Advertisement

ಗ್ರಾಮ ಪಂಚಾಯತ್‌ ನೌಕರರಿಗಿಲ್ಲ ಪಿಎಫ್, ಇಎಸ್‌ಐ ಸೌಲಭ್ಯ

12:19 AM Jul 03, 2022 | Team Udayavani |

ಉಡುಪಿ: ರಾಜ್ಯದ ಗ್ರಾಮ ಪಂಚಾ ಯತ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಪಿಎಫ್, ಇಎಸ್‌ಐ ಸೌಲಭ್ಯ ಪಡೆಯದೆ ಕನಿಷ್ಠ ವೇತನಕ್ಕೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

ರಾಜ್ಯ ಸರಕಾರದ ಸೂಚನೆ ಮೇರೆಗೆ ಆಯಾ ಜಿಲ್ಲಾಡಳಿತಗಳ ಮೂಲಕ ಇವರ ನೇಮಕಾತಿ ನಡೆಯುತ್ತದೆ. ರಾಜ್ಯದಲ್ಲಿ ಒಟ್ಟು 6,020 ಗ್ರಾ.ಪಂ.ಗಳಿದ್ದು, ಪ್ರತೀ ಪಂಚಾಯತ್‌ಗೆ ಒಬ್ಬ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಲೆಕ್ಕ ಸಹಾಯಕರೊಂದಿಗೆ ದೈನಂದಿನ ಆಡಳಿತ ವ್ಯವಸ್ಥೆಗಾಗಿ ಐವರು ಸಿಬಂದಿಗಳನ್ನು ಸೃಜಿಸಲಾಗಿದೆ. ಇವರಲ್ಲದೆ ಬಿಲ್‌ ಕಲೆಕ್ಟರ್‌, ಕ್ಲರ್ಕ್‌, ಡಾಟಾ ಎಂಟ್ರಿ ಆಪರೇಟರ್‌, ಪಂಪ್‌ ಆಪರೇಟರ್‌, ಜವಾನ ಹಾಗೂ ಸ್ವಚ್ಛತಾ ನೌಕರರರೂ ಇದ್ದಾರೆ.

ಈ ನೌಕರರ ವೇತನಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ ಪ್ರತ್ಯೇಕ ಅನುದಾನ ಮೀಸಲಿರಿಸಿ ವೇತನ ಶ್ರೇಣಿ ನಿಗದಿಪಡಿಸಿ, ಸಿ ಮತ್ತು ಡಿ ದರ್ಜೆಯ ಸ್ಥಾನಮಾನ ನೀಡುವಂತೆ ಸರಕಾರವನ್ನು ಕೇಳಿಕೊಳ್ಳಲಾಗಿತ್ತು. ಗ್ರಾ.ಪಂ. ಸಿಬಂದಿಗೆ ಇಎಸ್‌ಐ ಮತ್ತು ಪಿಎಫ್ ಸೌಲಭ್ಯ ನೀಡುವಂತೆ ಹಲವಾರು ಬಾರಿ ಆಗ್ರಹಿಸಲಾಗಿತ್ತು.

2018ರಲ್ಲಿ ಆದೇಶ
ಸ್ಥಳೀಯಾಡಳಿತ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯತ್‌ ನೌಕರರನ್ನು ಗ್ರೂಪ್‌ ಸಿ ಮತ್ತು ಡಿ ಹುದ್ದೆಗೆ ಮೇಲ್ದರ್ಜೆಗೇರಿಸುವ ಬಗ್ಗೆ ಮುಖ್ಯಮಂತ್ರಿಗಳ ಉಪಕಾರ್ಯದರ್ಶಿಗಳು 2018ರಲ್ಲಿ ಆದೇಶ ಹೊರಡಿಸಿದ್ದರು. ಆದರೆ ಆ ಯೋಜನೆ ಇನ್ನೂ ಕಾರ್ಯಗತಗೊಂಡಿಲ್ಲ. ಮುಖ್ಯಮಂತ್ರಿಗಳು, ಸಚಿವರು, ಸಂಸದರಿಗೆ ಸಲ್ಲಿಸಿರುವ ಮನವಿಯೂ ಇದುವರೆಗೆ ಫ‌ಲ ನೀಡಿಲ್ಲ.

ಸೇವಾ ಭದ್ರತೆಗೆ ಆಗ್ರಹ
ನಾವು ಗ್ರಾ.ಪಂ. ನೌಕರರು ಸರಕಾರದ ಹೊಸ ಯೋಜನೆಗಳನ್ನು ಹಾಗೂ ಮೂಲ ಸೌಕರ್ಯಗಳನ್ನು ಬೇರೆ ಬೇರೆ ಇಲಾಖೆಗಳಿಗಿಂತ ಮೊದಲು ರಾಜ್ಯದ ಎಲ್ಲ ಸಾರ್ವಜನಿಕ, ಬಡವರ, ರೈತರ ಮನೆಬಾಗಿಲಿಗೆ ತಲುಪಿಸುತ್ತಿದ್ದೇವೆ. ನಮ್ಮನ್ನು ಗ್ರೂಪ್‌ ಸಿ ಹುದ್ದೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಮನವಿ ಸಲ್ಲಿಸಲಾಗಿತ್ತು. ಸೇವಾ ಭದ್ರತೆ ಜತೆಗೆ 3ದಶಕಗಳಿಂದ ಭವಿಷ್ಯನಿಧಿ, ಇಎಸ್‌ಐ ಹಾಗೂ ಇತರ ಸರಕಾರಿ ಸವಲತ್ತುಗಳಿಂದ ವಂಚಿತರಾಗಿ ಕಾರ್ಯನಿರ್ವ
ಹಿಸುತ್ತಿದ್ದೇವೆ ಎನ್ನುತ್ತಾರೆ ನೌಕರರು.

Advertisement

ಪಂಚಾಯತ್‌ರಾಜ್‌ ವ್ಯವಸ್ಥೆ ಜಾರಿಯಾದಾಗಿನಿಂದ ಪಂಚಾಯತ್‌ ಸಿಬಂದಿಗೆ ಪಿಎಫ್, ಇಎಸ್‌ಐ ಸೇವೆ ಸಿಗುತ್ತಿಲ್ಲ. 10ಕ್ಕಿಂತ ಅಧಿಕ ಮಂದಿ ಇರುವ ಕೆಲವೆಡೆ ಮಾತ್ರ ನೀಡಲಾಗುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಸರಕಾರ ಕೂಡಲೇ ಕಾರ್ಯಪ್ರವೃತ್ತರಾಗಿ ಬೇಡಿಕೆ ಈಡೇರಿಸಿದರೆ ಅನುಕೂಲವಾಗಲಿದೆ.
– ಪದ್ಮನಾಭ ಆರ್‌. ಕುಲಾಲ್‌,
ಪ್ರ. ಕಾರ್ಯದರ್ಶಿ, ರಾಜ್ಯ ಗ್ರಾ.ಪಂ.
ನೌಕರರ ಶ್ರೇಯೋಭಿವೃದ್ಧಿ ಸಂಘ

Advertisement

Udayavani is now on Telegram. Click here to join our channel and stay updated with the latest news.

Next