Advertisement

ಪದವಿ ಪ್ರಾಧ್ಯಾಪಕರ ಸೇವೆ ದಾಖಲೀಕರಣ ಅಗತ್ಯ

11:00 AM Aug 14, 2018 | Team Udayavani |

ಹುಮನಾಬಾದ: ಪದವಿ ಕಾಲೇಜು ಪ್ರಾಧ್ಯಾಪಕರು ತಾವು ಸಲ್ಲಿಸಿದ ಪಾಠ ಬೋಧನೆ ಜತೆಗೆ ಮಹಾವಿದ್ಯಾಲಯದಲ್ಲಿ ಆಯೋಜಿಸುವ ಪಠ್ಯೇತರ ಚಟುವಟಿಕೆಗಳ ದಾಖಲೀಕರಣ ಅತ್ಯಂತ ಅವಶ್ಯಕ ಎಂದು ಮನ್ನಳ್ಳಿ ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕ ಡಾ| ಸಂಜೀವಕುಮಾರ ತಾಂದಳೆ ಹೇಳಿದರು.

Advertisement

ಪಟ್ಟಭದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಶೈಕ್ಷಣಿಕ ವೃತ್ತಿ ಪದೋನ್ನತಿ ಕುರಿತು ಕಾಲೇಜಿನ ಪ್ರಾಧ್ಯಾಪಕರಿಗಾಗಿ
ಸೋಮವಾರ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಪದವಿ ಕಾಲೇಜು ಪ್ರಾಧ್ಯಾಪಕರು ಕೇವಲ ಬೆರಳೆಣಿಕೆ ವರ್ಗ ತೆಗೆದುಕೊಂಡು ಯುಜಿಸಿ ವೇತನ ಪಡೆಯುತ್ತಾರೆ ಎಂಬ ಅಪವಾದವಿದೆ. ದೂರದ ಬೆಟ್ಟ ನುಣ್ಣಗೆ ಎಂಬಂತೆ ಅಲ್ಲಿನ ನೋವು ಸೇವೆ ಸಲ್ಲಿಸಿದ ಪ್ರಾಧ್ಯಾಪಕರಿಗೆ ಗೊತ್ತು. ಶಿಕ್ಷಣದ ವಿವಿಧ ಹಂತದ ಶಿಕ್ಷಕರು ನಮ್ಮ ಬಗ್ಗೆ ಆಡಿಕೊಳ್ಳುತ್ತಿರುವ ಕೇವಲ ಮಾತಿಗೆ ಪ್ರತಿಯಾಗಿ ನಮ್ಮ ಸೇವೆ ದಾಖಲೀಕರಣ ಈಗ ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದಲ್ಲಿ ಸಮನ್ವಯತೆ ಕೊರತೆ ಏಕೈಕ ಕಾರಣದಿಂದಾಗಿ ಜನರಲ್ಲಿ ತಪ್ಪು ಸಂದೇಶ ರವಾನೆಯಾಗುತ್ತಿದೆ. ಕಾರಣ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಇಡೀ ಸಿಬ್ಬಂದಿ ಒಮ್ಮನ್ನಸ್ಸಿನಿಂದ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
 
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯ ಪ್ರಾಚಾರ್ಯ ಡಾ| ವೀರಣ್ಣ ತುಪ್ಪದ ಮಾತನಾಡಿ, ಒಗ್ಗಟ್ಟಿನಲ್ಲಿ ಬಲ ಇದೆ ಎಂಬಂತೆ ಕುಟುಂಬ, ಸಮಾಜ, ಮಹಾವಿದ್ಯಾಲಯ ಯಾವುದಾದರೂ ಸರಿ ಕೈಗೊಳ್ಳುವ ಪ್ರತಿಯೊಂದು ಕೆಲಸ ಯಶಸ್ವಿಯಾಗಲು ಸಾಧ್ಯ. ಹುಮನಾಬಾದ ಕಾಲೇಜಿನಲ್ಲಿ ಎಲ್ಲ ಚಟುವಟಿಕೆಗಳು ಇಷ್ಟೊಂದು ಅಚ್ಚುಕಟ್ಟಾಗಿ ನಡೆಯಲು ಇಡೀ ಸಿಬ್ಬಂದಿ ಸಹಕಾರ ಕಾರಣ. ಆ ಆತ್ಮವಿಶ್ವಾಸದಿಂದಲೇ ಮಹಾವಿದ್ಯಾಲಯ ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಮತ್ತಷ್ಟು ಹುಮ್ಮಸ್ಸಾಗುತ್ತಿದೆ ಎಂದು ಹೇಳಿದರು.

ನ್ಯಾಕ್‌ ಕಮಿಟಿ ಸದಸ್ಯ ಅರುಣಕುಮಾರ ನರೋಣಕರ್‌, ಸಿಬ್ಬಂದಿ ಕಾರ್ಯದರ್ಶಿ ಡಾ| ಅಲ್ಕಾ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿ ಇದ್ದರು. ಪ್ರೇಮಲತಾ ಮನ್ನಳ್ಳಿ ಸ್ವಾಗತಿಸಿದರು. ಡಾ| ಗವಿಸಿದ್ದಪ್ಪಪಾಟೀಲ  ನಿರೂಪಿಸಿದರು. ಡಾ| ಸಂಜೀವಕುಮಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next