Advertisement

ಎಳನೀರು ಮಾರುವ ಗ್ರಾಮ ಪಂಚಾಯಿತಿ ಸದಸ್ಯ

12:21 PM Apr 10, 2018 | |

ಬೆಂಗಳೂರು: ಇವರ ಹೆಸರು ಕೆಂಚನಾಯ್ಕ, ವೃತ್ತಿ ಎಳೆನೀರು ಮಾರಾಟ, ಪ್ರವೃತ್ತಿ ರಾಜಕಾರಣ. ರಾಜರಾಜೇಶ್ವರಿ ನಗರ ಪ್ರವೇಶ ದ್ವಾರ ಒಳಗೆ ಹೋಗಿ ಪೆಟ್ರೋಲ್‌ ಬಂಕ್‌ ದಾಟಿದರೆ ಎಡಭಾಗದಲ್ಲಿ ರಸ್ತೆ ಬದಿ ಎಳನೀರು ಗುಡ್ಡೆಹಾಕಿಕೊಂಡು ಮಾಸಲು ಶರ್ಟ್‌ ಕುರುಚಲು ಗಡ್ಡದಾರಿ ಸಿಗುತ್ತಾರೆ. ಅವರೇ ಕೆಂಚನಾಯ್ಕ. 

Advertisement

48 ವರ್ಷದ ಕೆಂಚನಾಯ್ಕ, ಮೂವತ್ತು ವರ್ಷಗಳಿಂದ ರಾಜರಾಜೇಶ್ವರಿ ನಗರ ಮುಖ್ಯರಸ್ತೆಯಲ್ಲಿ ಎಳನೀರು ಮಾರಾಟ ಮಾಡುತ್ತಿದ್ದಾರೆ. ಇವರು ಅಗರ ಗ್ರಾಮ ಪಂಚಾಯಿತಿಯ ಸದಸ್ಯರೂ ಹೌದು. ಬೆಳಗ್ಗೆ 6 ರಿಂದ 10 ಜನಸೇವೆ. ಆ ನಂತರ ಹೊಟ್ಟೆಪಾಡಿಗಾಗಿ ಎಳನೀರು ಮಾರಾಟ ಇವರ ಕಾಯಕ. ಮಧ್ಯಾಹ್ನ ಪತಿಗೆ ಊಟದ ಬುತ್ತಿ ತರುವ ಪತ್ನಿಯೂ  ಇವರಿಗೆ ಎಳನೀರು ಮಾರಾಟದಲ್ಲಿ ಸಾಥ್‌ ನೀಡುತ್ತಾರೆ.

ವಾರಕ್ಕೊಮ್ಮೆ ತಾವೇ ಖುದ್ದಾಗಿ ಮಾಗಡಿ, ರಾಮನಗರ, ಚನ್ನಪಟ್ಟಣ, ಮದ್ದೂರು ಕಡೆ ತೋಟಗಳಿಗೆ ಹೋಗಿ ಎಳನೀರು ಗುತ್ತಿಗೆ ಆಧಾರದಲ್ಲಿ ಖರೀದಿಸಿ ತಂದು ಮಾರಾಟ ಮಾಡುತ್ತಾರೆ. ಮಂಡ್ಯ ತಾಲೂಕು ಬಸರಾಳು ಹೋಬಳಿಯ ಮೂಲದವರಾದ ಕೆಂಚನಾಯ್ಕ ಅವರಿಗೆ 48 ವರ್ಷ. 18 ವರ್ಷ ಯುವಕನಿದ್ದಾಗ ಕೆಂಚನಹಳ್ಳಿಗೆ ಬಂದು ಸೆಟ್ಲ ಆದವರು. ಇದೀಗ  ಇದೇ ನಮ್ಮನೆ ಎಂದು ಪೂರಾ ಬೆಂಗಳೂರಿಗರಾಗಿದ್ದಾರೆ.

ಎರಡೂವರೆ ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದವರ ವಿರುದ್ಧ ಸ್ಪರ್ಧಿಸಿ ಒಂದು ರೂಪಾಯಿ ಸಹ ಖರ್ಚು ಮಾಡದೆ ತಮಗಿದ್ದ ಜನಸಂಪರ್ಕದಲ್ಲಿ ಗೆದ್ದು ಬಂದ ಇವರಿಗೆ ತಾನು ಗ್ರಾಮ ಪಂಚಾಯಿತಿ ಸದಸ್ಯ ಎಂಬ ಗತ್ತು ಗೈರತ್ತು ಇಲ್ಲ. ನನ್ನ ಪಾಲಿಗೆ ಗ್ರಾಮ ಪಂಚಾಯಿತಿ ಸದಸ್ಯತ್ವ ದೊಡ್ಡ ಕೋಡು ಅಲ್ಲ. ಎಳನೀರು ವ್ಯಾಪಾರದ ಜತೆ ಜನಸೇವೆ ಅಷ್ಟೇ.

ನನ್ನ ವ್ಯಾಪ್ತಿಗೆ ಬರುವ ಆನೇಪಾಳ್ಯ, ದೊಡ್ಡಪಾಳ್ಯ, ರಾಮನಪಾಳ್ಯ, ಸ್ವಾಮೀಜಿ ನಗರ, ಕುವೆಂಪುನಗರದಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದೇನೆ. ಹೊಸ ಪ್ರದೇಶಗಳಲ್ಲಿ ಮೂರು ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆಯಾಗುತ್ತಿದೆ. ಜನರ ಒತ್ತಾಯದ ಮೇರೆಗೆ ಎರಡು ದೇವಸ್ಥಾನ ಕಟ್ಟಿಸಿದ್ದೇನೆ. 600 ವಿದ್ಯುತ್‌ ಕಂಬಗಳಿಗೆ ಸಿಎಫ್ಎಲ್‌ ಬಲ್ಪ್ ಹಾಕಿಸಿದ್ದೇನೆ.

Advertisement

ರಸ್ತೆ, ಚರಂಡಿ ವ್ಯವಸ್ಥೆ ಇದೆ. ಶಾಲೆ, ಆಸ್ಪತ್ರೆಯೂ ಇದೆ. ಹೀಗಾಗಿ, ಜನತೆ ಇನ್ನೇನು ನನ್ನಿಂದ ಕೇಳುವುದಿಲ್ಲ. ನಾನು ಬೆಳಗ್ಗೆ ಎದ್ದು ಜನರ ಸಮಸ್ಯೆ ಇದ್ದರೆ ಸ್ಪಂದಿಸಿ ನಂತರ ಎಳನೀರು ವ್ಯಾಪಾರಕ್ಕೆ ಬರುತ್ತೇನೆ. ನನಗೆ ಇಬ್ಬರು ಮಕ್ಕಳಿದ್ದು ಇಬ್ಬರೂ ಪಿಯುಸಿ ಓದುತ್ತಿದ್ದು ಅವರನ್ನು ಪೊಲೀಸ್‌ ಸೇವೆಗೆ ಸೇರಿಸಬೇಕು ಎಂಬ ಆಸೆಯಿದೆ ಎಂದು ಹೇಳುತ್ತಾರೆ.

ವಿಧಾನಸಭೆ ಚುನಾವಣೆ ಬಗ್ಗೆ ಇವರಿಗೆ ದೊಡ್ಡ ಮಟ್ಟದ ಆಸಕ್ತಿಯಿಲ್ಲ. ನಮ್ಮ ವ್ಯಾಪ್ತಿ ನೋಡಿಕೊಂಡರೆ ಸಾಕು. ಆದರೆ, ಜನಸೇವಕರು ಆಯ್ಕೆಯಾಗಬೇಕು. ನಮ್ಮದು ಯಶವಂತಪುರ ಕ್ಷೇತ್ರ, ಅತಿ ದೊಡ್ಡ ಕ್ಷೇತ್ರ, ಜಾಸ್ತಿ ಸಮಸ್ಯೆ. ಜನರ ಕಷ್ಟಕ್ಕೆ ಆಗುವವರು ಆಯ್ಕೆಯಾಗಬೇಕು ಎಂದು ತಿಳಿಸುತ್ತಾರೆ.

ಮತದಾನದ ಹಕ್ಕು ದೊರೆತು ಮೊದಲ ಬಾರಿ ಮತದಾನ ಮಾಡಿದಾಗಿನಿಂದ ಇದುವರೆಗೂ ಮೂವತ್ತು ವರ್ಷಗಳಿಂದ ಒಂದು ಡಜನ್‌ ಮುಖ್ಯಮಂತ್ರಿಗಳು ಹಾಗೂ ಸಾಕಷ್ಟು ರಾಜಕಾರಣಿಗಳನ್ನು ಕಂಡಿರುವ ಕೆಂಚನಾಯ್ಕ, “ಗ್ರಾಮ ಪಂಚಾಯಿತಿಯಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾಗುತ್ತದೆ. ರಾಜ್ಯ ಸರ್ಕಾರ ನಡೆಸೋ ವಿಚಾರದಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯವಾಗುತ್ತದೆ’ ಎಂದು ಪ್ರತಿಪಾದಿಸುತ್ತಾರೆ.
 
* ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next