ಕೋಲಾರ: ಪ್ರಜಾಪ್ರಭುತ್ವ ಉಳಿಸುವ ಚುನಾವಣಾ ಕಾರ್ಯದಲ್ಲಿ ಶ್ರದ್ಧೆ ಇರಲಿ, ಗೊಂದಲಗಳಿಗೆ ಅವಕಾಶವಿಲ್ಲದಂತೆ ನ್ಯಾಯಸಮ್ಮತ ಚುನಾವಣೆಯನ್ನುಹಬ್ಬದಂತೆ ನಡೆಸಿಕೊಡಿ ಎಂದು ಗ್ರಾಪಂ ಚುನಾವಣೆಗೆ ನೇಮಕಗೊಂಡಿರುವ ಪ್ರಿಸೈಡಿಂಗ್ ಹಾಗೂ ಪೋಲಿಂಗ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.
ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಗ್ರಾಪಂ ಚುನಾವಣೆಗೆ ನಿಯೋಜನೆಗೊಂಡಿರುವ ಅಧಿಕಾರಿ,ಸಿಬ್ಬಂದಿಗೆ ನೀಡುತ್ತಿರುವ ತರಬೇತಿ ಕಾರ್ಯಾಗಾರದಲ್ಲಿಪಾಲ್ಗೊಂಡು ಅವರು ಮಾತನಾಡಿದರು. ನಮಗೆ ಎಲ್ಲಾ ಗೊತ್ತು ಎಂಬ ಅತಿಯಾದ ಆತ್ಮವಿಶ್ವಾಸ ಬೇಡ, ಕಲಿಕೆ ಎಂಬುದು ನಿರಂತರ. ಕಲಿತಷ್ಟು ಕರ್ತವ್ಯದಲ್ಲಿ ಪ್ರಾವೀಣ್ಯತೆ ಹೆಚ್ಚುತ್ತದೆ ಎಂದು ತಿಳಿಸಿ, ಇಲ್ಲಿ ನೀವು ಕಲಿತ ಮೇಲೆ ಅದನ್ನು ಮತ್ತೂಬ್ಬರಿಗೆ ಹೇಳಿಕೊಡುವಷ್ಟು ಜ್ಞಾನ ಪಡೆದುಕೊಳ್ಳಬೇಕು ಎಂದರು.
ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳು ತಿರಸ್ಕೃತಗೊಂಡದ್ದು ಮತ್ತುಬಂಗಾರಪೇಟೆಯ ಮತಗಟ್ಟೆಯೊಂದರಲ್ಲಿ ಮತಪತ್ರಗಳನ್ನುಮತಪೆಟ್ಟಿಗೆ ಒತ್ತಡದಿಂದ ತುಂಬಿದ್ದರಿಂದಾಗಿ ಎಣಿಕೆ ಕಾರ್ಯದಲ್ಲಿ ಅಡಚಣೆಯಾದದ್ದನ್ನು ಉದಾಹರಿಸಿದರು.
ನ್ಯಾಯಸಮ್ಮತ ಮತದಾನಕ್ಕೆ ಕರೆ: ನೀವು ಮತಗಟ್ಟೆಗಳಲ್ಲಿ ಹೊಣೆಯರಿತು ಕೆಲಸ ಮಾಡಿ, ಗ್ರಾಪಂ ಚುನಾವಣೆಜಿದ್ದಾಜಿದ್ದಿನ ಕಣವಾಗಿರುವುದರಿಂದ ಪ್ರತಿಯೊಂದುಮತವೂ ಮಹತ್ವದ್ದಾಗಿದೆ. ಗುರುತಿನ ಚೀಟಿ ನೋಡಿಯೇ ಮತದಾನಕ್ಕೆ ಅವಕಾಶ ಕಲ್ಪಿಸಿ, ತಪ್ಪು ನಿಮ್ಮಿಂದಾಗಬಾರದು ಎಂದರು.
ಸೋಂಕಿತರಿಗೆ ಕೊನೆ ಗಂಟೆ ಅವಕಾಶ: ಕೋವಿಡ್ ಸೋಂಕಿತರಿಗೂ ಮತದಾನದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ, ಅವರ ಮತವೂ ಮೌಲ್ಯಯುತವಾದದ್ದೆ. ಆದ್ದರಿಂದ ಸೋಂಕಿತರಿಗೆ ಪಿಪಿಇ ಕಿಟ್ ಧರಿಸಿ ಸಂಜೆ4 ರಿಂದ 5 ಗಂಟೆ ನಡುವೆ ಮತದಾನದ ಕೊನೆ ಅವಧಿಯಲ್ಲಿ ಮತ ಹಾಕಲು ಅವಕಾಶಕಲ್ಪಿಸಿ ಎಂದು ತಿಳಿಸಿದರು. ತಹಶೀಲ್ದಾರ್ ಶೋಭಿತಾ ಮಾತನಾಡಿ, ಚುನಾವಣಾಸಿಬ್ಬಂದಿ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವಾಗ ವಹಿಸಬೇಕಾದ ಮುಂಜಾಗ್ರತೆಗಳ ಕುರಿತು ಮಾರ್ಗದರ್ಶನ ನೀಡಲಾಗಿದೆ ಎಂದರು.
ತರಬೇತುದಾರ ಉಪನ್ಯಾಸಕ ಗೋಪಿಕೃಷ್ಣನ್ ಚುನಾವಣಾ ಸಿಬ್ಬಂದಿಗೆ ಇಡೀ ದಿನ ತರಬೇತಿ ನೀಡಿ,ಸಮಸ್ಯೆಗಳಿಗೆ ಪರಿಹಾರ ನೀಡಿದರಲ್ಲದೇ ಮತಪೆಟ್ಟಿಗೆ ಸಿದ್ದಪಡಿಸುವಿಕೆ ಕುರಿತು ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ತರಬೇತುದಾರರಾದ ನಾರಾಯಣ ಸ್ವಾಮಿ, ಡಾ. ಸೀನಪ್ಪ, ಡಾ.ಎಚ್.ಆರ್.ಮಂಜುನಾಥ್,ಅಂಚೆ ಮತಪತ್ರಗಳ ನಿರ್ವಹಣೆ ಉಸ್ತುವಾರಿ ಅಧಿಕಾರಿ ರೂಪಾದೇವಿ ಮತ್ತಿತರರು ಉಪಸ್ಥಿತರಿದ್ದರು.