ಮುಂಬಯಿ: ನಾವು ಎಲ್ಲೇ ನಿಂತರೂ ನಮ್ಮ ಭಾಷೆ, ಸಂಸ್ಕೃತಿ ಪರಂಪರೆಯನ್ನು ಮರೆಯಬಾರದು. ಮುಂಬಯ ಹೊಸ ತಲೆಮಾರಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಲು ಚಿಣ್ಣರ ಬಿಂಬದಲ್ಲಿಯೂ ಕನ್ನಡ ಕಲಿಕಾ ಯೋಜನೆಯನ್ನು ಜಾರಿಗೆ ತಂದೆವು. ಈಗ ಚಿಣ್ಣರ ಬಿಂಬದ ಸಾವಿರಾರು ಮಕ್ಕಳು ಕನ್ನಡವನ್ನು ಕಲಿತು ನಾನಾ ರೀತಿಯ ಉಪಯೋಗವನ್ನು ಪಡೆದಿದ್ದಾರೆ. ಭಾಷೆಯ ಕಲಿಕೆಯಿಂದ ಆತ್ಮ ವಿಶ್ವಾಸ ವೃದ್ಧಿಯಾಗುತ್ತದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ, ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಅವರು ಅಭಿಪ್ರಾಯಪಟ್ಟರು.
ಇತ್ತೀಚೆಗೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ, ವಿದ್ಯಾನಗರಿಯ ಉಪನ್ಯಾಸ ಸಂಕೀರ್ಣದಲ್ಲಿ ಆಯೋಜಿಸಿದ್ದ ಕನ್ನಡ ಸರ್ಟಿಫಿಕೇಟ್ ಹಾಗೂ ಡಿಪ್ಲೋಮಾ ಕೋರ್ಸ್‌ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಬಹುಬೇಗ ಭಾಷೆಯನ್ನು ಕಲಿಯುತ್ತಾರೆ. ಚಿಣ್ಣರ ಬಿಂಬದ ಸಾವಿರಾರು ಮಕ್ಕಳು ಕನ್ನಡ ಕಲಿತು ತಮಗಾದ ಲಾಭ, ಆನಂದ, ಸಂತೋಷಗಳನ್ನು ಆಗಾಗ ಹಂಚಿಕೊಳ್ಳುತ್ತಾ ಬಂದಿದ್ದಾರೆ. ಕನ್ನಡ ಭಾಷೆಯನ್ನು ಕಲಿಸಲು ಡಾ| ಉಪಾಧ್ಯ ಅವರ ಕನ್ನಡ ಪಠ್ಯ ತುಂಬಾ ಉಪಯುಕ್ತವಾಗಿದೆ. ಕನ್ನಡ ಸಂಸ್ಕೃತಿಯನ್ನು ಎಳೆಯ ಮಕ್ಕಳಿಗೆ ತಿಳಿಹೇಳಿ ನಮ್ಮ ನಾಡಿನ ಹಿರಿಮೆಯನ್ನು ಅವರಿಗೆ ತಿಳಿಹೇಳುತ್ತಾ ಬಂದಿದ್ದೇವೆ ಎಂಬ ಸಾರ್ಥಕ ಭಾವ ನಮ್ಮಲ್ಲೂ ಮೂಡಿದೆ. ಕನ್ನಡ ವಿಭಾಗ ನಮಗೆ ಸದಾ ಬೆಂಬಲವನ್ನು ನೀಡುತ್ತಾ ಬಂದಿದೆ ಎಂದು ನುಡಿದು, ವಿಶ್ವವಿದ್ಯಾಲಯದಲ್ಲಿ ಕಲಿತು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಡಾ| ಶ್ಯಾಮಲಾ ಪ್ರಕಾಶ್ ಅವರು ಮಾತನಾಡಿ, ಕನ್ನಡವನ್ನು ಆಂಗಿಕ ಅಭಿನಯ, ಹಾಡಿನ ಮೂಲಕ ನಿಸ್ಸಂಕೋಚವಾಗಿ ಕಲಿಸಿದಾಗ ಹೆಚ್ಚು ಮನವರಿಕೆಯಾಗಬಲ್ಲದು ಎಂದರು. ಕಾರವಾರದಿಂದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗಕ್ಕೆ ಬಂದು ಕನ್ನಡ ಕಲಿತ ಡಾ| ವಿಜಯ ಕುಮಾರ ವಾಗ¾ರೆ ಮಾತನಾಡಿ, ಮುಂಬಯಿ ಮೂಲದ ನನಗೆ ಕಾರವಾರಕ್ಕೆ ಭಡ್ತಿ ದೊರೆತಾಗ ನನ್ನ ಬಳಿ ಬರುತ್ತಿದ್ದ ರೋಗಿಗಳಲ್ಲಿ ಕನ್ನಡದಲ್ಲಿ ಮಾತನಾಡುವುದು ಕಷ್ಟವಾಗುತ್ತಿತ್ತು. ಆಗ ನನಗೆ ದಾರಿ ತೋರಿಸಿದ್ದು ಕನ್ನಡ ವಿಭಾಗ. ಇಲ್ಲಿನ ಸರ್ಟಿಫಿಕೇಟ್ ಕೋರ್ಸ್ ನನಗೆ ಮಹದುಪಕಾರ ಮಾಡಿದೆ ಎಂದು ಡಾ| ಜಿ. ಎನ್. ಉಪಾಧ್ಯ ಹಾಗೂ ಡಾ| ಪೂರ್ಣಿಮಾ ಶೆಟ್ಟಿಯವರ ಸಹಕಾರ, ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದರು.
ಗಿರಿಜಾ ಸೊಂಡೂರು ಅವರು ಮಾತನಾಡುತ್ತಾ ನಮ್ಮ ಮನೆ ಮಾತು ಕನ್ನಡವಾದರೂ ಓದಲು ಬರೆಯಲು ಬರುತ್ತಿರಲಿಲ್ಲ. ಮಗಳಿಗಾದರೂ ಕನ್ನಡ ಕಲಿಸಬೇಕೆಂಬ ಇಚ್ಛೆಯಿಂದ ಕನ್ನಡ ವಿಭಾಗಕ್ಕೆ ಪ್ರವೇಶಕ್ಕೆ ಬಂದು ನಾನು ಕೂಡಾ ಇಲ್ಲಿನ ವಿದ್ಯಾರ್ಥಿಯಾಗಿ ಓದಲು ಬರೆಯಲು ಕಲಿತೆ ಎಂದು ನುಡಿದರು. ವಿದ್ಯಾರ್ಥಿಗಳಾದ ವೈಶಾಲಿ ಸೊಂಡೂರು, ಪ್ರಶೂಲ ಶೆಟ್ಟಿ, ಪೂಜಾ ಪೂಜಾರಿ ಹಾಗೂ ಪಾಲಕರದ ಸುರೇಶ್ ಶೇಟ್ ತಮ್ಮ ಅನುಭವವನ್ನು ಹಂಚಿಕೊಂಡರು. ಶಿಕ್ಷಕರಾದ ವೈ. ವಿ. ಮಧುಸೂದನ ರಾವ್, ರಮಾ ಉಡುಪ, ಡಾ| ಉಮಾರಾವ್, ಡಾ| ಶ್ಯಾಮಲಾ ಪ್ರಕಾಶ್, ಕುಮುದಾ ಆಳ್ವ, ಗೀತಾ ಮಂಜುನಾಥ್, ಎಂ. ಎಸ್. ಅನಿತಾ, ಶ್ರೀಪಾದ ಪತಕಿ ಉಪಸ್ಥಿತರಿದ್ದರು.
ಸುರೇಖಾ ದೇವಾಡಿಗ, ಗಣಪತಿ ಮೊಗವೀರ, ಸಂತೋಷ್ ಮೊಗವೀರ, ಚಂದನ್, ಜಯ ಸಾಲ್ಯಾನ್, ಕೆ. ಗೋವಿಂದ ಭಟ್, ಲಕ್ಷ್ಮೀ ಪೂಜಾರ್ತಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಪಾಲ್ಗೊಂಡಿದ್ದರು. ಸರ್ಟಿಫಿಕೇಟ್ ಕೋರ್ಸ್‌ನಲ್ಲಿ ಮೊದಲ ಸ್ಥಾನವನ್ನು ಪಡೆದ ಸಮೀರ್ ಅತ್ರೇಯ (ಅಣುಶಕ್ತಿ ನಗರ, ಕನ್ನಡ ಸಂಘ), ದ್ವಿತೀಯ ಸ್ಥಾನವನ್ನು ಪಡೆದ ಶ್ರೇಯಾ ಶೆಟ್ಟಿ(ಘೋಡ್ ಬಂದರ್ ರೋಡ್), ತೃತೀಯ ಸ್ಥಾನವನ್ನು ಪಡೆದ ವೈಶಾಲಿ ಸೊಂಡೂರು ಇವರನ್ನು ಪ್ರಕಾಶ್ ಭಂಡಾರಿ ಅವರು ಶಾಲು ಹೊದೆಸಿ ಗ್ರಂಥ ಗೌರವ ನೀಡಿ ಗೌರವಿಸಿದರು. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಪ್ರದಾನಿಸಲಾಯಿತು. ಸುಶೀಲಾ ದೇವಾಡಿಗ ಅವರು ಸ್ವಾಗತ ಗೀತೆ ಹಾಡಿದರು. ಸರ್ಟಿಫಿಕೇಟ್ ಕೋರ್ಸ್‌ನ ಸಂಚಾಲಕ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ವೈ. ವಿ. ಮಧುಸೂದನ್ ರಾವ್ ಅವರು ವಂದಿಸಿದರು.