Advertisement

ಗ್ರಾಪಂ ಚುನಾವಣೆಗೆ ಸ್ಪರ್ಧಿಸಿರುವ ಈತ ಭಿಕ್ಷುಕ ಅಲ್ಲವೇ ಅಲ್ಲ

03:25 PM Dec 23, 2020 | Suhan S |

ನಂಜನಗೂಡು: ತಾಲೂಕಿನಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಗೆ ಭಿಕ್ಷುಕನೊಬ್ಬನನ್ನು ಗ್ರಾಮಸ್ಥರು ಕಣಕ್ಕಿಳಿಸಿದ್ದಾರೆ ಎಂಬ ವರದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಸುದ್ದಿ ನೂರಕ್ಕೆ ನೂರರಷ್ಟು ಸುಳ್ಳು. ಆತ ನಿಜಕ್ಕೂ ಭಿಕ್ಷುಕ ಅಲ್ಲವೇ ಅಲ್ಲ.

Advertisement

ತಾಲೂಕಿನ ಹುಳಿಮಾವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಕ್ಕಳ್ಳಿ ಗ್ರಾಮದಲ್ಲಿ ಕೂಲಿ ಕಾರ್ಮಿಕನಾಗಿರುವ ಅಂಕನಾಯಕ ಸಾಮಾನ್ಯಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಈತನನ್ನು ಭಿಕ್ಷುಕನೆಂದೇ ಬಿಂಬಿಸಲಾಗಿದೆ. ಸುಮಾರು 40 ವರ್ಷ ವಯಸ್ಸಿನ ಅಂಕನಾಯಕ ಸಣ್ಣಪುಟ್ಟಕೆಲಸಗಳನ್ನು ಮಾಡುತ್ತಾ, ಅದರಿಂದ ಸಿಗುವ ಸಂಪಾದನೆಯಿಂದ ಜೀವನ ನಡೆಸುತ್ತಿದ್ದಾನೆ.

ಬೊಕ್ಕಳಿಯಿಂದ 13 ಕಿ.ಮೀ. ದೂರವಿರುವ ನಂಜನಗೂಡು ಪಟ್ಟಣದ ತರಕಾರಿ ಮಾರುಕಟ್ಟೆಗೆ ಪ್ರತಿದಿನ ತೆರಳುವ ಈತ, ಅಲ್ಲಿ ಅಂಗಡಿಗಳಿಗೆ ಟೀ, ಕಾಫಿ ತಂದುಕೊಡುವುದು, ಕಡಿಮೆ ತೂಕದ ತರಕಾರಿ ಚೀಲಗಳನ್ನು ಹೊತ್ತು ತರು ವುದು, ತರಕಾರಿ ವಿಂಗಡನೆ ಮಾಡುವುದು ಈತನ ಕಾಯಕವಾಗಿದೆ. ಈ ಕೆಲಸಕ್ಕೆ ಅಂಗಡಿ ಯವರು, ವ್ಯಾಪಾರಿಗಳು ನೀಡುವ ಹಣದಿಂದ ಈತ ಜೀವನ ಸಾಗಿಸುತ್ತಿದ್ದಾನೆ.

ಈತನಿಗೆ ತಾಯಿಯಿದ್ದು, ಆಕೆ ಬೇರೆ ಊರಿ ನಲ್ಲಿ ವಾಸವಿದ್ದಾರೆ. ಓರ್ವ ಸಹೋದರರ ಇತ್ತೀ ಚಿಗೆ ಸಾವನ್ನಪ್ಪಿದ್ದರು. ಒಬ್ಬಂಟಿಯಾಗಿರುವ ಅಂಕನಾಯಕ ತುಸು ಅಶಕ್ತನಾಗಿರುವುದರಿಂದ ದೊಡ್ಡ ದೊಡ್ಡಕೆಲಸಗಳನ್ನು ಮಾಡಲು ಆಗುವುದಿಲ್ಲ. ಹೀಗಾಗಿ ತರಕಾರಿ ಮಾರುಕಟ್ಟೆಯಲ್ಲಿ ಸಣ್ಣ ಪುಟ್ಟಕೆಲಸ ಮಾಡುತ್ತಾ ಬದುಕಿನ ಬಂಡಿಯನ್ನು ಸಾಗಿಸುತ್ತಿದ್ದಾನೆ.ಮನೆಯಿಲ್ಲದ ಕಾರಣ ಊರಿನ ಕಟ್ಟೆ, ಬಯಲಿನಲ್ಲಿ ಮಲಗುತ್ತಾನೆ. ಯಾರೊಬ್ಬರಿಂದಲೂ ಆತ ಭಿಕ್ಷೆ ಬೇಡುವುದಿಲ್ಲ. ನಂಜನಗೂಡ ಪಟ್ಟಣಕ್ಕೆ ಬಸ್‌ನಲ್ಲಿ ತೆರಳಲು ಹಣವಿಲ್ಲದಿದ್ದರೆ ಸಾಲ ಪಡೆದು ಕೆಲಸ ಮುಗಿಸಿ ಊರಿಗೆ ಬಂದ ನಂತರ ಆ ಸಾಲವನ್ನು ತೀರಿಸುತ್ತಾನೆ. ಸ್ವಾಭಿಮಾನದಿಂದ ಆತ ಜೀವನ ಸಾಗಿಸುತ್ತಿದ್ದಾನೆ.

ಇದೀಗ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗ್ರಾಮಸ್ಥರು ಸೇರಿ ಈತನನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ. ಹಿಂದಿನ ಸದಸ್ಯರು ಗ್ರಾಮಾಭಿವೃದ್ಧಿಗೆ ಕೆಲಸ ಮಾಡಿಲ್ಲದಿದ್ದರಿಂದ  ಬೇಸತ್ತಿರುವ ಗ್ರಾಮಸ್ಥರು ಈತನನ್ನೇ ಗೆಲ್ಲಿಸಿಕೊಂಡು ಊರಿನ ಕೆಲಸ ಮಾಡಿಸಿಕೊಳ್ಳಲು ನಿರ್ಧರಿಸಿ ಚುನಾವಣೆಗೆ ನಿಲ್ಲಿಸಿದ್ದಾರೆ. ಎರಡನೇ ಹಂತದ ಚುನಾವಣೆ ಈಗಾಗಲೇ ನಾಮಪತ್ರ ಸಲ್ಲಿಸಿರುವ ಅಂಕನಾಯಕ, ಗ್ರಾಮಸ್ಥರೊಂದಿಗೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾನೆ.

Advertisement

ಇದನ್ನೂ ಓದಿ : ನಾನು ಬಂಡೆನೂ ಅಲ್ಲ, ಜಲ್ಲಿನೂ ಅಲ್ಲ: ಕುಮಾರಸ್ವಾಮಿ ಈಗಲೂ ನನ್ನ ಸ್ನೇಹಿತರು: ಡಿಕೆಶಿ

ಪ್ರತಿಕ್ರಿಯೆ: ಗ್ರಾಪಂ ಚುನಾವಣೆಗೆ ಸ್ಪರ್ಧಿಸಿರುವ ಅಂಕ ನಾಯಕ, “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದು, “ಅಶಕ್ತನಾಗಿರುವ ನನಗೆ ಇದುವರೆಗೂ ಯಾವುದೇ ಮಾಸಾಶನ ಸಿಗುತ್ತಿಲ್ಲ. ಸ್ವಂತ ಸೂರು ಕೂಡ ಇಲ್ಲ. ಇದೀಗ ಗ್ರಾಮಸ್ಥರೆಲ್ಲರೂ ಸೇರಿ ನನ್ನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಗೆದ್ದು ಸದಸ್ಯನಾದರೆ ನನ್ನಂತೆ ಸಮಸ್ಯೆಯಿರುವ ಜನರಿಗೆ ಸಹಾಯ ಮಾಡುತ್ತೇನೆ. ಊರಿನ ಅಭಿ ವೃದ್ಧಿಗೆ ಸಾಧ್ಯವಾದಷ್ಟು ಕೆಲಸ ಮಾಡುತ್ತೇನೆ’ಎಂದು ಆತ್ಮವಿಶ್ವಾಸದ ಮಾತುಗಳನ್ನಾಡುತ್ತಾನೆ.

ಚುನಾವಣಗೆ ಹಣ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅಂಕನಾಯಕ, ಹಣ ಇದ್ದವರು ಖರ್ಚು ಮಾಡುತ್ತಾರೆ. ನನ್ನ ಲ್ಲಂತೂ ಬಿಡಿಗಾಸೂ ಇಲ್ಲ. ಗ್ರಾಮಸ್ಥರು ಸೇರಿನನ್ನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಗೆಲ್ಲಿಸಿ ಕೊಳ್ಳುವ ಹೊಣೆ ಅವರದ್ದೇ ಆಗಿರುತ್ತದೆ. ಈ ಕುರಿತು ನಾನೇಕೆ ಯೋಚಸಲಿ, ಕಳೆದುಕೊಳ್ಳುವುದಕ್ಕೆ ನನ್ನಲ್ಲಿ ಏನಿದೆ ಎಂದು ಮರು ಪ್ರಶ್ನೆ ಹಾಕುತ್ತಾರೆ‌.

ಅಂಕನಾಯಕನ ಚುನಾವಣೆ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿರುವ ಗ್ರಾಮದ ನಿವಾಸಿಮಹದೇವ ಸ್ವಾಮಿ, “ಈ ಹಿಂದೆ ಸದಸ್ಯರಾಗಿದ್ದವರು ಗ್ರಾಮ ಕ್ಕಾಗಿ ಏನೂ ಮಾಡಿಲ್ಲ. ಹೀಗಾಗಿ ಹಿರಿಯರೆಲ್ಲ ಸೇರಿ ಈ ಬಾರಿ ಈತನನ್ನೇ ನಿಲ್ಲಿಸಿ, ಗೆಲ್ಲಿಸಿಕೊಂಡು ಕೆಲಸ ಮಾಡಿಸಿಕೊಳ್ಳುತ್ತೇವೆ. ಅಂಕನಾಯಕ ಅಮಾಯಕನಾಗಿದ್ದು, ಯಾರಲ್ಲೂ ಸುಖಾ ಸುಮ್ಮನ್ನೇ ಹಣಕ್ಕಾಗಿ ಕೈಚಾಚುವುದಿಲ್ಲ. ಆತ ಮಾರ್ಕೆಟ್‌ನಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಾ ಸ್ವಾಭಿಮಾನದಿಂದ ಜೀವನ ಸಾಗಿಸುತ್ತಿದ್ದಾನೆ. ಅಂಕನಾಯಕನಿಗೆ ಹಣಬಲ, ಜನಬಲ ಕೂಡ ಇದೆ. ಇದೇ27ರಂದು ಮತದಾರರು ಈತನನ್ನು ಬೆಂಬಲಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : 4 ಲಕ್ಷ ರೂ. ನಗದು ಹೊಂದಿದ್ದ ಬ್ಯಾಗ್ ಎತ್ತಿಕೊಂಡು ಮರವೇರಿದ ಕಪಿ…ಮುಂದೇನಾಯ್ತು?

ಗೆದ್ದರೆ ಸೌಲಭ್ಯ, ಸೋತರೆ ಮಾರ್ಕೆಟ್‌ ಕೆಲಸ :  ಬೊಕ್ಕಳ್ಳಿ ಗ್ರಾಮದಲ್ಲಿ ಗ್ರಾಮಸ್ಥರೇ ನನ್ನನ್ನು ಚುನಾವಣೆ ನಿಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವಾಗ ಇದ್ದ ಜನ ಬೆಂಬಲ ಮತದಾನ ಮಾಡುವವರೆಗೂ ಹೀಗೇ ಇರುತ್ತದೆ. ಗೆದ್ದರೆ ಗ್ರಾಮದಕೆಲಸ, ನನಗೊಂದು ಮಾಸಾಶನ, ಒಂದು ಸೂರು ಮಾಡಿಕೊಳ್ಳುತ್ತೇನೆ. ಈ ರೀತಿ ಸಮಸ್ಯೆ ಅನುಭವಿಸುತ್ತಿರುವ ಜನರಿಗೂ ಸೌಲಭ್ಯಕಲ್ಪಿಸಿಕೊಡುತ್ತೇನೆ. ಸಾಧ್ಯವಾದಷ್ಟು ಊರಿನ ಕೆಲಸ ಮಾಡುತ್ತೇನೆ. ಸೋಲು ಅನುಭವಿಸಿದರೆ ತರಕಾರಿ ಮಾರುಕಟ್ಟೆಯಲ್ಲಿಕೆಲಸವಂತೂ ಇದ್ದೆ ಇರುತ್ತದೆ ಎನ್ನುತ್ತಾರೆ ಗ್ರಾಪಂ ಅಭ್ಯರ್ಥಿ ಅಂಕನಾಯಕ.

 

– ಶ್ರೀಧರ್‌ ಆರ್‌.ಭಟ್‌

Advertisement

Udayavani is now on Telegram. Click here to join our channel and stay updated with the latest news.

Next