ್: ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕಿ ಕೇಜ್ ಅವರು 31 ಗಂಟೆಗಳ ಕಾಲ ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ಸಿಲುಕಿದ ಘಟನೆ ನಡದಿದೆ.

Advertisement

ಅ. 18 ರಂದು ಜರ್ಮನಿಯ ಫ್ರಾಂಕ್‌ಫರ್ಟ್‌ನಿಂದ ಟೇಕ್ ಆಫ್ ಆಗಿದ್ದ ಫ್ರಾಂಕ್‌ಫರ್ಟ್-ಬೆಂಗಳೂರು ಲುಫ್ತಾನ್ಸಾ ವಿಮಾನವು ವೈದ್ಯಕೀಯ ಎಮರ್ಜೆನ್ಸಿ ಕಾರಣದಿಂದ ಟರ್ಕಿಯ ಇಸ್ತಾಂಬುಲ್‌ ನಲ್ಲಿ ತುರ್ತು ಭೂಸ್ಪರ್ಶ ಮಾಡಿತು. ತುರ್ತು ಪರಿಸ್ಥಿತಿ ಮತ್ತು ಕೆಲವು ತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಟೇಕ್ ಆಫ್ ಆಗಬೇಕಿದ್ದ ವಿಮಾನವು ಅಲ್ಲೇ ಬಾಕಿಯಾದ ಕಾರಣ ಪ್ರಯಾಣಿಕರು 31 ಗಂಟೆಗಳ ಕಾಲ ಇಸ್ತಾಂಬುಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ.

ಅದೇ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಎರಡು ಬಾರಿಯ ಗ್ರ್ಯಾಮಿ ಅವಾರ್ಡ್ ವಿನ್ನರ್ ರಿಕಿ ಕೇಜ್ ಟ್ವಿಟರ್ ನಲ್ಲಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

“ಭಾರತೀಯ ಗ್ರಾಹಕರನ್ನು ಲುಫ್ತಾನ್ಸಾ ಹೀಗೆ ಲಘುವಾಗಿ ಪರಿಗಣಿಸುತ್ತದೆ ಎಂಬುದನ್ನು ನಂಬಲಾಗುತ್ತಿಲ್ಲ. ನನ್ನ ಫ್ರಂಕ್‌ಫರ್ಟ್-ಬೆಂಗಳೂರು ವಿಮಾನವು ವೈದ್ಯಕೀಯ ತುರ್ತುಸ್ಥಿತಿಗಾಗಿ ಇಸ್ತಾಂಬುಲ್‌ ನಲ್ಲಿ ಮಂಗಳವಾರ ಸಂಜೆ 7 ಗಂಟೆಗೆ ಇಳಿಯಿತು. ಇದಾಗಿ 17 ಗಂಟೆಗಳ ನಂತರವೂ ಒಂದು ಹೋಟೆಲ್ ವ್ಯವಸ್ಥೆಯಿಲ್ಲ, ಸಿಬ್ಬಂದಿಗಳಿಂದ ಯಾವುದೇ ವಿವರಣೆಯಿಲ್ಲ. 300 ಪ್ರಯಾಣಿಕರು ಸಿಕ್ಕಿಬಿದ್ದಿದ್ದಾರೆ, ಆದರೆ ಯಾವುದೇ ಮಾಹಿತಿಯಿಲ್ಲ.” ಎಂದು ರಿಕಿ ಕೇಜ್ ಬುಧವಾರ ಮಧ್ಯಾಹ್ನ ಟ್ವೀಟ್ ಮಾಡಿದ್ದಾರೆ

ಇದಾದ ನಂತರ ಅವರು ಟರ್ಕಿಯ ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವ ಬಗ್ಗೆ ಮತ್ತೊಂದು ಟ್ವೀಟ್ ಮಾಡಿದ್ದಾರೆ. ” 31 ಗಂಟೆಗಳಿಗೂ ಹೆಚ್ಚು ಸಮಯವಾಯ್ತು. ಇನ್ನೂ ಇಸ್ತಾಂಬುಲ್‌ ನಲ್ಲಿ ಸಿಕ್ಕಿಬಿದ್ದಿದ್ದೇವೆ. ಭಾರತೀಯ ಪ್ರಯಾಣಿಕರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಕ್ಕೆ ಲುಫ್ತಾನ್ಸಾಗೆ ಧನ್ಯವಾದಗಳು. ಅವರಿಂದ ಇನ್ನೂ ಯಾವುದೇ ಹೇಳಿಕೆ ಅಥವಾ ಮಾಹಿತಿ ಬಂದಿಲ್ಲ. ಅವರು ಎಷ್ಟು ಕಾಳಜಿ ವಹಿಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆ. ಎರಡು ಹಾಸಿಗೆಯಿಲ್ಲದ ರಾತ್ರಿಗಳು ಕಳೆದವು, ಲಗೇಜುಗಳಿಗೂ ವ್ಯವಸ್ಥೆಯಿಲ್ಲ” ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Advertisement

ಲುಫ್ಥಾನ್ಸದ ಭಾರತಕ್ಕೆ ಹೋಗುವ ವಿಮಾನ (LH 754) ಮಂಗಳವಾರ ಮಧ್ಯಾಹ್ನ 1:05 ಗಂಟೆಗೆ ಜರ್ಮನಿಯ ಫ್ರಾಂಕ್‌ಫರ್ಟ್‌ನಿಂದ ಬೆಂಗಳೂರಿಗೆ ಟೇಕ್ ಆಫ್ ಆಗಿತ್ತು, ಆದರೆ ವೈದ್ಯಕೀಯ ತುರ್ತು ಪರಿಸ್ಥಿತಿ ಕಾರಣದಿಂದ ವಿಮಾನವು ಇಸ್ತಾಂಬುಲ್‌ನಲ್ಲಿ ಮಧ್ಯಾಹ್ನ 2 ಗಂಟೆಗೆ ತುರ್ತು ಭೂಸ್ಪರ್ಶ ಮಾಡಿತು.

ವಿಮಾನಯಾನ ಸಂಸ್ಥೆಯು ಹೇಳಿಕೆ ಬಿಡುಗಡೆ ಮಾಡಿದ್ದು “ಸುರಕ್ಷತಾ ಕಾರಣಗಳಿಗಾಗಿ, ವೈದ್ಯಕೀಯ ತುರ್ತುಸ್ಥಿತಿಗೆ ಚಿಕಿತ್ಸೆ ನೀಡಲು ಬಳಸುವ ಆಮ್ಲಜನಕ ಸಿಲಿಂಡರ್‌ಗಳನ್ನು ಹಾರಾಟವನ್ನು ಮುಂದುವರಿಸುವ ಮೊದಲು ಬದಲಾಯಿಸಬೇಕಿತ್ತು. ಆದರೆ ಇದು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಇಸ್ತಾಂಬುಲ್‌ ನಿಂದ ಬೆಂಗಳೂರಿಗೆ ವಿಮಾನವು ಸ್ಥಳೀಯ ಸಮಯ ರಾತ್ರಿ 8 ಗಂಟೆಗೆ (ಬುಧವಾರ) ನಿಗದಿಪಡಿಸಲಾಗಿದೆ.” ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next