ಚಾಮರಾಜನಗರ: ಈ ತಂಬೂರಿ ಕಲಾವಿದನಿಗೆ ದೊರೆತಿರುವುದು ವೀಣೆ ಗುರುತು, ಮಾದರಿ ಮತ ಪತ್ರದಲ್ಲಿರುವುದು ವೀಣೆ ಚಿತ್ರವೇ. ಆದರೆ ಚಿಹ್ನೆಗೆ ಆಯೋಗ ನೀಡಿರುವ ಹೆಸರು ಸಿತಾರ್! ಆದರೂ ಇದರ ಬಗ್ಗೆ ತಲೆಕೆಡಿಕೊಳ್ಳದೇ ನೀಲಗಾರನ ವೇಷ ಧರಿಸಿ ತಂಬೂರಿ ಹಿಡಿದು ಹಾಡುತ್ತಾ ಮತ ಯಾಚಿಸುತ್ತಿದ್ದಾರೆ!
ಇಂಥ ವಿಚಿತ್ರ ಪ್ರಸಂಗ ಎದುರಾಗಿರುವುದು ತಾಲೂಕಿನ ದೊಡ್ಡಮೋಳೆ ಗ್ರಾಮ ಪಂಚಾಯಿತಿಯಲ್ಲಿ. ಗ್ರಾಮದ 1ನೇ ಬ್ಲಾಕ್‌ನ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿ ತಂಬೂರಿ ಕಲಾವಿದ ಪಿ. ಸಿದ್ಧಶೆಟ್ಟಿಸ್ಪರ್ಧಿಸಿದ್ದಾರೆ. ಇವರು ನೀಲಗಾರ ಜನಪದ ಕಲಾವಿದರಾದ್ದರಿಂದ ತಂಬೂರಿ ನುಡಿಸುತ್ತಾ ಮಹದೇಶ್ವರ, ಮಂಟೇಸ್ವಾಮಿ ಪದಗಳನ್ನು ಹಾಡುವುದು ಇವರಕಾಯಕ. ಹೀಗಾಗಿ ತಂಬೂರಿ ಗುರುತು ನೀಡುವಂತೆ ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದರು.ತಂಬೂರಿ ಗುರುತು ಇರಲಿಲ್ಲವೆಂಬ ಕಾರಣಕ್ಕೆ ಅಧಿಕಾರಿಗಳು ವೀಣೆ ಗುರುತು ನೀಡಿದ್ದಾರೆ. ಅದೇನೋ ಸರಿ. ಆದರೆ, ಚಿಹ್ನೆಯ ಹೆಸರನ್ನು ಸಿತಾರ್ ಎಂದು ನಮೂದಿಸಿ ಇವರಿಗೆ ನೀಡಲಾಗಿದೆ!
ಸ್ಪರ್ಧಿ ಸಿದ್ಧಶೆಟ್ಟರು ಇದೆಲ್ಲದರ ಗೊಡವೆಗೇ ಹೋಗದೇ, ನಾನು ತಂಬೂರಿ ಗುರುತಿನಿಂದ ಸ್ಪರ್ಧಿಸಿದ್ದೇನೆ. ನನ್ನ ತಂಬೂರಿ ಗುರುತಿಗೆ ಮತ ನೀಡಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಸಿದ್ಧಶೆಟ್ಟರು, ಈ ಹಿಂದೆ ನಾಲ್ಕು ಬಾರಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಈಗ ಐದನೇ ಬಾರಿ ಕಣಕ್ಕೆ ಇಳಿದು ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ.
ಮೊದಲ ಸಲ ಕಾರು, ಎರಡನೇ ಸಲ ಜೀಪು, ಮೂರನೇ ಬಾರಿ ಹಾರ್ಮೋನಿಯಂ, ನಾಲ್ಕನೇ ಯತ್ನದಲ್ಲಿ ಗರಗಸದ ಗುರುತಿನ ಮೇಲೆ ಸ್ಪರ್ಧಿಸಿದ್ದ ಇವರು ಈಗ ತಂಬೂರಿ ಗುರುತಿಗೆ ಓಟುಕೇಳುತ್ತಿದ್ದಾರೆ! ತಂಬೂರಿ ನಂಬಿ ಬದುಕಿದ್ದೀರಿ, ಈ ಸಲ ತಂಬೂರಿ ಗುರುತು ಪಡೆಯಿರಿ, ಗೆಲುವು ಸಿಕ್ಕರೂ ಸಿಗಬಹುದು ಎಂಬ ಹಿತೈಷಿಗಳ ಮಾತನ್ನು ಗಂಭೀರವಾಗಿ ಪರಿಗಣಿಸಿದ ಸಿದ್ದಶೆಟ್ಟರು ತಂಬೂರಿ ಗುರುತಿಗೇ ಅರ್ಜಿ ಗುಜರಾಯಿಸಿದ್ದರು. ಚುನಾವಣಾ ಅಧಿಕಾರಿಗಳು ಅವರಿಗೆ ಸಿತಾರ್ ಎಂದು ಹೆಸರು ಕೊಟ್ಟು ವೀಣೆ ಗುರುತು ನೀಡಿದ್ದಾರೆ!
ಮಲೆ ಮಹದೇಶ್ವರ ಹಾಗೂ ಮಂಟೇಸ್ವಾಮಿ ಭಕ್ತರಾದ್ದರಿಂದ ನೀಲಗಾರರ ವೇಷ ಧರಿಸಿದ್ದಾರೆ. ತಂಬೂರಿ ಹಿಡಿದು ಜನಪದ ಕಾವ್ಯದ ಶೈಲಿಯಲ್ಲಿ ಹಾಡುಕಟ್ಟಿ ಮನೆಮನೆಗೆ ತೆರಳಿ ಮತಯಾಚನೆಗೆ ತೊಡಗಿದ್ದಾರೆ. ಸೋಲು ಗೆಲುವನ್ನು ಗಂಭೀರ ವಾಗೇನೂಪರಿಗಣಿಸದ ಸಿದ್ದಶೆಟ್ಟರು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಮಾತ್ರ ವಿಶೇಷ ಆಸಕ್ತಿ ವಹಿಸಿ ಮಾಡುತ್ತಾರೆ.
ಒಂದು ಸಾವಿರ ಕರಪತ್ರ ಮುದ್ರಿಸಿ, ಒನ್ ಮ್ಯಾನ್ ಶೋ ಪ್ರಚಾರ ಆರಂಭಿಸಿದ್ದಾರೆ. ನೀಲಗಾರನ ಧಿರಿಸಿ ನಲ್ಲಿ, ತಂಬೂರಿ ಮೀಟುತ್ತಾ, ತಮ್ಮನ್ನೇ ತಾವು ಪ್ರೊಮೋಟ್ ಮಾಡಿಕೊಂಡು, ನಾ ಗೆದ್ದರೂ ತಂಬೂರಿ, ಸೋತರೂ ತಂಬೂರಿ ಎಂದು ಹಾಡುತ್ತಾ ಕ್ಯಾನ್ವಾಸ್ ಆರಂಭಿಸಿದ್ದಾರೆ. ಮನೆ ಯಜಮಾನನನ್ನು ಬಳಿಗೆ ಕರೆದು ಹೆಗಲ ಮೇಲೆ ಕೈಹಾಕಿ ಪ್ರೀತಿಯಿಂದ ಮಾತಾಡಿಸುತ್ತಾ, ಆತನಕಿವಿಯಲ್ಲಿಅದೇನೋ ಗುಸುಗುಸು ಪಿಸಿಪಿಸಿ ಎಂದು ಎರಡು ನಿಮಿಷ ಮಾತಾಡಿ.. ಸುತ್ತ ನಿಂತ ಉಳಿದವರ ಕುತೂಹಲ ಕೆರಳಿಸಿ. ಆಯ್ತಾ..? ಸರಿಯಲ್ವಾ ನಾ ಯೋಳಿದ್ದು, ಎಂದು ಖಚಿತ ಪಡಿಸುತ್ತಾ.. ತಾಯೋ.. ಮರ್ತ್ ಬುಟ್ಟಯ….. ಎಂದು ಮಹಿಳೆಯರನ್ನೂ ಮರೆಯದೆ ಮಾತಾಡಿಸಿ ಹುರುಪಿನಿಂದ ಪ್ರಚಾರದಲ್ಲಿ ತೊಡಗಿದ್ದಾರೆ.
–ಕೆ.ಎಸ್.ಬನಶಂಕರ ಆರಾಧ್ಯ