ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತ್ ನೌಕರರ 3 ದಶಕಗಳ ಹೋರಾಟಕ್ಕೆ ಸ್ಪಂದಿಸಿರುವ ಸರಕಾರ, 6 ಸಾವಿರ ಗ್ರಾ. ಪಂ.ಗಳ 50 ಸಾವಿರ ನೌಕರರಿಗೆ ಖಜಾನೆಯಿಂದಲೇ “ವೇತನ ಭಾಗ್ಯ’ ನೀಡಲು ಮುಂದಾಗಿದೆ.
ವೇತನಕ್ಕೆ ಅನುದಾನ ಒದಗಿಸುವ ಸಂಬಂಧದ ಪ್ರಸ್ತಾವನೆಯನ್ನು ಗ್ರಾಮೀಣಾಭಿವೃದ್ಧಿ ಇಲಾ ಖೆಯು ಆರ್ಥಿಕ ಇಲಾಖೆಗೆ ರವಾನಿಸಿದೆ. ಆರ್ಥಿಕ ಇಲಾಖೆ ಹಸಿರು ನಿಶಾನೆ ಸಿಕ್ಕ ತತ್‌ಕ್ಷಣ, ಆದೇಶ ಹೊರಬೀಳಲಿದೆ. ಒಂದು ವೇಳೆ ಆದೇಶ ಜಾರಿಗೆ ಬಂದರೆ ರಾಜ್ಯ ಸರಕಾರಕ್ಕೆ ವಾರ್ಷಿಕ 575 ಕೋಟಿ ರೂ. ಹೊರೆ ಬೀಳಲಿದೆ.
ಈ ಸಂಬಂಧ ಗ್ರಾ.ಪಂ. ನೌಕರರ ಸಂಘದ ಪ್ರತಿನಿಧಿಗಳೊಂದಿಗೆ ಜು.19ರಂದು ಖುದ್ದು ಮುಖ್ಯಮಂತ್ರಿಯವರು ಸಭೆ ನಡೆಸಿದ್ದರು. ನಗರ ಸ್ಥಳೀಯ ಸಂಸ್ಥೆಗಳ ಖಾಯಂ ನೌಕರರಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ರಾಜ್ಯ ಹಣಕಾಸು ಅನುದಾನದಲ್ಲಿ ವೇತನ ಭರಿಸಲಾಗುತ್ತಿದ್ದು, ಅದರಂತೆ ಗ್ರಾಮ ಪಂಚಾಯತ್ ನೌಕರರಿಗೆ 3ನೇ ಹಣಕಾಸು ಆಯೋಗದ ಶಿಫಾರಸಿನಂತೆ ವೇತನ ಪಾವತಿಸಲು ಕ್ರಮ ವಹಿಸುವಂತೆ ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಿದ್ದರು.
ಅದರಂತೆ, ಹಣಕಾಸು ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳ ಹಂತದಲ್ಲಿ ಚರ್ಚೆ ನಡೆದಿದೆ. ಇದಾದ ಬಳಿಕ ವಿವರವಾದ ಪ್ರಸ್ತಾವನೆಯನ್ನು ಗ್ರಾಮೀಣಾಭಿ ವೃದ್ಧಿ ಇಲಾಖೆ ಸಿದ್ಧಪಡಿಸಿದೆ. ಇದಕ್ಕೆ ಗ್ರಾಮೀಣಾಭಿವೃದ್ಧಿ ಸಚಿವರು ಅನುಮೋದನೆ ನೀಡಿದ್ದು, ಪ್ರಸ್ತಾವನೆಯ ಕತಡವನ್ನು ಆರ್ಥಿಕ ಇಲಾಖೆಗೆ ಕಳಿಸಲಾಗಿದೆ. ಅಲ್ಲಿ ಒಪ್ಪಿಗೆ ಸಿಕ್ಕಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಗ್ರಾ. ಪಂ.ಗಳಿಗೆ ನೀಡುವ ಶಾಸನಬದ್ಧ ಅನುದಾನದಲ್ಲಿ ಶೇ.40ರಷ್ಟು ಹಣ ಹಾಗೂ ಪಂಚಾ ಯತ್‌ಗಳು ಸಂಗ್ರಹಿಸುವ ತೆರಿಗೆ ಹಣದಿಂದ ನೌಕರರಿಗೆ ವೇತನ ನೀಡುವ ಪದ್ಧತಿ ಸದ್ಯ ಜಾರಿಯಲ್ಲಿದೆ. ಆದರೆ, ಈ ವ್ಯವಸ್ಥೆಯಿಂದ ಎಲ್ಲ ನೌಕರರಿಗೆ ಪ್ರತಿ ತಿಂಗಳು ನಿಯಮಿತವಾಗಿ ವೇತನ ಕೊಡಲು ಸಾಧ್ಯವಿಲ್ಲ. ಹಾಗಾಗಿ ನಗರ ಸ್ಥಳೀಯ ಸಂಸ್ಥೆಗಳ ನೌಕರರಿಗೆ ನೀಡುವ ಮಾದರಿ ಯಲ್ಲಿ ಹಾಗೂ 3ನೇ ಹಣಕಾಸು ಆಯೋಗದ ಶಿಫಾರಸಿನಂತೆ ಸರಕಾರದ ಅನುದಾನದಿಂದಲೇ ಗ್ರಾ. ಪಂಚಾಯತ್ ನೌಕರರಿಗೆ ವೇತನ ನೀಡ ಬೇಕು ಎಂದು ಕಳೆದ ಮೂರು ದಶಕಗಳಿಂದ ಗ್ರಾಮ ಪಂಚಾಯತ್ ನೌಕರರು ಹೋರಾಟ ಮಾಡುತ್ತಲೇ ಬಂದಿದ್ದರು. ಈಗ ಅವರ ಬೇಡಿಕೆಗೆ ಸರಕಾರದಿಂದ ಸ್ಪಂದನೆ ಸಿಕ್ಕಿದೆ.
ರಾಜ್ಯದ 6,022 ಗ್ರಾ. ಪಂ.ಗಳಲ್ಲಿ ಬಿಲ್ ಕಲೆಕ್ಟರ್, ಕ್ಲರ್ಕ್/ಡಾಟಾ ಎಂಟ್ರಿ ಆಪರೇಟರ್, ವಾಟರ್‌ವೆುನ್/ಪಂಪ್ ಆಪರೇಟರ್, ಜವಾನ ಹಾಗೂ ಸ್ವತ್ಛತಾಗಾರರು ಸೇರಿ ಒಟ್ಟು 50,114 ನೌಕರರು ಇದ್ದಾರೆ. ಈ ನಡುವೆ ಆರ್ಥಿಕ ಇಲಾಖೆ ಎಲ್ಲ ಗ್ರಾ.ಪಂ.ಗಳಿಗೆ ಒಂದು ಡಾಟಾ ಎಂಟ್ರಿ ಆಪರೇಟರ್ ಹುದ್ದೆ ಮಂಜೂರು ಮಾಡಿದೆ. ಈ ಹುದ್ದೆಗಳು ಸೇರಿದರೆ ಒಟ್ಟು ಹುದ್ದೆಗಳ ಸಂಖ್ಯೆ 56,138 ಆಗುತ್ತದೆ. ಈ ನೌಕರರಿಗೆ ಕಾರ್ಮಿಕ ಇಲಾಖೆ ಅಧಿಸೂಚನೆಯಂತೆ ಕನಿಷ್ಠ ವೇತನ, ಭತ್ತೆ ನೀಡಬೇಕಾದರೆ ವಾರ್ಷಿಕ 829 ಕೋಟಿ ರೂ. ಅನುದಾನ ಬೇಕಾಗುತ್ತದೆ. ಇದರಲ್ಲಿ ಶಾಸನಬದ್ಧ ಅನುದಾನದಲ್ಲಿ ಶೇ.40ರಷ್ಟು ಅಂದರೆ, 255 ಕೋಟಿ ರೂ. ವೇತನಕ್ಕಾಗಿ ಮೀಸಲಿಡಲಾಗುತ್ತಿದೆ. ಈಗ ಹೆಚ್ಚುವರಿಯಾಗಿ 574.62 ಕೋ. ರೂ. ಅನುದಾನ ಬೇಕಾಗುತ್ತದೆ.
– ರಫೀಕ್ ಅಹ್ಮದ್