Advertisement

ಮತದಾರರ ಸೆಳೆಯಲು ಹಣಹಂಚಿಕೆಗೆ ಸಜ್ಜು !

07:38 PM Dec 20, 2020 | Suhan S |

ಹಾಸನ: ಮೊದಲ ಹಂತದಲ್ಲಿ ಡಿ.22 ರಂದು ನಡೆಯಲಿರುವ ಗ್ರಾಮ ಪಂಚಾಯ್ತಿಯ ಚುನಾವಣೆಗೆ ಇನ್ನು ಮೂರು ದಿನ ಬಾಕಿಯಿದ್ದು, ಮತದಾರರ ಗಮನ ಸೆಳೆಯಲು ಅಭ್ಯರ್ಥಿಗಳು ಉಡುಗೊರೆಗಳ ಮಾಹಾಪೂರವನ್ನೇ ಹರಿಸುತ್ತಿದ್ದಾರೆ.

Advertisement

ಮುಂಜಾನೆ ಮನೆ, ಮನೆಗೆ ಎಡತಾಕಿ ಮತದಾರರ ಓಲೈಸುತ್ತಿರುವ ಅಭ್ಯರ್ಥಿಗಳು, ಮಧ್ಯಾಹ್ನದ ‌ ವೇಳೆಗೆ ತಮ್ಮ ಬೆಂಬಲಿಗರೊಂದಿಗೆ ನಗರ, ಪಟ್ಟಣ ಪ್ರದೇಶಗಳಿಗೆಬಂದು ಗ್ರಾಮಗಳಲ್ಲಿನ ಬೆಳವಣಿಗೆಗಳನ್ನು ತಮ್ಮ ಮುಖಂಡರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.

ನಗರ, ಪಟ್ಟಣ ಪ್ರದೇಶಗಳಿಗೆ ಅಭ್ಯರ್ಥಿ ‌ ಗಳು ಹಾಗೂ ಅವರ ಬೆಂಬಲಿಗರು ದಂಡು ದಂಡಾಗಿ ಆಗಮಿಸು ತ್ತಿರುವುದರಿಂದ ನಗರ ಮತ್ತು ಪಟ್ಟಣಗಳ ಹೋಟೆಲ್‌ಗಳು ತುಂಬಿ ತುಳುಕುತ್ತಿವೆ. ಮಾಂಸಾಹಾರಿ ಹೋಟೆಲ್‌ ಗಳು ಮತ್ತು ಮದ್ಯದಂಗಡಿಗಳಲ್ಲಿ ಮಧ್ಯಾಹ್ನದಿಂದ ರಾತ್ರಿವರೆಗೂ ಭರ್ಜರಿ ವ್ಯಾಪಾರ ವ್ಯಾಪಾರವಾಗುತ್ತಿವೆ.

ಬಿರಿಯಾನಿ ಪ್ಯಾಕೇಟ್‌ ಹಂಚಿಕೆ: ನಗರ ಮತ್ತು ಪಟ್ಟಣ ಸುತ್ತಮುತ್ತಲಿನ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಸಂಜೆ ವೇಳೆ ಮನೆ, ಮನೆಗೆ ಚಿಕನ್‌ ಬಿರಿಯಾನಿ ಪ್ಯಾಕೇಟ್‌ಗಳ ಹಂಚಲಾಗುತ್ತಿದೆ. ಪಟ್ಟಣಗಳಿಂದ ದೂರದ ಗ್ರಾಮಗಳಲ್ಲಿ ಕೋಳಿ ಮತ್ತು ದಿನಸಿ ಕಿಟ್‌ಗಳನ್ನು ಅಭ್ಯರ್ಥಿಗಳು ಹಂಚುತ್ತಿದ್ದಾರೆ. ಗ್ರಾಮ ಪಂಚಾಯ್ತಿ ಚುನಾವಣೆ ಪಕ್ಷಾತೀತ ಎಂದು ಹೇಳುತ್ತಿದ್ದರೂ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಬೆಂಬಗಲಿಗರನ್ನು ಗೆಲ್ಲಿಸಿಕೊಂಡು ಗ್ರಾಮ ಮಟ್ಟದಲ್ಲಿ ತಮ್ಮ ರಾಜಕೀಯ ನೆಲೆ ಭದ್ರ ಮಾಡಿ ಕೊಳ್ಳಲು ಲಕ್ಷಾಂತರ ರೂ. ವೆಚ್ಚ ಮಾಡುತ್ತಿದ್ದಾರೆ. ಹಾಗಾಗಿ ಈಗ ಗ್ರಾಮೀಣ ಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಾಗಿವೆ.

ಚುನಾವಣಾ ಮುನ್ನಾದಿನ ಹಣ ಹಂಚಿಕೆ: ಗ್ರಾಮ ಮಟ್ಟದಲ್ಲಿ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಈ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಹಟಕ್ಕೆ ಬಿದ್ದು ಹೋರಾಡುತ್ತಿರುವ ಅಭ್ಯರ್ಥಿಗಳು ಚುನಾವಣೆಯ ಮುನ್ನಾ ದಿನದವರೆಗೂ ಮತದಾರರಿಗೆ ವಿವಿಧ ಉಡುಗೊರೆ ನೀಡಿದರೂ ಮತದಾನದ ಮುನ್ನಾ ದಿನ ಈ ಬಾರಿ ಹಣ ಹಂಚಿಕೆ ನಡೆಯುವುದು ಖಚಿತ. ಉಡುಗೊರೆಗಳೆಲ್ಲಾ ಈಗ ಹಳೆಯ ಮಾದರಿ. ಈಗ ಏನಿದ್ದರೂ ನೇರಾನೇರಾ ವ್ಯವಹಾರವಾಗಿದ್ದು ಹಣ ಹಂಚದಿದ್ದರೆ ಗೆಲ್ಲುವುದು ಕಷ್ಟ ಎಂದು ಅಭ್ಯರ್ಥಿಯೊಬ್ಬರು ಹೇಳುತ್ತಾರೆ.  ತಮ್ಮ ಎದುರಾಳಿಯ ಎಲ್ಲ ತಂತ್ರಗಳನ್ನೂ ಗಮನಿಸಿದ ನಂತರ ತಮಗೆ ಬರಬೇಕಾದ ಇಂತಿಷ್ಟು ಮತಗಳನ್ನು ಲೆಕ್ಕ ಹಾಕಿ ಮತದಾರರಿಗೆ ಹಣ ಹಂಚಿಯಾದರೂ ಗೆಲ್ಲಲೇ ಬೇಕು ಎಂಬ ಹಟ ಅಭ್ಯರ್ಥಿಗಳದ್ದು.

Advertisement

ಹಾಸನ ಕ್ಷೇತ್ರದಲ್ಲಿ ಹಣದ ವ್ಯವಹಾರ: ಪ್ರತಿ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ – ಕಾಂಗ್ರೆಸ್‌ನಡುವೆ ಹಣಾಹಣಿ ನಡೆಯುತ್ತಿತ್ತು. ಈ ಬಾರಿ ಹಾಸನ ವಿಧಾನಸಭಾ ಕ್ಷೇತ್ರ ವಾುಪ್ತಿಯ ಗ್ರಾಮ ಪಂಚಾಯ್ತಿಗಳಲ್ಲಿ ಜೆಡಿಎಸ್‌ – ಬಿಜೆಪಿ ನಡುವೆ ಹಣಾಹಣಿ ಏರ್ಪಟ್ಟಿದೆ. ಕೇವಲ 6 ಗ್ರಾಮ ಪಂಚಾಯ್ತಿಗಳಷ್ಟೇ ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಎರಡೂ ಪಕ್ಷಗಳ ಮುಖಂಡರಿಗೂ ಈಗ ರಾಜಕೀಯ ಪ್ರತಿಷ್ಠೆಯಾಗಿದೆ. ಹಾಗಾಗಿ ಎದುರಾಳಿ ಪಕ್ಷದ ಪ್ರಭಾವಿ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸದಂತೆ ಹಾಗೂ ನಾಮಪತ್ರ ವಾಪಸ್ಸಾತಿಯ ಸಂದರ್ಭದಲ್ಲಿಯೂ ಲಕ್ಷಾಂತರ ರೂ ವ್ಯವಹಾರ ನಡೆದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳಿಗೂ ಲೆಕ್ಕ ಹಾಕದೆ ಚುನಾವಣಾ ವೆಚ್ಚ ಮಾಡುತ್ತಿದ್ದಾರೆ. ಅಯಾಯ ಪಕ್ಷಗಳ ಮುಖಂಡರಿಂದಲೂ ಸಂಪನ್ಮೂಲ ಅಭ್ಯರ್ಥಿಗಳಿಗೆ ಹರಿದು ಬರುತ್ತಿದೆ.

 

-ನಂಜುಂಡೇಗೌಡ.ಎನ್‌

Advertisement

Udayavani is now on Telegram. Click here to join our channel and stay updated with the latest news.

Next