Advertisement

ಕಾಪು: ಕೋಟೆ ಗ್ರಾ. ಪಂ.ಗೆ ಮರಳಿ ಬಂತು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ

07:47 PM Jun 26, 2022 | Team Udayavani |

ಕಾಪು: ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಕೋಟೆ ಗ್ರಾಮ ಪಂಚಾಯತ್‌ಗೆ ನೀಡಲಾಗಿದ್ದ 1 ಕೋಟಿ ರೂಪಾಯಿ ಅನುದಾನವನ್ನು ಬೊಮ್ಮರಬೆಟ್ಟು ಗ್ರಾಮ ಪಂಚಾಯತ್‌ಗೆ ವರ್ಗಾವಣೆ ಮಾಡಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಆಗಿನ ಗ್ರಾಮ ಪಂಚಾಯತ್ ಆಡಳಿತ ನಡೆಸಿರುವ ಕಾನೂನು ಹೋರಾಟಕ್ಕೆ ಜಯ ದೊರಕಿದೆ ಎಂದು ಕೋಟೆ ಗ್ರಾ. ಪಂ. ಮಾಜಿ ಉಪಾಧ್ಯಕ್ಷ ಮತ್ತು ವಕೀಲ ಗಣೇಶ್ ಕುಮಾರ್ ಮಟ್ಟು ತಿಳಿಸಿದ್ದಾರೆ.

Advertisement

ಜೂ. 26ರಂದು ಕಾಪು ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ರದ್ಧುಗೊಂಡಿದ್ದ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಸಹಿತ 1 ಕೋ. ರೂ. ಅನುದಾನ ಮತ್ತೆ ಮಟ್ಟು ಗ್ರಾಮಕ್ಕೆ ವಾಪಸ್ಸಾಗಿದ್ದು, ಗ್ರಾಮ ಪಂಚಾಯತ್ ಆಡಳಿತವು ಕೂಡಲೇ ಎಚ್ಚೆತ್ತುಕೊಂಡು ಮಟ್ಟು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಕ್ರಿಯಾ ಯೋಜನೆ ಸಿದ್ಧ ಪಡಿಸಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

ಪ್ರಕರಣದ ವಿವರ : 2017 ಅಕ್ಟೋಬರ್ ತಿಂಗಳಲ್ಲಿ ರಾಜ್ಯ ಸರಕಾರ ಕೋಟೆ ಗ್ರಾಮ ಪಂಚಾಯತ್‌ನ ಮಟ್ಟು ಗ್ರಾಮವನ್ನು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ಆಯ್ಕೆ ಮಾಡಿ, ಅನುದಾನದ ಮೊದಲ ಕಂತು 35 ಲಕ್ಷ ರೂ. ವನ್ನು ಕೋಟೆ ಗ್ರಾ.ಪಂ. ನ ಬ್ಯಾಂಕ್ ಖಾತೆಗೆ ಜಮಾ ಮಾಡಿತ್ತು. 2018 ಮಾ. 17ರಂದು ಸರಕಾರ ತನ್ನದೇ ಆದೇಶವನ್ನು ತಿದ್ದುಪಡಿ ಮಾಡಿ, 1 ಕೋಟಿ ರೂ. ಅನುದಾನವನ್ನು ಮಟ್ಟು ಗ್ರಾಮದ ಬದಲಾಗಿ ಬೊಮ್ಮರಬೆಟ್ಟು ಗ್ರಾಮಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿತ್ತು. ಈ ಬಗ್ಗೆ ಆಗಿನ ಕೋಟೆ ಗ್ರಾ. ಪಂ. ಅಧ್ಯಕ್ಷೆ ಕೃತಿಕಾ ರಾವ್ ಅವರು ಪಂಚಾಯತ್ ಪರವಾಗಿ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ದೂರು ದಾಖಲಿಸಿದ್ದರು. ಬಳಿಕ ರದ್ಧುಗೊಂಡಿದ್ದ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯ ಅನುದಾನವನ್ನು ಮಟ್ಟು ಗ್ರಾಮಕ್ಕೆ ವಾಪಸ್ಸು ನೀಡುವಂತೆ 2021 ಡಿ. 28 ರಂದು ಸರಕಾರ ಆದೇಶ ಹೊರಡಿಸಿತ್ತು.

ಅನುದಾನ ವಾಪಸ್ಸಿನ ಬಗ್ಗೆ ಸರಕಾರದ ಆದೇಶ ಬಂದು ಆರು ತಿಂಗಳು ಸಮೀಪಿಸುತ್ತಿದ್ದರೂ ಕೂಡಾ ಹಾಲಿ ಗ್ರಾ.ಪಂ. ಆಡಳಿತವು ಈ ಬಗ್ಗೆ ನಿಷ್ಕ್ರಿಯ ಯತೆ ವಹಿಸಿದ್ದು ಬೊಮ್ಮರಬೆಟ್ಟು ಗ್ರಾ.ಪಂ. ಖಾತೆಯಲ್ಲಿ ಜಮೆಯಾಗಿರುವ 65 ಲಕ್ಷ ರೂ. ವನ್ನು ಕೋಟೆ ಗ್ರಾ.ಪಂ. ಖಾತೆಗೆ ವರ್ಗಾಯಿಸಿಕೊಳ್ಳುವಲ್ಲಿ ವಿಫಲವಾಗಿದೆ. ಈ ಕುರಿತು ಉಡುಪಿ ಜಿ. ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯವರು ಸೂಕ್ತ ಕ್ರಮ ತೆಗೆದು ಕೊಂಡು 65 ಲಕ್ಷ ರೂ. ಅನುದಾನವನ್ನು ಬೊಮ್ಮರಬೆಟ್ಟು ಗ್ರಾ.ಪಂ. ನಿಂದ ಕೋಟೆ ಗ್ರಾ.ಪಂ. ಖಾತೆಗೆ ವರ್ಗಾಯಿಸಿ ಒಟ್ಟು 1 ಕೋಟಿ ಅನುದಾನದ ಕ್ರಿಯಾಯೋಜನೆಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಿ ಮಟ್ಟು ಗ್ರಾಮದಲ್ಲಿ ಆದಷ್ಟು ಬೇಗ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವಂತೆ ಪಂಚಾಯತ್‌ಗೆ ಸೂಚನೆ ನೀಡುವಂತೆ ಅವರು ಆಗ್ರಹಿಸಿದ್ದಾರೆ.

ರಾಜಕೀಯ ದುರುದ್ದೇಶ ಮತ್ತು ಹಿಂದಿನ ಗ್ರಾ.ಪಂ. ಆಡಳಿತವು ಬಿಜೆಪಿ ಬೆಂಬಲಿತವೆಂಬ ಕಾರಣಕ್ಕೆ ಅಂದಿನ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಮಾರ್ಗಸೂಚಿಗಳನ್ನು ಪಾಲಿಸದೇ ಅಧಿಕಾರಿಗಳ ಮೇಲೆ ಪ್ರಭಾವಬೀರಿ, ಸರಕಾರದ ಮೇಲೆ ಒತ್ತಡ ಹೇರಿ ಗ್ರಾಮವನ್ನು ಬದಲಾವಣೆ ಮಾಡಿ ಮಟ್ಟು ಗ್ರಾಮಕ್ಕೆ ಸರಕಾರದಿಂದ ಮಂಜೂರಾಗಿದ್ದ 1 ಕೋಟಿ ಅನುದಾನವನ್ನು ಬೊಮ್ಮರಬೆಟ್ಟು ಗ್ರಾಮಕ್ಕೆ ವರ್ಗಾಯಿಸಿದ್ದು ಇದರಿಂದಾಗಿ ಮಟ್ಟು ಗ್ರಾಮದ ಅಭಿವೃದ್ಧಿಗೆ ತೊಡಕುಂಟಾಗಿತ್ತು. ಕಾನೂನು ಬಾಹಿರವಾಗಿ ಗ್ರಾಮ ಬದಲಾವಣೆಯನ್ನು ಮಾಡಿದ್ದುದರ ವಿರುದ್ಧ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ದಾಖಲಿಸಿದ್ದ ಪರಿಣಾಮ ಮತ್ತು ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದ್ದುದರಿಂದ 65 ಲಕ್ಷ ರೂ. ತನ್ನ ಖಾತೆಯಲ್ಲಿದ್ದರೂ ಬೊಮ್ಮರಬೆಟ್ಟು ಗ್ರಾ.ಪಂ. ಸಿದ್ಧಪಡಿಸಿದ್ದ ಕ್ರಿಯಾ ಯೋಜನೆಯ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ದೊರಕದ ಕಾರಣ ಕಾಮಗಾರಿ ನಡೆಸುವಲ್ಲಿ ವಿಫಲವಾಗಿತ್ತು.

Advertisement

ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯ ಮಾರ್ಗಸೂಚಿ ೧ ಮಾನದಂಡಗಳಂತೆ ಗ್ರಾಮಗಳ ಆಯ್ಕೆ ಮಾಡಿ ಸರಕಾರದ ಅನುಮೋದನೆಯನ್ನು ಪಡೆದ ನಂತರ ಗ್ರಾಮಗಳ ಬದಲಾವಣೆಗೆ ಅವಕಾಶವಿಲ್ಲ ಎನ್ನುವುದನ್ನು ಮನಗಂಡು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಅವರು 2021 ಜೂ. 30ರಂದು ಸರಕಾರಕ್ಕೆ ಪತ್ರ ಬರೆದು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯನ್ನು ಮಟ್ಟು ಗ್ರಾಮದಿಂದ ಬೊಮ್ಮರಬೆಟ್ಟುವಿಗೆ ವರ್ಗಾಯಿಸಿ ಮಾಡಿದ ತಿದ್ದುಪಡಿ ಆದೇಶವನ್ನು ಹಿಂಪಡೆಯುವಂತೆ ಕೇಳಿಕೊಂಡಿದ್ದು, ಅದರಂತೆ ಸರಕಾರ ಡಿ. 28 ರಂದು ಹಿಂದಿನ ಆದೇಶವನ್ನು ತಿದ್ದುಪಡಿ ಮಾಡಿ ಬೊಮ್ಮರಬೆಟ್ಟುವಿನ ಬದಲು ಮಟ್ಟು ಗ್ರಾಮಕ್ಕೆ 1 ಕೋಟಿ ಅನುದಾನವನ್ನು ನೀಡಿ ಕೂಡಲೇಮಟ್ಟು ಗ್ರಾಮದ ಅಭಿವೃದ್ಧಿಗೆ ಬಳಸಿಕೊಂಡು ಉಚ್ಚ ನ್ಯಾಯಾಲಯದಲ್ಲಿರುವ ರಿಟ್ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ತಿಳಿಸಿತ್ತು ಎಂದು ಅವರು ತಿಳಿಸಿದ್ದಾರೆ.

ಮಾಜಿ ತಾ.ಪಂ. ಸದಸ್ಯ ರಾಜೇಶ್ ಅಂಬಾಡಿ, ಉಡುಪಿ ಜಿಲ್ಲಾ ಬಿಜೆಪಿ ವಕ್ತಾರ ಗುರುಪ್ರಸಾದ್ ಬಾಳೆಬೈಲು, ಎಪಿಎಂಸಿ ಸದಸ್ಯ ಗುರುಪ್ರಸಾದ್ ಜಿ.ಎಸ್., ಕುರ್ಕಾಲು ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಗುರುಕೃಪಾ ರಾವ್, ಬಿಜೆಪಿ ಕೋಟೆ ಮಟ್ಟು ಶಕ್ತಿ ಕೇಂದ್ರದ ಕಾರ್ಯದರ್ಶಿ ಹರ್ಷಿತ್ ಪೂಜಾರಿ ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next