Advertisement
ಇದು ರಾಜ್ಯ ಚುನಾವಣ ಆಯೋಗವು ರಾಜ್ಯ ಸರಕಾರಕ್ಕೆ ಬರೆದಿದ್ದ ಪತ್ರದಲ್ಲಿ ಉಲ್ಲೇಖೀಸಿರುವ ಪ್ರಮುಖ ಅಂಶ. ಆಯೋಗವು ಗ್ರಾ.ಪಂ. ಚುನಾವಣೆ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ನ್ಯಾಯಾಲಯವೂ ಚುನಾವಣೆಗೆ ಒಲವು ತೋರಿದೆ. ಬಹುತೇಕ ಜನಪ್ರತಿನಿಧಿಗಳು ಕೂಡ ಚುನಾವಣೆ ಪರ ಇದ್ದಾರೆ. ಗ್ರಾಮೀಣ ಭಾಗದ ಜನರೂ ಎಲೆಕ್ಷನ್ ಎದುರಿಸಲು ಸಿದ್ಧರಿದ್ದಾರೆ. ಆದರೆ ಸರಕಾರ ಮಾತ್ರ ಅರೆ ಮನಸ್ಸಿನಲ್ಲಿದೆ.
ಅನ್‌ಲಾಕ್ ಅನಂತರ ಕೊರೊನಾ ನಿಯಂತ್ರಣ ಮಾರ್ಗಸೂಚಿ ಪ್ರಕಾರ ಎಲ್ಲ ರೀತಿಯ ಚಟುವಟಿಕೆಗಳೂ ಆರಂಭವಾಗಿವೆ. ಬಿಹಾರದಲ್ಲಿ ವಿಧಾನಸಭೆ ಚುನಾವಣೆ, ದೇಶಾದ್ಯಂತ ಕೆಲವು ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆ ನಡೆಯುತ್ತಿದೆ. ರಾಜ್ಯದಲ್ಲಿ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ, ವಿಧಾನಪರಿಷತ್‌ನ ಎರಡು ಶಿಕ್ಷಕರ ಮತ್ತು ಎರಡು ಪದವೀಧರ ಕ್ಷೇತ್ರಗಳ ಚುನಾವಣೆಯೂ ನಡೆಯುತ್ತಿದೆ.
Related Articles
Advertisement
ಆಡಳಿತಾಧಿಕಾರಿ ನೇಮಕರಾಜ್ಯದ 5,800 ಗ್ರಾ.ಪಂ.ಗಳ ಅವಧಿ ಮುಕ್ತಾಯವಾಗಿದ್ದು, ಜುಲೈಯಲ್ಲಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಧಿಕಾರಿಗಳು ಮತ್ತು ಜನಸಾಮಾನ್ಯರ ನಡುವಿನ ಸಂಪರ್ಕ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಜನಪ್ರತಿನಿಧಿಗಳು ಇಲ್ಲದಿರುವುದರಿಂದ ಸರಕಾರದ ಯೋಜನೆಗಳು ನೇರವಾಗಿ ಜನರಿಗೆ ತಲುಪಿಸಲು ಸಾಧ್ಯ ವಾಗುತ್ತಿಲ್ಲ ಎಂಬ ಮಾತಿದೆ. ನಾಳೆ ಕೋರ್ಟ್ ತೀರ್ಮಾನ
ಗ್ರಾ.ಪಂ. ಚುನಾವಣೆಯ ಗೊಂದಲಗಳ ನಡುವೆ ರಾಜ್ಯ ಹೈಕೋರ್ಟ್ ಅ. 16ರಂದು ಈ ಬಗ್ಗೆ ವಿಚಾರಣೆ ನಡೆಸಲಿದೆ. ಅಂದೇ ಕೋರ್ಟ್ ಈ ಬಗ್ಗೆ ಆದೇಶವನ್ನೂ ನೀಡುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ. ಅನಂತರ ತೀರ್ಮಾನ ತೆಗೆದು ಕೊಳ್ಳುವ ಇಚ್ಛೆ ಸರಕಾರದ್ದಾಗಿದೆ. ಚುನಾವಣೆ ಬೇಕು
ಜನಪ್ರತಿನಿಧಿಗಳಿದ್ದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ.
ಅಧಿಕಾರಿಗಳಿಂದ ಪ್ರವಾಹದಂಥ ಸ್ಥಿತಿ ನಿರ್ವಹಣೆ ಮಾಡಲು ಆಗುತ್ತಿಲ್ಲ.
ಮಾರ್ಗಸೂಚಿ ಅನುಸರಿಸಿ ಚುನಾವಣೆ ನಡೆಸಬಹುದು.
ಜನರಿಗೆ ಅಧಿಕಾರ ಕೊಟ್ಟರೆ ಜನರ ಮಟ್ಟದಲ್ಲಿ ಸಮಸ್ಯೆ ಪರಿಹಾರ ಸಾಧ್ಯ.
ಗ್ರಾ.ಪಂ. ಮಟ್ಟದಲ್ಲಿ ದೊಡ್ಡ ಪ್ರಮಾಣದ ಜನದಟ್ಟಣೆಯಾಗದು.
ಸ್ಥಳೀಯ ಸಂಸ್ಥೆಗಳನ್ನು ಅಧಿಕಾರ ವಂಚಿತವಾಗಿಸಬಾರದು. ಚುನಾವಣೆ ಬೇಡ
ಗ್ರಾಮೀಣ ಭಾಗದ ಜನರ ನಿಯಂತ್ರಣ ಕಷ್ಟ.
ಕೊರೊನಾ ಮತ್ತಷ್ಟು ಏರಿಕೆಯಾಗಬಹುದು.
ಕೊರೊನಾ ನಿಯಮ ಪಾಲನೆಯಾಗದಿರಬಹುದು.
ಗುಂಪು ಗುಂಪಾಗಿ ಮತದಾನಕ್ಕೆ ಬರುತ್ತಾರೆ.
ಈಗ ಸರಕಾರ ಚುನಾವಣೆ ಕಡೆ ಗಮನ ಕೊಡಲು ಅಸಾಧ್ಯ.
ಗ್ರಾಮೀಣ ಮಟ್ಟದಲ್ಲಿ ಆರ್ಥಿಕ ಹೊರೆಯಾಗುತ್ತದೆ. ನಡೆಯದ ಗ್ರಾಮ ಸಭೆ
ಗ್ರಾ.ಪಂ. ಸದಸ್ಯರ ಅವಧಿ ಮುಗಿದ ಮೇಲೆ ಮೂರ್ನಾಲ್ಕು ಪಂ.ಗೆ ಒಬ್ಬರಂತೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಇವರು ಪಂಚಾಯತ್ ಕಾರ್ಯ ಚಟುವಟಿಕೆಗಳಲ್ಲಿ ಪ್ರತೀ ದಿ ನವೂ ತೊಡಗಿಸಿಕೊಳ್ಳಲಾಗುತ್ತಿಲ್ಲ. ಆಡಳಿತಾಧಿಕಾರಿಗಳ ಅವಧಿಯಲ್ಲಿ ಬಹುತೇಕ ಕಡೆಗಳಲ್ಲಿ ಗ್ರಾಮ ಸಭೆಗಳೇ ನಡೆದಿಲ್ಲ. ಇದರಿಂದ ಯೋಜನೆಗಳ ಫಲಾನುಭವಿಗಳ ಆಯ್ಕೆಯೂ ಕಷ್ಟವಾಗುತ್ತಿದೆ. ಚುನಾವಣಾ ಆಯೋಗ ಸಿದ್ಧ
ರಾಜ್ಯ ಚುನಾವಣ ಆಯೋಗವು ಚುನಾವಣೆ ನಡೆಸಲು ಎಲ್ಲ ರೀತಿಯಲ್ಲೂ ಸಜ್ಜಾಗಿರುವಾಗ ಮುನ್ನಚ್ಚರಿಕೆ ಕ್ರಮಗಳೊಂದಿಗೆ ಚುನಾವಣೆ ನಡೆಸಬಹುದು. ಸರಕಾರ ಗಟ್ಟಿ ಮನಸ್ಸು ಮಾಡಬೇಕು ಎಂದು ಪಕ್ಷಾತೀತವಾಗಿ ಶಾಸಕರೂ ಹೇಳುತ್ತಾರೆ. ಒಂದೆಡೆ ಚುನಾವಣೆ ಮಾಡಲು ನಾವು ತಯಾರಿದ್ದೇವೆ ಎಂದು ಹೇಳುವ ಸರಕಾರವು ಮತ್ತೂಂದೆಡೆ ಕೊರೊನಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಸ್ವಲ್ಪ ಕಾಲ ಮುಂದೂಡುವುದು ಸೂಕ್ತವೇನೋ ಎಂಬ ವಾದ ಮುಂದಿಡುತ್ತಿದೆ. ಜತೆಗೆ, ವಿದ್ಯಾಗಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗ್ರಾ.ಪಂ. ಚುನಾವಣೆಯನ್ನೂ ಮುಂದೂಡುವುದು ಸೂಕ್ತ ಎಂಬುದು ಗ್ರಾಮೀಣ ಜನರ ಅಭಿಪ್ರಾಯ ಎಂದು ಸರಕಾರ ಪ್ರತಿಪಾದಿಸುತ್ತಿದೆ. ಕಾಯ್ದೆ ಪ್ರಕಾರ ಅವಧಿ ಅಂತ್ಯಗೊಳ್ಳುವ ಮೊದಲು ಪಂಚಾಯತ್‌ಗಳಿಗೆ ಚುನಾವಣೆ ನಡೆಯಬೇಕು. ಮೀಸಲಾತಿ ಮತ್ತು ಚುನಾವಣ ಅಧಿಸೂಚನೆ ಹಾಗೂ ವೇಳಾಪಟ್ಟಿ ಪ್ರಕಟನೆಯ ನಡುವೆ 45 ದಿನಗಳ ಅಂತರ ಇರಬೇಕು. ಈಗಾಗಲೇ ಕೋವಿಡ್ ಕಾರಣಕ್ಕೆ ವಿಳಂಬವಾಗಿದೆ. ಆದಷ್ಟು ಬೇಗ ಚುನಾವಣೆ ನಡೆಯಬೇಕು. ಆಯೋಗ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
– ಡಾ| ಬಿ. ಬಸವರಾಜು, ರಾಜ್ಯ ಚುನಾವಣ ಆಯುಕ್ತ. ಗ್ರಾ.ಪಂ. ಚುನಾವಣೆ ನಡೆಸಲು ನಾವು ತಯಾರಿದ್ದೇವೆ. ನಮಗೇನೂ ಸಮಸ್ಯೆಯಿಲ್ಲ, ಅಭ್ಯಂತರವೂ ಇಲ್ಲ. ಇದನ್ನು ಚುನಾವಣ ಆಯೋಗಕ್ಕೂ ಸ್ಪಷ್ಟವಾಗಿ ತಿಳಿಸಿದ್ದೇವೆ. ಆದರೆ ಕೊರೊನಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಸ್ವಲ್ಪ ಮುಂದಕ್ಕೆ ಹಾಕಿದರೆ ಒಳ್ಳೆಯದು ಎಂದು ಹೇಳಿದ್ದೇವೆ.
– ಕೆ.ಎಸ್. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಸಚಿವ ಕೊರೊನಾ ಜತೆಗೆ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳುವ ಅಗತ್ಯವಿದೆ. ಗ್ರಾ.ಪಂ.ಗಳಿಗೂ ಜನಪ್ರತಿನಿ ಧಿಗಳನ್ನು ಆಯ್ಕೆ ಮಾಡುವ ಅಗತ್ಯವಿದೆ. ಚುನಾವಣ ಆಯೋಗ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡು ಚುನಾವಣೆ ನಡೆಸಬಹುದು.
– ಬಿ. ಶ್ರೀರಾಮುಲು, ಸಮಾಜ ಕಲ್ಯಾಣ ಸಚಿವ ಕರ್ನಾಟಕ ಗ್ರಾಮ ಸ್ವರಾಜ್ ಕಾಯ್ದೆ ಪ್ರಕಾರ ಗ್ರಾ.ಪಂ.ಗಳ ಚುನಾವಣೆಯನ್ನು ಮುಂದೂಡಲು ಅವಕಾಶವಿಲ್ಲ. ಈಗಾಗಲೇ ರಾಜ್ಯ ಸರಕಾರವು 6 ತಿಂಗಳ ಅವಧಿಗೆ ಚುನಾವಣೆ ಮುಂದೂಡಿ ಆಡಳಿತಾಧಿಕಾರಿಗಳ ನೇಮಕ ಮಾಡಿದೆ. ಆಡಳಿತಾಧಿಕಾರಿಗಳನ್ನು ಆರು ತಿಂಗಳುಗಳಿಗಿಂತ ಹೆಚ್ಚಿನ ಅವಧಿಗೆ ಮುಂದುವರೆಸಲು ಸಾಧ್ಯವಿಲ್ಲ.
ಸಿ. ನಾರಾಯಣಸ್ವಾಮಿ, ಕರ್ನಾಟಕ ಪಂ. ರಾಜ್ ಪರಿಷತ್, ಕಾರ್ಯಾಧ್ಯಕ್ಷ ಪಂಚಾಯತ್ ಚುನಾವಣೆ…. ಮಾಜಿ ಅಧ್ಯಕ್ಷರ ಹೇಳಿಕೆಗಳು
ಚುನಾವಣೆ ನಡೆದರೆ ಕೋವಿಡ್ ಕಾರಣ ಸಂಚಾರಕ್ಕೆ, ಗುಂಪು ಸೇರಲು, ಪ್ರಚಾರಕ್ಕೆ ಸಮಸ್ಯೆಯಾಗಬಹುದು. ಆದರೆ ಅಭಿವೃದ್ಧಿ ಕೆಲಸಗಳು ತ್ವರಿತಗತಿಯಲ್ಲಿ ನಡೆಯಲು ಆಡಳಿತ ಮಂಡಳಿ ಇದ್ದರೆ ಸೂಕ್ತ. ಜನರ ಆಶೋತ್ತರ ಈಡೇರಲು ಚುನಾವಣೆ ನಡೆದರೆ ಒಳ್ಳೆಯದು. ಆಡಳಿತ ಮಂಡಳಿ ಇದ್ದಲ್ಲಿ ಸ್ಥಳೀಯ ಸರಕಾರವಾಗಿ ಕೆಲಸ ಮಾಡಲಿದೆ. ಹೀಗಾಗಿ ಚುನಾವಣೆ ಘೋಷಣೆಯಾದರೆ ಉತ್ತಮ.
– ಗೋಪಾಲಕೃಷ್ಣ ಕುಕ್ಕಳ, ಗ್ರಾ.ಪಂ. ಮಾಜಿ ಅಧ್ಯಕ್ಷ, ಮಡಂತ್ಯಾರು ಹಿಂದಿನ ಆಡಳಿತ ಮಂಡಳಿ ವಿಸರ್ಜನೆಗೊಂಡ ಬಳಿಕ ಗ್ರಾಮದಲ್ಲಿ ಹೊಸ ಯೋಜನೆಗಳು ಅನುಷ್ಠಾನಗೊಂಡಿಲ್ಲ. ಆಡಳಿತಾಧಿಕಾರಿಗಳಿಗೆ ಇತರ ಒತ್ತಡಗಳ ಮಧ್ಯೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶೀಘ್ರದಲ್ಲಿ ಚುನಾವಣೆ ನಡೆಸುವುದು ಅತೀ ಅಗತ್ಯ. ಈಗ ಜನರ ಸಮಸ್ಯೆಗಳನ್ನು ಬಗೆಹರಿಸಲು ಗ್ರಾ.ಪಂ. ಜನಪ್ರತಿನಿಧಿಗಳ ಬಳಿ ಅಧಿಕಾರ ಇಲ್ಲ. ಆಡಳಿತಾಧಿಕಾರಿ ನೇಮಕ ಸರಿಯಾದ ಕ್ರಮವಲ್ಲ. ಶೀಘ್ರವೇ ಗ್ರಾ.ಪಂ.ಗಳಿಗೆ ಚುನಾವಣೆ ನಡೆಯಬೇಕಿದೆ.
ಅಬ್ದುಲ್ ರಝಾಕ್ ಕುಕ್ಕಾಜೆ, ಮಾಜಿ ಅಧ್ಯಕ್ಷರು, ಇರಾ ಗ್ರಾ.ಪಂ. ಅಭಿವೃದ್ಧಿಗೆ ವೇಗ, ಆಯಾ ಗ್ರಾಮಗಳಲ್ಲಿ ಜನರಿಗೆ ಸ್ಪಂದಿಸಲು ಗ್ರಾ.ಪಂ. ಆಡಳಿತದ ಆವಶ್ಯಕತೆ ಇದೆ. ನಾಲ್ಕೈದು ಗ್ರಾ.ಪಂ.ಗಳ ಜವಾಬ್ದಾರಿಯನ್ನು ಒಬ್ಬ ಆಡಳಿತಾಧಿಕಾರಿಗೆ ವಹಿಸಿರುವ ಕಾರಣ ಕೆಲಸ ಕಾರ್ಯ ವೇಗವಾಗಿ ನಡೆಯಲು ಸಾಧ್ಯವಿಲ್ಲ. ಹಾಗಾಗಿ ಚುನಾವಣೆ ಬೇಗ ಆಗಬೇಕು. ಚುನಾಯಿತ ಜನಪ್ರತಿನಿಧಿಗಳ ಆಡಳಿತ ಬರಬೇಕು. ಕೋವಿಡ್ ಸುರಕ್ಷಾ ನಿಯಮ ಪಾಲನೆಯೊಂದಿಗೆ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಬೇಕು.
– ಅನಸೂಯಾ, ಮಾಜಿ ಅಧ್ಯಕ್ಷರು, ಪೆರುವಾಜೆ ಗ್ರಾ.ಪಂ. ಬೇಗ ಮತದಾನ ಆದರೆ ಉತ್ತಮ. ಈಗಾಗಲೇ ಅವಧಿ ಮುಗಿದು ಆರು ತಿಂಗಳು ಸಮೀಪಿಸುತ್ತಿದೆ. ವಾರ್ಡ್‌ವಾರು ಚುನಾಯಿತ ಸದಸ್ಯರಿದ್ದರೆ ವಾರ್ಡ್‌ನಲ್ಲಿ ಯಾವುದೇ ಸಮಸ್ಯೆಗಳು ಬಂದಾಗ ಜನರು ನೇರವಾಗಿ ಅವರನ್ನು ಸಂಪರ್ಕಿಸಲು ಸುಲಭವಾಗುತ್ತದೆ. ಆಡಳಿತಾಧಿಕಾರಿ ವ್ಯವಸ್ಥೆಯಿಂದ ಜನರಿಗೆ ನೇರವಾಗಿ ಸಂಪರ್ಕ ಮಾಡಲು ಕಷ್ಟ. ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿ ಎಚ್ಚರಿಕೆ ವಹಿಸಿ ಚುನಾವಣೆ ನಡೆಸಬೇಕು.
– ಬೇಬಿ ಜಯರಾಮ ಪೂಜಾರಿ, ಮಾಜಿ ಅಧ್ಯಕ್ಷರು, ಬೆಟ್ಟಂಪಾಡಿ ಗ್ರಾ.ಪಂ. ಸ್ಥಳೀಯ ಅಭಿವೃದ್ದಿಗೆ ವೇಗ ಸಿಗಬೇಕಿದ್ದರೆ ಗ್ರಾ.ಪಂ ಚುನಾವಣೆ ನಡೆದು ಆಡಳಿತ ಇರಬೇಕು. ಆದರೆ ಕೋವಿಡ್ -19 ಹರಡದ ರೀತಿಯಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸುವುದು ಅತೀ ಅಗತ್ಯ.
– ರಾಜೇಶ್ ರಾವ್, ಮಾಜಿ ಅಧ್ಯಕ್ಷರು, ಕುಕ್ಕುಂದೂರು ಗ್ರಾ.ಪಂ. ಕಳೆದ ಮೇ – ಜೂನ್‌ನಲ್ಲಿ ಗ್ರಾ.ಪಂ. ಸದಸ್ಯರು, ಅಧ್ಯಕ್ಷರ ಅಧಿಕಾರವಧಿ ಮುಕ್ತಾಯಗೊಂಡಿದ್ದು, ಅಲ್ಲಿಂದ ಗ್ರಾಮದ ಅಭಿವೃದ್ಧಿಯೇ ಕುಂಠಿತಗೊಂಡಿದೆ. ಆಡಳಿತಾಧಿಕಾರಿಗಳಿಗೆ ಉಸ್ತುವಾರಿ ಹೊಣೆ ವಹಿಸಿದ್ದರೂ ಅವರು 15 ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ಬಂದು ಹೋಗುತ್ತಾರೆ. ಪಿಡಿಒ ಅವರೊಬ್ಬರಿಂದ ಎಲ್ಲದಕ್ಕೂ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗ ಚುನಾವಣೆ ನಡೆದರೆ ಗ್ರಾಮಸ್ಥರಿಗೆ ಪ್ರಯೋಜನವಾಗಲಿದೆ. ಬೇರೆ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯನ್ನೇ ನಡೆಸುತ್ತಿದ್ದಾರೆ. ಇಲ್ಲಿ ಪಂಚಾಯತ್ ಚುನಾವಣೆ ಯಾಕೆ ಸಾಧ್ಯವಿಲ್ಲ?
– ಅಕ್ಷತ್ ಶೇರೆಗಾರ್, ಮಾಜಿ ಅಧ್ಯಕ್ಷರು, ಬಳ್ಕೂರು ಗ್ರಾ.ಪಂ. ಜನಪ್ರತಿನಿಧಿಗಳು ಆಡಳಿತ ನಡೆಸುವುದಕ್ಕೂ ಆಡಳಿತಾಧಿಕಾರಿಗಳ ಆಡಳಿತಕ್ಕೂ ವ್ಯತ್ಯಾಸ ಏನು ಎನ್ನುವುದು ಗ್ರಾಮಸ್ಥರಿಗೆ ಈಗ ಗೊತ್ತಾಗುತ್ತಿದೆ. ಜನರ ಯಾವುದೇ ಸಮಸ್ಯೆಗಳಿಗೆ ಸ್ಪಂದನೆಯೇ ಸಿಗುತ್ತಿಲ್ಲ. ಮಳೆಗಾಲದಲ್ಲಿ ಚರಂಡಿ ತುಂಬಿ ರಸ್ತೆಯಲ್ಲಿಯೇ ನೀರು ಹರಿಯುತ್ತಿದ್ದರೂ ಯಾರೂ ಗಮನಕೊಡುತ್ತಿಲ್ಲ. ಆದಷ್ಟು ಬೇಗ ಪಂಚಾಯತ್ ಚುನಾವಣೆ ಆಗಬೇಕು.
– ಆನಂದ ಬಿಲ್ಲವ, ಮಾಜಿ ಅಧ್ಯಕ್ಷರು, ತಲ್ಲೂರು ಗ್ರಾ.ಪಂ. ಗ್ರಾ.ಪಂ. ಚುನಾವಣೆಯನ್ನು ಇನ್ನಷ್ಟು ಕಾಲ ಮುಂದೂಡುವುದು ತರವಲ್ಲ. ಆಡಳಿತ ಮಂಡಳಿಗಳು ಇಲ್ಲದೇ ಜನಸಾಮಾನ್ಯರ ಕೆಲಸ ಕಾರ್ಯಗಳು ಮತ್ತು ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಆಡಳಿತಾಧಿಕಾರಿಗಳಿಗೆ ಅವರದೇ ಕರ್ತವ್ಯಗಳಿರುವುದರಿಂದ ಗ್ರಾ.ಪಂ. ಕೆಲಸಗಳಿಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ಕೊರೊನಾ ಸೋಂಕು ದೂರವಾಗಲು ಇನ್ನಷ್ಟು ಸಮಯ ಹೋಗಬಹುದು. ಆದುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಶೀಘ್ರ ಚುನಾವಣೆಗಳನ್ನು ನಡೆಸಲು ಕ್ರಮ ಕೈಗೊಳ್ಳಬೇಕು.
– ಸತೀಶ್ ಪೂಜಾರಿ, ಮಾಜಿ ಅಧ್ಯಕ್ಷರು, ಐತ್ತೂರು ಗ್ರಾ.ಪಂ.