ಬೆಳ್ತಂಗಡಿ, ಡಿ. 23: ತಾಲೂಕು ವ್ಯಾಪ್ತಿಯಲ್ಲಿ ಈ ಬಾರಿ ಸುರಿದ ಭಾರೀ ಮಳೆಯಿಂದ ಸಂತ್ರಸ್ತರ ರಕ್ಷಣೆಗಾಗಿ ಕಾಳಜಿ ಕೇಂದ್ರ ತೆರೆಯಲಾಗಿತ್ತು. ಆದರೆ ಕಾಳಜಿ ಕೇಂದ್ರದ ಖರ್ಚು ವೆಚ್ಚ ಪಾವತಿಸುವಂತೆ ಗ್ರಾ.ಪಂ. ಅದೆಷ್ಟು ಬಾರಿ ಕಂದಾಯ ಇಲಾಖೆ ಅಧಿಕಾರಿಗಳಲ್ಲಿ ವಿನಂತಿಸಿದರೂ ಪಾವತಿಸದೆ ಬಾಕಿ ಇಟ್ಟಿದೆ.
ಮಿತ್ತಬಾಗಿಲು ಗ್ರಾ.ಪಂ. ವ್ಯಾಪ್ತಿಯ ಗಣೇಶ ನಗರದ 16 ಸಂತ್ರಸ್ತ ಕುಟುಂಬವನ್ನು ಇಲ್ಲಿನ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಒಟ್ಟು 18 ದಿನ ಕಾಳಜಿ ಕೇಂದ್ರ ತೆರೆದ ಬಗ್ಗೆ ಆದ ಖರ್ಚು ವೆಚ್ಚಗಳ ಬಿಲ್ ಸಹಿತ ಕಂದಾಯ ಇಲಾಖೆಗೆ ನೀಡಲಾಗಿತ್ತು.
ಬಾಕಿ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತಂದ ವೇಳೆ ಪಾವತಿಗೆ ಕಂದಾಯ ಇಲಾಖೆಗೆೆ ಸೂಚಿಸಿದ್ದರು. ಆದರೆ ಸಂಬಂಧಿಸಿದ ಅಧಿಕಾರಿಗಳ ಬಳಿ ವಿಚಾರಿಸಿದರೆ ಉತ್ತರ ಸಿಗುತ್ತಿಲ್ಲ ಎಂದು ಗ್ರಾ.ಪಂ. ಅಧಿಕಾರಿಗಳೇ ಹೇಳಿಕೊಂಡಿದ್ದಾರೆ. ಇದರಿಂದಾಗಿ ಸಂಬಂಧಿತ ಎಲ್ಲರಿಗೂ ತೊಂದರೆಯಾಗಿದೆ.
ದಿನಸಿ, ತರಕಾರಿ, ಹಾಲು ಮೊಟ್ಟೆ ಇತ್ಯಾದಿ ಸಾಮಗ್ರಿಗಳನ್ನು ಒದಗಿಸಿದ ಬಗ್ಗೆ ಕಾಜೂರು ಮಿತ್ತಬಾಗಿಲು ನಾರಾಯಣ ಪಾಟಾಳಿ ಅವರ ಬಿಲ್ 54,700 ರೂ. ಆಗಿತ್ತು. ಅಡುಗೆ ಸಿಬಂದಿಯವರ ವೇತನ, ರಿಕ್ಷಾ ಬಾಡಿಗೆ, ಕಾಳಜಿ ಕೇಂದ್ರದ ಸ್ವತ್ಛತೆ ಬಗ್ಗೆ, ಕಾಳಜಿ ಕೇಂದ್ರಕ್ಕೆ ಜನರೇಟರ್ ಮತ್ತು 10 ಟ್ಯೂಬ್‌ಲೈಟ್ ಒದಗಿಸಿದ ಖರ್ಚು ವೆಚ್ಚ ಒಟ್ಟು 77,960 ರೂ. ಎರಡು ಬಿಲ್ ಸೇರಿ ಒಟ್ಟು 1,32,660 ರೂ. ಪಾವತಿಸಬೇಕಿದೆ. ಇದರಲ್ಲಿ ಒಂದು ಬಿಲ್ ಈಗಾಗಲೇ ನೀಡಲಾಗಿದೆ ಎಂದು ಮಿತ್ತಬಾಗಿಲು ಗ್ರಾ.ಪಂ. ಪಿಡಿಒ ಜಯಕೀರ್ತಿ ತಿಳಿಸಿದ್ದಾರೆ.
ಕೆಲ ತಾಂತ್ರಿಕ ತೊಂದರೆಗಳಿಂದ ಪಾವತಿ ತಡವಾಗಿದೆ. ಈಗಾಗಲೇ ಎರಡು ದಿನಗಳ ಹಿಂದೆ ಒಂದು ಬಿಲ್ ಪಾವತಿಸಲಾಗಿದೆ. ಉಳಿದ ಬಿಲ್ ಶೀಘ್ರದಲ್ಲಿ ಪಾವತಿ ಮಾಡಲಾಗುವುದು. –
ಮಹೇಶ್ ಜೆ., ತಹಶೀಲ್ದಾರ್
-ವಿಶೇಷ ವರದಿ