ದಾವಣಗೆರೆ: ಗ್ರಾಪಂ ಚುನಾವಣೆಗೆ ಕ್ಷಣಗಣನೆಯೇನೋ ಆರಂಭವಾಗಿದೆ. ಆದರೆ, ಈ ಹಿಂದಿನ ಚುನಾವಣಾ ಸಂದರ್ಭದಲ್ಲಿ ಕಂಡು ಬರುತ್ತಿದ್ದ ನೂರಾರು ಜನರ ದಂಡು, ಕೇಕೇ ಶಿಳ್ಳೆ, ಜಿದ್ದಿಗೆ ಬಿದ್ದವರಂತೆ ಆರೋಪ-ಪ್ರತ್ತಾರೋಪದ ಅಬ್ಬರದ ಪ್ರಚಾರ ಅಕ್ಷರಶಃ ನಾಪತ್ತೆ!.
ಹೌದು, ದಾವಣಗೆರೆ, ಜಗಳೂರು, ಹೊನ್ನಾಳಿ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿ ಇನ್ನೇನು ಚುನಾವಣೆ ಬಂದರೂ ಈ ಹಿಂದಿನ ಪ್ರಚಾರದ ಖದರ್ ಕಂಡು ಬರುತ್ತಲೇ ಇಲ್ಲ. ಎಂತಹ ಜಿದ್ದಾಜಿದ್ದಿನ ವಾರ್ಡ್‌ಗಳಲ್ಲೇ ಪ್ರಚಾರ ತೀರಾ ತೀರಾ ಸಪ್ಪೆ. ಕೆಲವಾರು ಕಡೆ ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತಿದೆಯೇ ಎಂದು ಪ್ರಶ್ನಿಸಿಕೊಳ್ಳುವಷ್ಟು ನೀರವ ಮೌನ.
ಈ ಹಿಂದೆ ಗ್ರಾಪಂ ಚುನಾವಣೆಗೆ ಮುನ್ನವೇ ಪ್ರಚಾರದ ಭರಾಟೆ ಭರ್ಜರಿ ಆಗಿರುತ್ತಿತ್ತು. ಪ್ರತಿ ಮತವೂ ನಿರ್ಣಾಯಕ ಆಗಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳುಮಾತ್ರವಲ್ಲ ಅವರ ಪರವಾಗಿದ್ದವರು ಸಹ ಪ್ರತಿ ಮತದಾರರನ್ನು ಹದ್ದುಗಣ್ಣಿನಂತೆ ಕಾಯುತ್ತಿದ್ದರು. ಚಲನವಲನ, ಒಡನಾಟ ಇರಲಿ ತಮ್ಮ ವಿರೋಧಪಕ್ಷದವರ ಜತೆ ಮಾತನಾಡುವುದನ್ನೂ ಗಮನಿಸುತ್ತಿದ್ದರು. ಗ್ರಾಪಂ ಚುನಾವಣೆಯ ಪ್ರಕ್ರಿಯೆ ಪ್ರಾರಂಭವಾಗಿ ನಾಮಪತ್ರ ಸಲ್ಲಿಕೆ, ತಿರಸ್ಕೃತ, ಹಿಂದಕ್ಕೆ ಪಡೆಯುವತನಕ ಗ್ರಾಮೀಣ ಭಾಗದಲ್ಲಿ ರಾಜಕೀಯ ತಂತ್ರಗಾರಿಕೆ ಮೇರು ಮುಟ್ಟುತ್ತಿತ್ತು. ಒಮ್ಮೊಮ್ಮೆ ತೀರಾ ಜಿದ್ದಿಜಿದ್ದಿನಪೈಪೋಟಿ, ಹೊಡೆದಾಟ, ಬಡಿದಾಟವೂ ಎಲ್ಲವೂ ಸಾಮಾನ್ಯವಾಗಿತ್ತು.
ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದವರು ಮಾತ್ರವಲ್ಲ ಆವರ ಪರವಾಗಿ ಇದ್ದವರಲ್ಲೂ ಇದೇ ತೆರೆನಾದ ವಾತಾವರನ ನಿರ್ಮಾಣವಾಗುತ್ತಿತ್ತು. ಪ್ರತಿ ನಿತ್ಯ ಬೆಳಗ್ಗೆ, ರಾತ್ರಿ ಒಂದೇ ವಠಾರ, ಕೇರಿ, ಓಣಿಯಲ್ಲಿಒಬ್ಬರ ಮುಖ ಒಬ್ಬರು ನೋಡಬೇಕಾದವರು ಸಹ ಹಾವು-ಮುಂಗುಸಿಯಂತೆ ವರ್ತನೆ ಮಾಡುತ್ತಿದ್ದರು. ಚುನಾವಣೆ ಮಾತ್ರವಲ್ಲ ಮುಗಿದ ನಂತರ ಸಂಬಂಧ ಎನ್ನುವುದು ಎಣ್ಣೆ-ಸೀಗೆಕಾಯಿಯಂತೆ ಇರುತ್ತಿತ್ತು. ಚುನಾವಣಾ ಕಾರಣಕ್ಕಾಗಿ ಪೊಲೀಸ್ ಠಾಣೆಮೆಟ್ಟಿಲೇರುವ ತನಕವೂ ವ್ಯಾಜ್ಯಗಳು ನಡೆಯುತ್ತಿದ್ದವು. ಚುನಾವಣಾ ಸಂದರ್ಭದಲ್ಲಿನ ದ್ವೇಷ ಜನ್ಮಾಪಿಯವರೆಗೂ ಮುಂದುವೆರದ ಉದಾಹರಣೆಗಳು ಸಾಕಷ್ಟಿವೆ.
ಆದರೆ, ಈ ಬಾರಿಯ ಅಂತಹ ವಾತಾವರಣ ಇಲ್ಲವೇಇಲ್ಲ. ಆದರೆ, ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಲ್ಲವೂ ತದ್ವಿರುದ್ಧವಾದ ವಾತಾವರಣವೇ ಬಹುತೇಕ ಕಡೆ ಕಂಡು ಬರುತ್ತಿದೆ. ಅಭ್ಯರ್ಥಿಗಳ ಜೊತೆಗೆ ಕೆಲವೇ ಕೆಲವರ ಓಡಾಟ ಕಂಡು ಬರುತ್ತಿದೆ. ಅದು ಪಾಂಪ್ಲೆಟ್ (ಕರಪತ್ರ) ನೀಡಿ ಮತ ನೀಡುವಂತೆ ಕೇಳುವುದಕ್ಕೆ ಮಾತ್ರವೇ ಸೀಮಿತ ಮಾತ್ರ ಎನ್ನುವಂತಾಗಿದೆ.
ಈ ಬಾರಿಯಷ್ಟು ಸಪ್ಪೆ ವಾತಾವರಣವನ್ನಂತೂ ಕಂಡೇ ಇರಲಿಲ್ಲ. ಇದು ಒಂದು ರೀತಿಯಲ್ಲಿ ಒಳ್ಳೆಯದೇನೋ ಅನಿಸುತ್ತದೆ ಎನ್ನುತ್ತಾರೆ ಕಳೆದ ಬಾರಿ ಕಕ್ಕರಗೊಳ್ಳ ಕ್ಷೇತ್ರದಿಂದ ಗ್ರಾಮ ಪಂಚಾಯತ ಚುನಾವಣೆಗೆ ಸ್ಪರ್ಧಿಸಿದ್ದ ವಿಶ್ವನಾಥ್
ಹಿಂದಿನಂತೆ ಅಬ್ಬರತೆ ಇಲ್ಲ : ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಹಿಂದಿನಂತೆ ಭಾರೀ ಪೈಪೋಟಿ, ಜಿದ್ದಾಜಿದ್ದಿನ ಪ್ರಚಾರವೇ ಕಂಡು ಬರುತ್ತಿಲ್ಲ. ಕಾರಣ ಅದೇನೊ ಎಂಬುವುದೆ ಗೊತ್ತಾಗುತ್ತಿಲ್ಲ. ಪ್ರತಿ ದಿನ ಮುಖ ನೋಡಿಕೊಳ್ಳಬೇಕಾದವಂತಹವರು ಒಂದು ದಿನದ ಎಲೆಕ್ಷನ್‌ಗಾಗಿ ಯಾಕೆ ಮುಖ ಕೆಡಿಸಿಕೊಳ್ಳಬೇಕು ಎಂದೋ, ಯಾಕೆ ಬೇಕು ಇಲ್ಲ ಸಲ್ಲದ ಉಸಾಬರಿ,ಯಾರಿಗೆ ಮನಸ್ಸು ಬರುತ್ತದೆಯೊ ಆವರಿಗೆ ವೋಟ್ ಹಾಕಿದರೆ ಆಯಿತು. ಸುಮ್ಮನೆ ಯಾಕೆ ಮುಖ ಕೆಡಿಸಿಕೊಳ್ಳಬೇಕು ಎನ್ನುವ ಕಾರಣಕ್ಕೋ ಏನೋ ಈ ಬಾರಿಯಂತೂ ಗ್ರಾಮ ಪಂಚಾಯತ್ ಚುನಾವಣೆ ಬಹಳ ಕೂಲ್ ಆಗಿಯೇ ನಡೆಯುತ್ತಿದೆ ಎಂದು ತಾಲೂಕಿನ ಆವರಗೊಳ್ಳ ಗ್ರಾಪಂ ಚಿಕ್ಕಬೂದಿಹಾಳ್ ಗ್ರಾಮದ ಕ್ಷೇತ್ರದಿಂದ ಎರಡನೇ ಬಾರಿಗೆ ಸ್ಪರ್ಧಿಸಿರುವ ಐರಣಿ ಚಂದ್ರಶೇಖರ್ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.
–ರಾ. ರವಿಬಾಬು