ರಾಯಚೂರು: ಜಿಲ್ಲೆಯ 173 ಗ್ರಾಪಂಗಳ ಪೈಕಿ ಮೊದಲ ಹಂತದಲ್ಲಿ 93 ಪಂಚಾಯಿತಿಗಳಿಗೆ ಡಿ.22ರಂದು ನಡೆಯುವ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ರಾಯಚೂರು, ದೇವದುರ್ಗ, ಮಾನ್ವಿ ಮತ್ತು ಮಾನ್ವಿ ತಾಲೂಕಿನಲ್ಲಿ ಚುನಾವಣೆ ನಡೆಯಲಿದ್ದು, ಒಟ್ಟು 4438 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಒಟ್ಟು 93 ಗ್ರಾಪಂಗಳ ಪೈಕಿ 82 ಸೂಕ್ಷ್ಮ, 767 ಸಾಮಾನ್ಯ ಮತಗಟ್ಟೆ ಸೇರಿದಂತೆ ಒಟ್ಟು 849 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಈಗಾಗಲೇ ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿ ಜಿಲ್ಲಾಡಳಿತಂದ ತರಬೇತಿ ನೀಡಲಾಗಿದೆ. ಬ್ಯಾಲೆಟ್ ಪೇಪರ್ ಆಧಾರಿತ ಚುನಾವಣೆಯಾಗಿರುವ ಕಾರಣ ಇವಿಎಂ ಯಂತ್ರಗಳಿಗೆ ವಿಶ್ರಾಂತಿ ಸಿಕ್ಕಂತಾಗಿದೆ. ಅಲ್ಲದೇ, ಪಿಆರ್‌ಒ, ಎಪಿಆರ್‌ಒ ಅಧಿಕಾರಿಗಳಿಗೆ ಮಾತ್ರ ತರಬೇತಿ ನೀಡಲಾಗಿದೆ.
ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ: ಚುನಾವಣೆಯನ್ನೂ ಸುಸೂತ್ರವಾಗಿ ನಡೆಸಲು ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಚುನಾವಣೆ ಕರ್ತವ್ಯಕ್ಕಾಗಿ ಜಿಲ್ಲೆಯ 52 ಪೊಲೀಸ್ ಅಧಿ ಕಾರಿ 981 ಸಿಬ್ಬಂದಿ ಹಾಗೂ 161 ಗೃಹ ರಕ್ಷಕದಳ ಸಿಬ್ಬಂದಿಯನ್ನು ನೇಮಿಸಲಾಗಿದೆ. 46 ಮೊಬೈಲ್ ಸೆಕ್ಟರ್ 17 ಸೂಪರ್ ವೈಸರ್ ಮೊಬೈಲ್ ಸೆಕ್ಟರ್‌ಗಳಲ್ಲಿ ಅಧಿ ಕಾರಿಗಳ ನೇಮಿಸಲಾಗಿದೆ. ನಾಲ್ಕು ಕೆಎಸ್‌ಆರ್‌ಪಿ, 10 ಡಿಎಆರ್ ತುಕಡಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿಒಳಬರುವ ಮತ್ತು ಹೊರ ಹೋಗುವ ವಾಹನಗಳ ತಪಾಸಣೆ ಮಾಡಲು ಒಟ್ಟು 9 ಚೆಕ್ ಪೋಸ್ಟ್‌ಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ.
ಅಭ್ಯರ್ಥಿಗಳಿಂದ ಅಂತಿಮ ಪ್ರಚಾರ: ಮೊದಲ ಹಂತದ ಚುನಾವಣೆಗೆ ಇನ್ನೊಂದು ದಿನ ಮಾತ್ರ ಬಾಕಿ ಉಳಿದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ತುರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ತಮ್ಮ ಮತಗಳನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಮನವೊಲಿಕೆ ಮಾಡುವ ಕಸರತ್ತು ಮುಂದುವರಿಸಿದ್ದಾರೆ. ಬೆಂಬಲಿಗರು, ಕುಟುಂಬ ಸದಸ್ಯರು, ಬಂಧುಗಳೊಂದಿಗೆ ಮನೆ-ಮನೆಗೆ ತೆರಳಿ ಮತ ಯಾಚಿಸುತ್ತಿದ್ದಾರೆ. ಪ್ರಚಾರದ ವಿಚಾರದಲ್ಲಿ ಆಯೋಗ ಕಟ್ಟುನಿಟ್ಟಿನ ನಿಯಮಗಳನ್ನು ಒಡ್ಡದ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಹಗಲಿರುಳು ಪ್ರಚಾರ ಜೋರಾಗಿದೆ.
ರಾಯಚೂರು ತಾಲೂಕಿನ ಒಟ್ಟು 345 ಮತಗಟ್ಟೆಗಳಿದ್ದು, ಅವಿರೋಧ ಆಯ್ಕೆ ಹಾಗೂ ತಡೆಯಾಜ್ಞೆ ಕಾರಣಕ್ಕೆ ಕೆಲ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿಲ್ಲ. ಈಗ 296 ಮತಗಟ್ಟೆಗಳನ್ನುಸ್ಥಾಪಿಸಲಾಗಿದೆ. ಅದರಲ್ಲಿ 16 ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ಸ್ಯಾನಿಟೈಸೆಶನ್ ಕೆಲಸ ನಡೆದಿದೆ. ಕೋವಿಡ್ 19 ನಿಯಮಾನುಸಾರವೇ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
– ಡಾ| ಹಂಪಣ್ಣ ಸಜ್ಜನ್, ತಹಶೀಲ್ದಾರ್ ರಾಯಚೂರು