ಬೆಂಗಳೂರು: ಪಿಇಎಸ್ ತಾಂತ್ರಿಕ ವಿಶ್ವವಿದ್ಯಾಲಯದ ವಾರ್ಷಿಕ ಪದವಿ ಪ್ರದಾನ ಸಮಾರಂಭ ಶನಿವಾರ (ಸೆ.15) ಬೆಳಗ್ಗೆ 11 ಗಂಟೆಗೆ ವಿವಿ ಆವರಣದ ಪ್ರೊ.ಎಂಆರ್‌ಡಿ ಸಭಾಂಗಣದಲ್ಲಿ ನಡೆಯಲಿದೆ. ಪಿಇಎಸ್ ವಿಶ್ವವಿದ್ಯಾಲಯದ ವಿವಿಧ ವಿಭಾಗದಲ್ಲಿ ಪದವಿ ಪೂರೈಸಿದ 618 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ.
ರ್‍ಯಾಂಕ್ ವಿಜೇತ 92 ವಿದ್ಯಾರ್ಥಿಗಳಿಗೆ ವಿಶೇಷ ಸನ್ಮಾನ ಹಮ್ಮಿಕೊಂಡಿದ್ದು, ಕೇಂದ್ರ ಜಾಗೃತ ಆಯೋಗದ ಮುಖ್ಯ ಜಾಗೃತ ಆಯುಕ್ತ ಕೆ.ವಿ.ಚೌಧರಿ ಪದವಿ ಪ್ರದಾನ ಭಾಷಣ ಮಾಡಲಿದ್ದಾರೆ. ಪಿಇಎಸ್ ವಿವಿಯ ಸಮ ಕುಲಾಧಿಪತಿ ಪ್ರೊ.ಡಿ.ಜವಹರ್ ಅವರು ಪ್ರತಿಭಾವಂತರ ಗೌರವ ಫಲಕ ಅನಾವರಣ ಮಾಡಲಿದ್ದಾರೆ ಎಂದು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಂ.ಆರ್.ದೊರೆಸ್ವಾಮಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ 563 ವಿದ್ಯಾರ್ಥಿಗಳ ಪೈಕಿ 514 ಮಂದಿ ಉದ್ಯೋಗಕ್ಕೆ ಅರ್ಹತೆ ಪಡೆದಿದ್ದಾರೆ. 373 ವಿದ್ಯಾರ್ಥಿಗಳು ಈಗಾಗಲೇ ಉದ್ಯೋಗ ಪಡೆದಿದ್ದಾರೆ. ಇಲ್ಲಿ ವ್ಯಾಸಂಗ ಮಾಡಿದ ಬಹುತೇಕ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಕ್ಕಿದೆ. ಅದರಲ್ಲೂ ಶೇ.90ಕ್ಕೂ ಅಧಿಕ ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲೇ ಆಯ್ಕೆಯಾಗುತ್ತಿದ್ದಾರೆ ಎಂದು ವಿವರಿಸಿದರು.
ಹೀಟ್ ಎಕ್ಸ್‌ಚೆಂಜ್ ಪರೀಕ್ಷೆಗೆ ಅಗತ್ಯವಿರುವ ವಿನ್ಯಾಸ ಮತ್ತು ವಿಶ್ಲೇಷಣಾ ಕೇಂದ್ರವನ್ನು ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ತೆರೆಯಲಾಗುತ್ತಿದೆ. ಇದಕ್ಕೆ ರಾಜ್ಯ ತಂತ್ರಜ್ಞಾನ ಉನ್ನತೀಕರಣ ಪರಿಷತ್ ಅನುದಾನ ಒದಗಿಸಿದೆ.
ಹಾಗೇ 50 ಲಕ್ಷ ರೂ. ವೆಚ್ಚದಲ್ಲಿ ವಾಣಿಜ್ಯ ಬೆಳೆ ಕೊಯ್ಲು ಉತ್ಪನ್ನ ತಯಾರಿಕೆ ಕುರಿತು ಉನ್ನತ ಮಟ್ಟದ ಸಂಶೋಧನೆ ನಡೆಯಲಿದೆ. ವಿಶ್ವವಿದ್ಯಾಲಯದಲ್ಲಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಿದ್ದು, ಇದಕ್ಕಾಗಿ ಪ್ರೊಸೆಸ್ ಮಾಡ್ಯುಲಿಂಗ್ ರಿಸರ್ಚ್ ಲ್ಯಾಬೋರೇಟರಿ ತೆರೆಯುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಪಿಇಎಸ್‌ನಿಂದ ಸಿದ್ಧಪಡಿಸಿರುವ ಖಾಸಗಿ ಉಪಗ್ರಹ ಉಡಾವಣೆಗೆ ಸಜ್ಜಾಗುತ್ತಿದೆ. ಇಸ್ರೋ ಸಹಯೋಗದಲ್ಲಿ 2019ರ ಫೆಬ್ರವರಿಯಲ್ಲಿ ಉಡಾವಣೆ ನಡೆಯುವ ಸಾಧ್ಯತೆ ಇದೆ. ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಸಮುದ್ರ ನ್ಯಾವಿಗೇಷನ್ ಕುರಿತು ವಿದ್ಯಾರ್ಥಿಗಳು ಸಿದ್ಧಪಡಿಸಿರುವ ಖಾಸಗಿ ಉಪಗ್ರಹ ಇದಾಗಿದೆ ಎಂದು ಪ್ರಾಧ್ಯಾಪಕರು ವಿವರಿಸಿದರು. ಕುಲಪತಿ ಪ್ರೊ.ಎಚ್.ಬಿ.ಪ್ರಸಾದ್, ಪ್ರಾಧ್ಯಾಪಕ ಡಾ.ಕೆ.ಎನ್.ಬಿ.ಮೂರ್ತಿ ಮೊದಲಾದವರು ಇದ್ದರು.