Advertisement

ಜನರ ಸಂಕಷ್ಟ ಅರಿಯಲು ಗ್ರಾಮಸಭೆ ಸಹಕಾರಿ

09:19 PM Aug 31, 2019 | Team Udayavani |

ದೊಡ್ಡಬಳ್ಳಾಪುರ: ಗ್ರಾಮಗಳಲ್ಲಿ ಸಮಸ್ಯೆಗಳ ಚರ್ಚೆ ಹಾಗೂ ಪರಿಹಾರಕ್ಕೆ ಗ್ರಾಮಸಭೆ ವೇದಿಕೆಯಾಗಿದ್ದು ತಾಲೂಕಿನಲ್ಲಿ ಯಶಸ್ವಿಯಾಗಿ ಗ್ರಾಮಸಭೆಗಳು ನಡೆಯುತ್ತಿವೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು. ನಗರದ ಹೊರವಲಯದ ಬಾಶೆಟ್ಟಿಹಳ್ಳಿ ಗ್ರಾಪಂ ಆವರಣದಲ್ಲಿ ನಡೆದ ಮೊದಲನೆ ಹಂತದ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದರು.

Advertisement

1995ರಲ್ಲಿ ಗ್ರಾಮಸಭೆಗಳು ಸ್ಥಳೀಯ ಮಟ್ಟದ ಕುಂದುಕೊರತೆಗಳನ್ನು ಜನಪ್ರತಿನಿಧಿಗಳಿಗೆ ಅರಿವುಂಟುಮಾಡಲು, ಯೋಜನೆಗಳ ಅನುಷ್ಟಾನ, ಇಲಾಖೆ ಮಟ್ಟದ ಯೋಜನೆಗಳ ಮಾಹಿತಿ ತಿಳಿಸಲು ಆರಂಭಿಸಲಾಯಿತು. ಆದರೆ 2013ರವರೆಗೆ ಎಷ್ಟು ಗ್ರಾಮಸಭೆಗಳು ಯಶಸ್ವಿಯಾಗಿದೆ. ಏಕೆ ನಡೆಯಲಿಲ್ಲ ಎಂಬ ಮಾಹಿತಿ ಸಾರ್ವಜನಿಕರಿಗೆ ತಿಳಿದಿದೆ. 2013ರಲ್ಲಿ ಶಾಸಕನಾಗಿ ಆಯ್ಕೆಯಾದ ಮೇಳೆ ನಿರಂತರವಾಗಿ ಗ್ರಾಮಸಭೆಗಳಲ್ಲಿ ಭಾಗವಹಿಸಿ.

ಜನರ ಸಮಸ್ಯೆ ಅರಿತು ಪರಿಹಾರ ದೊರಕಿಸಲಾಗುತ್ತಿದೆ. ಹೀಗಾಗಿ ಹಂತ ಹಂತವಾಗಿ ತಾಲೂಕಿನಲ್ಲಿ ಸಮಸ್ಯೆ ಕಡಿಮೆಯಾಗುವುದರ ಜೊತೆಗೆ ಗ್ರಾಮಸಭೆಗಳು ಯಶಸ್ವಿಯಾಗುತ್ತಿವೆ ಎಂದರು. ಸರ್ಕಾರದ ಯೋಜನೆಗಳ ಸದುಪಯೋಗ ಸಾರ್ವಜನಿಕರು ಬಳಸಿಕೊಳ್ಳಬೇಕಿದೆ. ಕೃಷಿ ಹೊಂಡ, ಚೆಕ್‌ ಡ್ಯಾಂ ನಿರ್ಮಿಸಿ ನೀರನ್ನು ಸಂಗ್ರಹಿಸಬಹುದಾಗಿದೆ. ಹನಿ ನೀರಾವರಿ ಬಳಸಿ ನೀರಿನ ಮಿತ ಬಳಕೆ ಮಾಡಿ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್‌ ಮಾತನಾಡಿ, ನಗರ ವ್ಯಾಪ್ತಿಗೆ ಹೊಂದಿಕೊಂಡಿರುವ ಗ್ರಾಪಂಗಳಲ್ಲಿ ಖಾತೆ ಗೊಂದಲದ ಕುರಿತಂತೆ ಜಿಪಂ ಅಧ್ಯಕ್ಷರು ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕಿದೆ. ನಗರಸಭೆಯಿಂದ ರದ್ದಾದ ಖಾತೆಗಳನ್ನು ಗ್ರಾಪಂ ವ್ಯಾಪ್ತಿಯಲ್ಲಿ ಖಾತೆ ಮಾಡಲು ನಿಯಮ ಅಡ್ಡಿಯಾಗಿದೆ. ಹೀಗಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಕುರಿತು ಸ್ಪಂದಿಸಬೇಕಿದೆ ಎಂದು ಮನವಿ ಮಾಡಿದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ದ್ಯಾಮಪ್ಪ ಮಾತನಾಡಿ, ಬಾಶೆಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕೈಗಾರಿಕೆ ಪ್ರದೇಶವಿರುವುದರಿಂದ ಜನಸಂಖ್ಯೆ ಹೆಚ್ಚಾಗಿದ್ದು ಮೂಲಭೂತ ಸೌಲಭ್ಯ ಕಲ್ಪಿಸುವುದು ಸವಾಲಾಗಿದೆ. ಶುದ್ಧ ನೀರಿನ ಘಟಕ, ಸ್ವಚ್ಛತೆಗೆ ಆದ್ಯತೆ ಸೇರಿ ಗ್ರಾಪಂ ಆಡಳಿತ ಮಂಡಳಿ, ಅಧಿಕಾರಿಗಳು ಶ್ರಮಿಸುತ್ತಿದ್ದಾರೆಂದು ತಿಳಿಸಿದರು.

Advertisement

ಈ ವೇಳೆ ಪಶು ಆಸ್ಪತ್ರೆ ನಿರ್ಮಾಣಕ್ಕೆ ಸೂಚನೆ, ಗುಂಡು ತೋಪಿನಲ್ಲಿ ಗುಡಿಸಲಿನಲ್ಲಿರುವವರಿಗೆ ವಸತಿ ನೀಡಲು ಕ್ರಮ, ಅರೆಹಳ್ಳಿಗುಡ್ಡದಹಳ್ಳಿ ರಸ್ತೆ ಕಾಮಗಾರಿ, ಸ್ಮಶಾನ ಒತ್ತುವರಿ ತೆರವು, ಅಕ್ರಮ ಮದ್ಯಮಾರಾಟ ತಡೆಯಲು ಆಗ್ರಹ, ವರದನಹಳ್ಳಿ ಗ್ರಾಮಕ್ಕೆ ಅಂಬೇಡ್ಕರ್‌ ಭವನ ಹಾಗೂ ಅಂಗನವಾಡಿ ನಿರ್ಮಿಸಲು ಮನವಿ, ರಸ್ತೆ ಅಗಲೀಕರಣದಿಂದ ನಷ್ಟಕ್ಕೆ ಒಳಗಾಗಿರುವ ಭೂ ಮಾಲಿಕರಿಗೆ ತ್ವರಿತವಾಗಿ ಪರಿಹಾರ, ಹಾನಿಗೀಡಾದ ಗ್ರಾಪಂ ಸ್ವತ್ತುಗಳ ಮರು ನಿರ್ಮಾಣ, ಸ್ಕೈವಾಕ್‌ ಸ್ಥಾಪನೆಗೆ ಕೆಆರ್‌ಡಿಸಿಎಲ್‌ ಸಂಸ್ಥೆಗೆ ಸೂಚಿಸಲು ಆಗ್ರಹ ಹಾಗೂ ಕಾಲೇಜು ನೀಡಲು ಗ್ರಾಮಸ್ಥರು, ಗ್ರಾಪಂ ಸದಸ್ಯರು ಮನವಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕನ್ಯಾಕುಮಾರಿ, ತಾಪಂ ಉಪಾಧ್ಯಕ್ಷೆ ಪದ್ಮಾವತಿ, ಸದಸ್ಯರಾದ ಚಿಕ್ಕಆಂಜನಪ್ಪ, ರೇಣುಕಮ್ಮ ಮುನಿರಾಜು, ಗ್ರಾಪಂ ಅಧ್ಯಕ್ಷೆ ನಾರಾಯಣಮ್ಮ, ಉಪಾಧ್ಯಕ್ಷೆ ಶಿಲ್ಪಾ, ತಹಶೀಲ್ದಾರ್‌ ಎಂ.ಕೆ.ರಮೇಶ್‌, ಎಡಿಎ ಎಸ್‌.ಪಿ.ನಾರಾಯಣಸ್ವಾಮಿ, ಪಿಡಿಒ ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next