ಬೇಲೂರು: 2ನೇ ಹಂತದ ಗ್ರಾಪಂ ಚುನಾವಣೆಗೆ ಕೇವಲ 1 ದಿನ ಬಾಕಿ ಇದ್ದು, ತಾಲೂಕಿನಲ್ಲಿ ಸ್ಪರ್ಧಿಸಿ ರುವ ಅಭ್ಯರ್ಥಿಗಳು ಮತದಾರರ ಓಲೈಸಿಕೊಳ್ಳಲು ಕೊನೆಯ ಪ್ರಯತ್ನ ನಡೆಸುತ್ತಿದ್ದಾರೆ.
ತಾಲೂಕಿನ 37 ಗ್ರಾಪಂನ 233 ಕ್ಷೇತ್ರಗಳಲ್ಲಿ 423 ಸ್ಥಾನಕ್ಕೆ ಮತದಾನ ನಡೆಯಬೇಕಿತ್ತು. ಅದರಲ್ಲಿ 34 ಸ್ಥಾನ ಅವಿರೋಧ ಆಯ್ಕೆ ಆಗಿದ್ದು, 379 ಸ್ಥಾನಗಳಿಗೆ ಮತದಾನ ನಡೆಯಲಿದೆ. ಒಟ್ಟು 1,34,390 ಮತದಾರರಿದ್ದು, 68,250 ಪುರುಷ, 66,136 ಮಹಿಳಾ ಮತದಾರರು ಹಕ್ಕು ಚಲಾಯಿಸಲಿದ್ದಾರೆ.
ಈಗಾಗಲೇ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮುಖಂಡರು ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದು, ಮೂರೂ ಪಕ್ಷಗಳು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಹಳ್ಳಿಗಳನ್ನು ಸುತ್ತಿ ಪ್ರಚಾರ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಕಳೆದ ಮಳೆಗಾಲದಲ್ಲಿ ಕುಸಿದ ಮನೆಗೆ ಬಂದ ಪರಿಹಾರ ಕೇವಲ 3,200 ರೂ.!
ಪಕ್ಷಗಳಿಗಿಂತ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿರುವ ವ್ಯಕ್ತಿಗಳನ್ನು ಆರಿಸಲು ಮತದಾರರು ಸನ್ನದ್ಧರಾಗಿದ್ದಾರೆ. ಈ ಬಾರಿ ವಿದ್ಯಾವಂತರೇ ಹೆಚ್ಚು ಸ್ಪರ್ಧೆ ಮಾಡಿದ್ದು, ಅದರಲ್ಲೂ ಸಭ್ಯರು, ಸರಳ ವ್ಯಕ್ತಿಗಳನ್ನು ಚುನಾಯಿಸಲು ಸದ್ದು ಗದ್ದಲ ಇಲ್ಲದೆ
ಮತದಾರರು ತಯಾರಿ ನಡೆಸಿದ್ದಾರೆ.
ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಚುನಾವಣೆಗೆ ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದಾರೆ. ಅದರ ಜೊತೆ ಮದ್ಯ, ಮಾಂಸ ಪಾರ್ಟಿ ನಡೆಯುತ್ತಿದ್ದರೆ, ಕೆಲವು ಕಡೆ ಮನೆಗಳಿಗೆ ಕೋಳಿ ಮಾಂಸ, ಹಣ ವಿತರಿಸುತ್ತಿದ್ದಾರೆ ಎಂಬ ವದಂತಿ ಕೂಡ ಹಬ್ಬಿದೆ.
– ಡಿ.ಬಿ. ಮೋಹನ್‌ಕುಮಾರ್