Advertisement

ಅಡಕತ್ತರಿಯಲ್ಲಿ ಪದವೀಧರ ಶಿಕ್ಷಕ ಹುದ್ದೆ ಆಕಾಂಕ್ಷಿಗಳು

06:00 AM Jul 22, 2018 | Team Udayavani |

ರಾಯಚೂರು: ಹಿಂದಿನ ಸರ್ಕಾರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವ ಆಸೆ ತೋರಿದರೆ, ಈಗಿನ ಸರ್ಕಾರ ಅರ್ಹ ಅಭ್ಯರ್ಥಿಗಳ ಆಸೆಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ. ಸರ್ಕಾರದ ಹೊಸ ಆದೇಶದಿಂದ ಸಾವಿರಾರು ಉದ್ಯೋಗಾಕಾಂಕ್ಷಿಗಳು ಅಡಕತ್ತರಿಗೆ ಸಿಲುಕುವಂತಾಗಿದೆ.

Advertisement

ಹಿಂದಿನ ಸರ್ಕಾರ ರಾಜ್ಯದಲ್ಲಿ 6-8ನೇ ತರಗತಿಗಾಗಿ 10 ಸಾವಿರ ಶಿಕ್ಷಕರ ನೇಮಕಕ್ಕೆ 2017ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಅದರಲ್ಲಿ ಸಮಾಜ ವಿಜ್ಞಾನಕ್ಕೆ ಕೇವಲ 1,200 ಹುದ್ದೆ ನೀಡಿದರೆ, ಇಂಗ್ಲಿಷ್‌ ಮತ್ತು ಗಣಿತ ವಷಯಗಳಿಗೆ ಬರೋಬ್ಬರಿ 8,800 ಹುದ್ದೆ ಮೀಸಲಿಡಲಾಗಿತ್ತು. ಆದರೆ, ಸಿಇಟಿಯಲ್ಲಿ ಅರ್ಹರಾಗಿದ್ದು ಕೇವಲ 2,264 ಶಿಕ್ಷಕರು ಮಾತ್ರ.ಇದರಿಂದ ಶಿಕ್ಷಕರ ಕೊರತೆ ನೀಗಿಸಲು ಈಗಿನ ಶಿಕ್ಷಣ ಸಚಿವರು ಹಿಂದಿನ ನಿಯಮಗಳನ್ನು ರದ್ದು ಮಾಡಿ ಪದವಿ, ಸಿಟಿಇ, ಟಿಇಟಿ ಅಂಕಗಳ ಒಟ್ಟುಗೂಡಿಸಿ ಆಯ್ಕೆ ಮಾಡಲು ಮುಂದಾಗಿದ್ದಾರೆ. ಪದವಿ ಅಂಕಗಳನ್ನು ಶೇ.15ರಿಂದ 25ಕ್ಕೆ ಹೆಚ್ಚಿಸಲಾಗಿದೆ.ಇದರಿಂದ ಈಗಾಗಲೇ ಟಿಇಟಿಯಲ್ಲಿ ಹೆಚ್ಚು ಅಂಕ ಪಡೆದು ಅರ್ಹರಾದವರಿಗೂ ಹುದ್ದೆ ಕೈತಪ್ಪುವ ಆತಂಕ ಎದುರಾಗಿದೆ.

ಕೊರತೆ ಇರುವುದು ಗಣಿತ, ವಿಜ್ಞಾನ ಶಿಕ್ಷಕರ ಆಯ್ಕೆಯಲ್ಲಿ. ಆದರೆ, ಪರಿಣಾಮ ಎದುರಿಸುತ್ತಿರುವುದು ಸಮಾಜ ವಿಜ್ಞಾನ ಶಿಕ್ಷಕರು ಎನ್ನುವಂತಾಗಿದೆ.ಸರ್ಕಾರ ಪದವಿ ಅಂಕ ಪರಿಗಣಿಸಿದ್ದೇ ಆದಲ್ಲಿ ನಾನ್‌ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಹುದ್ದೆ ಕೈ ತಪ್ಪುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ ಸೆಮಿಸ್ಟರ್‌ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ಲಭಿಸಿವೆ. ಇದರಿಂದ ನಾನ್‌ ಸೆಮಿಸ್ಟರ್‌ ವಿದ್ಯಾರ್ಥಿಗಳು ಸಹಜವಾಗಿಯೇ ಹಿಂದುಳಿಯುತ್ತಾರೆ.

ಈ ಕುರಿತು ಈಗಾಗಲೇ ನೊಂದ ವಿದ್ಯಾರ್ಥಿಗಳು ಸರ್ಕಾರದ ಗಮನ ಸೆಳೆದಿದ್ದು, ಹಿಂದಿನ ನಿಯಮಗಳನ್ನೇ ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ. ಪದವಿ ಅಂಕಗಳ ಪರಿಗಣನೆ ಕೈ ಬಿಡುವುದು, ಅರ್ಹ ಅಭ್ಯರ್ಥಿಗಳನ್ನು ಮೊದಲನೇ ಆಯ್ಕೆ ಪಟ್ಟಿಯಲ್ಲಿಯೇ ಪರಿಗಣಿಸುವಂತೆ ಒತ್ತಾಯಿಸಿದ್ದಾರೆ. ಮುಖ್ಯವಾಗಿ ಸಮಾಜ ವಿಜ್ಞಾನ ವಿಷಯಕ್ಕೆ ಶಿಕ್ಷಕರ ಸಂಖ್ಯೆ ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.

ಶೇ.90ರಷ್ಟು ಅರ್ಹರು: 10 ಸಾವಿರ ಹುದ್ದೆಗಳಿಗೆ ಪರೀಕ್ಷೆ ಬರೆದವರು 56 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು. ಅದರಲ್ಲಿ ಅರ್ಹರಾಗಿದ್ದು,ಶೇ.90ಕ್ಕಿಂತ ಹೆಚ್ಚು ಸಮಾಜ ವಿಜ್ಞಾನ ವಿಷಯದವರೇ ಆಗಿದ್ದರು. ಆದರೆ, ಅವರಿಗೆ ಕೇವಲ 1,200 ಹುದ್ದೆ ಮೀಸಲಿಟ್ಟು, ಅರ್ಹರಲ್ಲದ ವಿಜ್ಞಾನ, ಗಣಿತವಿಷಯಗಳಿಗೆ ಸಿಂಹಪಾಲು ನೀಡಲಾಗಿತ್ತು. ಅದರ ಬದಲಿಗೆ ಸಮಾಜ ವಿಜ್ಞಾನ ವಿಷಯಗಳ ಹುದ್ದೆಗಳನ್ನು ಹೆಚ್ಚಿಸಲಿ ಎಂಬುದು ಉದ್ಯೋಗಾಕಾಂಕ್ಷಿಗಳ ವಾದ.

Advertisement

ಹಿಂದಿನ ಸರ್ಕಾರ ಸಿಇಟಿಯಲ್ಲಿ ಹೊಸ ಪದಟಛಿತಿ ಜಾರಿಗೊಳಿಸಿದ್ದರೂ ಕಷ್ಟಪಟ್ಟು ಓದಿ ಅರ್ಹತೆ ಗಿಟ್ಟಿಸಿಕೊಂಡಿದ್ದೇವೆ. ಆದರೆ, ಈಗ ಆ ನಿಯಮಗಳನ್ನೇ ರದ್ದು ಮಾಡಿದರೆ ನಮ್ಮಂಥವರಿಗೆ ಅನ್ಯಾಯವಾಗಲಿದೆ. ಅನರ್ಹರಿಗೆ ಹುದ್ದೆಗಳು ಅನಾಯಾಸವಾಗಿ ದಕ್ಕಲಿವೆ. ಸರ್ಕಾರ ಈ ಕೂಡಲೇ ಹೊಸ ಅಧಿಸೂಚನೆ ಹಿಂಪಡೆಯಬೇಕು. ಸಮಾಜ ವಿಜ್ಞಾನ ಶಿಕ್ಷಕರ ಸಂಖ್ಯೆ ಹೆಚ್ಚಿಸಬೇಕು.
– ಜಗದೀಶ ದೇಸಾಯಿ,
ಉದ್ಯೋಗಾಕಾಂಕ್ಷಿ, ರಾಯಚೂರು

– ಸಿದ್ಧಯ್ಯಸ್ವಾಮಿ ಕುಕನೂರು
 

Advertisement

Udayavani is now on Telegram. Click here to join our channel and stay updated with the latest news.

Next