ಬೆಂಗಳೂರು: ಅವಧಿ ಮುಕ್ತಾಯಗೊಳ್ಳುತ್ತಿರುವ ಗ್ರಾಮ ಪಂಚಾಯತ್‌ಗಳಿಗೆ ಆಡಳಿತ ಸಮಿತಿ ನೇಮಿಸುವ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಬ್ರೇಕ್ ಹಾಕಿದ್ದಾರೆ.
ಜೂನ್ ಮತ್ತು ಜುಲೈಯಲ್ಲಿ ಅವಧಿ ಮುಗಿಯುವ ಗ್ರಾಮ ಪಂಚಾಯತ್‌ಗಳಿಗೆ ಆಡಳಿತ ಸಮಿತಿ ನೇಮಿಸುವ ಕುರಿತು ಸಿಎಂ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎನ್ನಲಾಗಿದೆ.
ಪಂಚಾಯತ್‌ಗಳಿಗೆ ಚುನಾವಣೆ ನಡೆಸುವ ಸಂಬಂಧ ಈಗಾಗಲೇ ರಾಜ್ಯ ಚುನಾವಣ ಆಯೋಗವು ಜಿಲ್ಲಾಧಿಕಾರಿಗಳಿಂದ ಅಭಿಪ್ರಾಯ ಕೇಳಿದ್ದು, ವರದಿ ಬಂದ ಬಳಿಕ ಚರ್ಚಿಸಿ ತೀರ್ಮಾನಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆಡಳಿತ ಸಮಿತಿ ನೇಮಕದಿಂದ ಅನಗತ್ಯ ಗೊಂದಲ ಸೃಷ್ಟಿಯಾಗಲಿದ್ದು, ಸಿಎಂ ಇದಕ್ಕೆ ಮನಸ್ಸು ಮಾಡುತ್ತಿಲ್ಲ ಎನ್ನಲಾಗಿದೆ. ಅವಧಿ ಮುಕ್ತಾಯಗೊಂಡ ಬಳಿಕ ಮತ್ತೊಮ್ಮೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಸಂಬಂಧ ಕಾನೂನಾತ್ಮಕ ಬೆಳವಣಿಗೆಗಳ ಬಗ್ಗೆ ಗಮನಿಸಲು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು
ಮೂಲಗಳು ತಿಳಿಸಿವೆ.
ಸಭೆಯಲ್ಲಿ ಡಿಸಿಎಂಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಸಚಿವರಾದ ಆರ್. ಅಶೋಕ್ , ಕೆ.ಎಸ್. ಈಶ್ವರಪ್ಪ, ಜೆ.ಸಿ. ಮಾಧುಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.