Advertisement

12 ಜಿಲ್ಲೆಗಳಿಗೆ ತೊಗರಿ ಕಣಜ ಸ್ಥಾನಮಾನ

10:33 AM May 24, 2017 | Team Udayavani |

ಬೆಂಗಳೂರು: ತೊಗರಿ ಬೆಳೆಗಾರರ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ದೃಷ್ಟಿಯಿಂದ ರಾಜ್ಯದಲ್ಲಿ ತೊಗರಿ
ಬೆಳೆಯುವ 12 ಜಿಲ್ಲೆಗಳನ್ನು ತೊಗರಿ ಕಣಜ ಎಂದು ಘೋಷಿಸಿ ಪ್ರತ್ಯೇಕ ನೀತಿ ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ.
ಈ ಕುರಿತಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಅಧ್ಯಕ್ಷತೆಯ ಕೃಷಿ ಮತ್ತು
ತೋಟಗಾರಿಕಾ ಉತ್ಪನ್ನಗಳ ಬೆಲೆ ಸ್ಥಿರೀಕರಣ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಚರ್ಚಿಸಲಾಗಿದ್ದು, ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಇಟ್ಟು ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ.

Advertisement

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವ ಟಿ.ಬಿ.ಜಯಚಂದ್ರ, ತೊಗರಿ ಬೆಳೆಯುವ ಪ್ರದೇಶಗಳನ್ನು ತೊಗರಿ ಕಣಜ ಎಂದು ಘೋಷಿಸಿದರೆ, ತೊಗರಿ ಬೆಳೆಗಾರರಿಗೆ ಪ್ರೋತ್ಸಾಹ ಧನ ನೀಡಲು ಅವಕಾಶವಾಗುವುದರೊಂದಿಗೆ ತೊಗರಿ ಬೆಳೆಗಾಗಿಯೇ ಪ್ರತ್ಯೇಕ ನೀತಿ ಸ್ಥಾಪಿಸಲು ಅನುಕೂಲವಾಗುತ್ತದೆ. ಇದರಿಂದ ಪ್ರತಿ ವರ್ಷ ಬೆಲೆ ಕುಸಿದು ತೊಂದರೆಗೊಳಗಾಗುವ ರೈತರಿಗೆ ಶಾಶ್ವತ ಪರಿಹಾರವೂ ಸಿಕ್ಕಂತಾಗುತ್ತದೆ ಎಂದರು.
ರಾಜ್ಯದ ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ತೊಗರಿ ಬೆಳೆಯಲಾಗುತ್ತದೆ. ನಂತರದ ಸ್ಥಾನದಲ್ಲಿ ಬೀದರ್‌, ವಿಜಯಪುರ, ರಾಯಚೂರು ಜಿಲ್ಲೆಗಳು ಬರುತ್ತವೆ. ಒಟ್ಟು 12 ಜಿಲ್ಲೆಗಳಲ್ಲಿ ತೊಗರಿ ಬೆಳೆಯಲಾಗುತ್ತಿದ್ದು, ಈ ವರ್ಷ ಸುಮಾರು 101 ಲಕ್ಷ ಕ್ವಿಂಟಾಲ್‌ ತೊಗರಿ ಉತ್ಪಾದನೆಯಾಗಿದೆ. ಆದರೆ, ಬೆಲೆ ಇಳಿಮುಖವಾಗಿದ್ದರಿಂದ ರೈತರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿತ್ತು. ಆದರೆ, ತೊಗರಿ ಪ್ರೊಟೀನ್‌ಯುಕ್ತ ಆಹಾರವಾಗಿರುವುದರಿಂದ ಅದಕ್ಕೆ ಮತ್ತು ಬೆಳೆಗಾರರಿಗೆ ಪ್ರೋತ್ಸಾಹ ಕೊಡಲು ಅನುಕೂಲವಾಗುವಂತೆ ತೊಗರಿ ಕಣಜ ಎಂದು ಘೋಷಿಸಿ ಪ್ರತ್ಯೇಕ ನೀತಿ ರೂಪಿಸಲು
ಚಿಂತಿಸಲಾಗಿದೆ. ಇದರಿಂದ ಅತ್ಯುತ್ತಮ ಪೌಷ್ಟಿಕಾಂಶ ಹೊಂದಿರುವ ರಾಜ್ಯದ ತೊಗರಿಗೆ ಪ್ರತ್ಯೇಕ ಬ್ರಾಂಡ್‌ ಕೂಡ
ಲಭ್ಯವಾಗುತ್ತದೆ ಎಂದು ತಿಳಿಸಿದರು.

ಕೇಂದ್ರದ ಬೆಲೆ ನಿಯಂತ್ರಣ ಯೋಜನೆಯಡಿ ತೊಗರಿ ಖರೀದಿ: ರಾಜ್ಯದಲ್ಲಿ ಇದೇ ಮೊದಲ ಬಾರಿ ದಾಖಲೆಯ 31.32 ಲಕ್ಷ ಕ್ವಿಂಟಾಲ್‌ ತೊಗರಿ ಖರೀದಿಸಲಾಗಿದೆ. ಎಪಿಎಂಸಿಗಳ ಮೂಲಕ 27.10 ಲಕ್ಷ ಕ್ವಿಂಟಾಲ್‌ ತೊಗರಿ ಮಾರಾಟವಾಗಿದ್ದು, ಇನ್ನೂ ಸುಮಾರು 42.48 ಲಕ್ಷ ಕ್ವಿಂಟಾಲ್‌ ತೊಗರಿ ರೈತರ ಬಳಿ ಉಳಿದಿದೆ. ಬೆಂಬಲೆ ಬೆಲೆ ಮೂಲಕ ಖರೀದಿ ಅಂತ್ಯವಾಗಿದೆ. ಮಾರುಕಟ್ಟೆಯಲ್ಲೂ ಬೆಲೆ ಏರಿಕೆಯಾಗಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಬೆಲೆ ನಿಯಂತ್ರಣ ಯೋಜನೆಯಡಿ ತೊಗರಿ ಖರೀದಿ ಮುಂದುವರಿಸಲು ಸಚಿವ ಸಂಪುಟ ಉಪಸಮಿತಿ ತೀರ್ಮಾನಿಸಿದೆ. ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮತಿ ಸಿಕ್ಕಿದ ಕೂಡಲೇ ತೊಗರಿ ಖರೀದಿಸಲಾಗುವುದು.

ಕೇಂದ್ರ ಸರ್ಕಾರವೇ ಇದಕ್ಕೆ ಬೆಲೆ ನಿಗದಿ ಮಾಡಲಿದ್ದು, ಈ ಬೆಲೆಗೆ ಹೆಚ್ಚುವರಿ ಪ್ರೋತ್ಸಾಹಧನ ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಪಡಿತರ ವ್ಯವಸ್ಥೆಯಡಿ ತೊಗರಿ ವಿತರಣೆ
ಪಾಲಿಶ್‌ ಆಗಿರುವ ಪಡಿತರ ಅಕ್ಕಿಯಲ್ಲಿ ಪ್ರೊಟೀನ್‌ ಇರುವುದಿಲ್ಲ. ಹೀಗಾಗಿ ಫ‌ಲಾನುಭವಿಗಳಿಗೆ ಪೌಷ್ಟಿಕಾಂಶ ಸಿಗುವುದಿಲ್ಲ. ಸರ್ಕಾರ ಉದ್ದೇಶ ಜನರಿಗೆ ಪೌಷ್ಟಿಕಾಂಶವನ್ನೂ ಒದಗಿಸಬೇಕಿರುವುದರಿಂದ ಪಡಿತರ ವ್ಯವಸ್ಥೆಯಡಿ 30 ರೂ. ರಿಯಾಯಿತಿಯೊಂದಿಗೆ ಶಾಶ್ವತವಾಗಿ ತೊಗರಿಬೇಳೆ ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ. ಪ್ರಸ್ತುತ ಪಡಿತರ ವ್ಯವಸ್ಥೆಯಡಿ ತೊಗರಿಬೇಳೆ ವಿತರಿಸಲು ತೀರ್ಮಾನಿಸಿದ್ದರೂ ಅದು ಶಾಶ್ವತ ವ್ಯವಸ್ಥೆ ಎಂದು ಹೇಳಲಾಗದು. ಪ್ರತಿ ಕುಟುಂಬಕ್ಕೆ ತಿಂಗಳಿಗೆ ಒಂದು ಕೇಜಿ ತೊಗರಿಬೇಳೆ ವಿತರಿಸಲು ಸರ್ಕಾರ ವಾರ್ಷಿಕ 1100 ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ. ಹೀಗಾಗಿ ಯೋಜನೆಗೆ ಕೇಂದ್ರ ಸರ್ಕಾರದ ನೆರವೂ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪಡಿತರ ವ್ಯವಸ್ಥೆ ಮೂಲಕ ರಿಯಾಯಿತಿ ದರದಲ್ಲಿ ಶಾಶ್ವತವಾಗಿ ತೊಗರಿಬೇಳೆ
ವಿತರಿಸಲು ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next