Advertisement

ಸೋಲು-ಗೆಲುವಿನ ಲೆಕ್ಕಾಚಾರ

03:15 PM Dec 24, 2020 | Suhan S |

ಹಾವೇರಿ: ಜಿಲ್ಲೆಯಲ್ಲಿ ಮೊದಲ ಹಂತದ ನಾಲ್ಕು ತಾಲೂಕುಗಳ 104 ಗ್ರಾಮ ಪಂಚಾಯಿತಿ ಚುನಾವಣೆ ಮುಗಿದಿದ್ದು, ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

Advertisement

ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ರಂಗು ಪಡೆದಿದ್ದ ವಾತಾವರಣ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ. ಸದ್ಯ ಯಾವುದೇ ಗ್ರಾಮಗಳಿಗೆತೆರಳಿದರೂ ಅಲ್ಲಿನ ಶಾಲೆಗಳ ಆವರಣ,ಹೋಟೆಲ್‌, ಗೂಡಂಗಡಿ, ಅರಳೀಕಟ್ಟೆ, ದೇವಸ್ಥಾನಗಳ ಜಗುಲಿ ಮೇಲೆ ಕುಳಿತುತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾರುಗೆಲ್ಲಬಹುದು? ಯಾರು ಸೋಲಬಹುದು? ಎಂಬ ಲೆಕ್ಕಾಚಾರದ ಮಾತುಗಳೇ ಕೇಳಿ ಬರುತ್ತಿವೆ.

ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು:

ಅಭ್ಯರ್ಥಿಗಳೂ ಅಷ್ಟೆ, ತನಗೆ ಯಾರು ಮತ ನೀಡಿದ್ದಾರೆ, ಯಾವ ಮನೆಯ ಮತಗಳು ಬಂದಿವೆ, ಯಾರು ಕೈಹಿಡಿದಿದ್ದಾರೆ, ಯಾರು ಕೈಕೊಟ್ಟಿದ್ದಾರೆ ಮುಂತಾದ ಲೆಕ್ಕಾಚಾರದಲ್ಲಿ ನಿರತವಾಗಿದ್ದಾರೆ. ಜೊತೆಗೆ ತಾನು ಚುನಾವಣೆಯಲ್ಲಿ ಖರ್ಚು ಮಾಡಿರುವಹಣದ ಬಗ್ಗೆ ಯೋಚನೆ ಮಾಡುತ್ತಾ ಗೆಲುವು ತನ್ನದಾಗಲಿ ಎಂದು ಕಂಡ-ಕಂಡ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಇನ್ನು ಕೆಲವು ಅಭ್ಯರ್ಥಿಗಳು ಮತದಾರರಿಗೆ ಹಣ, ಹೆಂಡ, ಬೆಳ್ಳಿ ಉಂಗುರ, ಸೀರೆ, ಕುಕ್ಕರ್‌, ಕೋಳಿ ಸೇರಿದಂತೆ ವಿವಿಧ ಉಡುಗೊರೆಗಳನ್ನು ನೀಡಿದ್ದು, ಇದರಿಂದ ತನಗೆ ಎಷ್ಟು ಮತಗಳು ಬರುತ್ತವೆ, ತನ್ನ ಗೆಲುವು ನಿಶ್ಚಿತವೇ ಎಂಬ ಚಿಂತನೆಯಲ್ಲಿ ಮುಳುಗಿದ್ದಾರೆ.

Advertisement

ಗರಿಗೆದರಿದ ಕೃಷಿ ಚಟುವಟಿಕೆ:

ಕೂಲಿಕಾರ್ಮಿಕರು ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದರಿಂದ ಗ್ರಾಮೀಣ ಭಾಗದಲ್ಲಿ ಕಳೆದ ಒಂದುವಾರದಿಂದ ಕೃಷಿ ಚಟುವಟಿಕೆಗಳು ಬಹುತೇಕ ಬಂದ್‌ ಆಗಿದ್ದವು. ಕೃಷಿ ಚಟುವಟಿಕೆ, ಕೂಲಿ ಕೆಲಸ ಬಿಟ್ಟು ಅಭ್ಯರ್ಥಿಗಳು ನೀಡುತ್ತಿದ್ದ ಮದ್ಯ, ಕೋಳಿ ಮತ್ತಿತರ ಪದಾರ್ಥಗಳನ್ನು ಪಡೆದುಕೊಂಡು ಆರಾಮವಾಗಿ ಕಾಲಕಳೆದಿದ್ದರು. ಈಗ ಕೃಷಿ ಚಟುವಟಿಕೆಗಳತ್ತ ಮುಖ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕೂಲಿ ಮಾಡಿ ಜೀವನ ನಡೆಸುವ ಜನರು ಕೂಲಿಯನ್ನು ಹುಡುಕಿಕೊಂಡು ಹೊರಡುತ್ತಿದ್ದು, ಕೃಷಿ ಚಟುವಟಿಕೆಗೆ ಮತ್ತೆ ಗರಿಗೆದರುತ್ತಿದೆ.

ಬೆಟ್ಟಿಂಗ್‌ ದಂಧೆ ಜೋರು: ಗ್ರಾಪಂ ಚುನಾವಣೆ ಮುಗಿಯುತ್ತಿದ್ದಂತೆ ಬಹುತೇಕ ಗ್ರಾಮಗಳಲ್ಲಿ ಬೆಟ್ಟಿಂಗ್‌ ದಂಧೆಯೂ ತೆರೆಮರೆಯಲ್ಲಿ ಆರಂಭವಾಗಿದೆ. ಇಂತಹವರೇ ಗೆಲುವು ಸಾಧಿಸುತ್ತಾರೆ ಎಂದು ಹಣ, ವಾಹನ, ಹೆಚ್ಚು ಬೆಲೆ ಬಾಳುವ ಮೊಬೈಲ್‌ಗ‌ಳನ್ನು ಪಣಕ್ಕೆಇಡಲು ಮುಂದಾಗುತ್ತಿದ್ದಾರೆ. ಫಲಿತಾಂಶ ಹೊರಬರಲು ಇನ್ನು ಏಳು ದಿನ ಬಾಕಿಇದ್ದು, ಅಲ್ಲಿಯವರೆಗೆ ಬೆಟ್ಟಿಂಗ್‌ ಕಾರ್ಯ ಮುಂದುವರಿಯಲಿದೆ. ಒಟ್ಟಿನಲ್ಲಿ ಜಿಲ್ಲೆಯ ಹಾವೇರಿ,ರಾಣಿಬೆನ್ನೂರು, ಹಿರೇಕೆರೂರು ಹಾಗೂ ರಟ್ಟಿಹಳ್ಳಿಯ ತಾಲೂಕಿನ ಆಯಾ ಮತ ಏಣಿಕೆ ಕೇಂದ್ರಗಳಲ್ಲಿ ಮತದಾರರು ಬರೆದ ಭವಿಷ್ಯ ಭದ್ರವಾಗಿದ್ದು, ಅಭ್ಯರ್ಥಿಗಳ ಎದೆಯೂ ಢವಗುಡುತ್ತಿದೆ. ಚುನಾವಣೆಯಲ್ಲಿ ಗೆಲುವು ಯಾರು, ಯಾರಿಗೆ ಒಲಿಯುತ್ತದೆಎಂಬುದನ್ನು ತಿಳಿಯಲು ಡಿ.30ರ ವರೆಗೆ ಕಾಯಲೇಬೇಕು.

ಈ ಬಾರಿಯ ಗ್ರಾಪಂ ಚುನಾವಣೆ ತುರುಸಿನಿಂದ ಕೂಡಿತ್ತು. ಕಳೆದ ಒಂದು ವಾರದಿಂದ ಗ್ರಾಮಗಳಲ್ಲಿ ಪ್ರಚಾರದ ಅಬ್ಬರಜೋರಾಗಿತ್ತು. ಅಭ್ಯರ್ಥಿಗಳು ಮತದಾರನ್ನು ಓಲೈಸುವ ದೃಶ್ಯಗಳುಕಂಡು ಬರುತ್ತಿದ್ದವು. ಸದ್ಯ ಚುನಾವಣೆ ಭರಾಟೆ ಮುಗಿದಿದ್ದು, ಎಲ್ಲರೂ ಮತ್ತೆ ತಮ್ಮ ತಮ್ಮ ಕಾರ್ಯಗಳಲ್ಲಿತೊಡಿಗಿದ್ದರಿಂದ ಗ್ರಾಮಗಳಲ್ಲಿ ಸಹಜಸ್ಥಿತಿ ಕಂಡು ಬರುತ್ತಿದೆ. ಸಂತೋಷ ದಶಮನಿ, ಯಲಗಚ್ಚ ಗ್ರಾಮಸ್ಥ

 

-ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next