ಬೆಂಗಳೂರು: ಕ್ಯಾರಿ ಓವರ್ ಪದ್ಧತಿಯಲ್ಲಿ ಪ್ರಥಮ ಮತ್ತು ದ್ವಿತೀಯ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಿ, ಪರಿಸ್ಥಿತಿ ಸುಧಾರಿಸಿದ ಅನಂತರ ಪರೀಕ್ಷೆ ಮಾಡುವ ಸಂಬಂಧ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಯೋಜನೆ ಸಿದ್ಧಪಡಿಸಿಕೊಂಡಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಮತ್ತು ಪರೀಕ್ಷಾ ವಿಧಾನ ಸರಳೀಕರಿಸುವ ಬಗ್ಗೆ ವಿವಿಗಳ ಅನುದಾನ ಆಯೋಗ ಈಗಾಗಲೇ ಸಲಹೆ ರೂಪದ ಮಾರ್ಗಸೂಚಿ ನೀಡಿದೆ. ಜತೆಗೆ ರಾಜ್ಯಗಳ ಪರಿಸ್ಥಿತಿ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಅನುಮತಿ ಕಲ್ಪಿಸಿದೆ.
ಪದವಿಯಲ್ಲಿ ಒಂದೆರೆಡು ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಹೋಗಲು ಕ್ಯಾರಿ ಓವರ್ ಪದ್ಧತಿಯಡಿ ಅನುಮತಿಯಿದೆ. ಮುಂದಿನ ಸೆಮಿಸ್ಟರ್‌ಗಳಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವ ವಿಷಯವನ್ನು ಬರೆದು ಪಾಸ್ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಈ ವರ್ಷ ಎರಡು, ನಾಲ್ಕು ಮತ್ತು ಆರನೇ ಸೆಮಿಸ್ಟರ್ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಮುಂದಿನ ಆರು ತಿಂಗಳ ಕಾಲಾವಕಾಶದಲ್ಲಿ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ನಡೆಸಿಕೊಳ್ಳಬಹುದು. ಆರನೇ ಸೆಮಿಸ್ಟರ್‌ಗೆ ಸಂಬಂಧಿಸಿದಂತೆ ಆದಷ್ಟು ಬೇಗ ಪರೀಕ್ಷೆ ನಡೆಸಬಹುದಾಗಿದೆ ಎಂದು ಕುಲಪತಿಯೊಬ್ಬರು ತಿಳಿಸಿದರು.
ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯ ಬಗ್ಗೆ ಅವಸರ ಮಾಡುವ ಅಗತ್ಯವಿಲ್ಲ. ಆದರೆ ಪರೀಕ್ಷೆ ವಿಧಾನದಲ್ಲಿ ಕೆಲವೊಂದು ಬದಲಾವಣೆ ಮಾಡಬೇಕಾಗುತ್ತದೆ. ಕ್ಯಾರಿ ಓವರ್ ಪದ್ಧತಿಯ ಸಮರ್ಪಕ ಉಪಯೋಗ ಈ ಅವಧಿಯಲ್ಲಿ ಮಾಡಿಕೊಳ್ಳಬಹುದಾಗಿದೆ. ಆನ್‌ಲೈನ್ ತರಗತಿಗಳು ನಡೆಯುತ್ತಿದೆ. ಹೀಗಾಗಿ ಸರಕಾರ ಪರಿಸ್ಥಿತಿ ಆಧಾರದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಬೆಂಗಳೂರು ವಿವಿ ಕುಲಪತಿ ಪ್ರೊ| ಕೆ.ಆರ್. ವೇಣುಗೋಪಾಲ್ ತಿಳಿಸಿದರು.
ಮೇ 5: ಪ್ರಥಮ ಪಿಯು ಫಲಿತಾಂಶ
ಪ್ರಸಕ್ತ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಮೇ 5ರಂದು ಪ್ರಕಟಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚಿಸಿದ್ದಾರೆ.
ಫಲಿತಾಂಶವನ್ನು ಕಾಲೇಜಿನ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಬಾರದು. ವಿದ್ಯಾರ್ಥಿಗಳು ಗುಂಪಾಗಿ ಕಾಲೇಜಿಗೆ ಬಾರದಂತೆ ಎಚ್ಚರ ವಹಿಸಬೇಕು. ವಿದ್ಯಾರ್ಥಿಗಳು ಅಥವಾ ಅವರ ಹೆತ್ತವರಿಗೆ ಮೊಬೈಲ್ ಸಂದೇಶ, ಇ-ಮೇಲ್ ಮೂಲಕ ಫಲಿತಾಂಶ ಕಳುಹಿಸುವಂತೆ ಸೂಚನೆ ನೀಡಿದ್ದಾರೆ. ಹಾಗೆಯೇ ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿ ಗಳಿಗೆ ಕಾಲೇಜು ಹಂತದಲ್ಲಿ ಪೂರಕ ಪರೀಕ್ಷೆ ನಡೆಸಲು ಇಲಾಖೆ ಮುಂದಿನ ದಿನಗಳಲ್ಲಿ ಸೂಚನೆ ನೀಡಲಿದೆ. ಹೀಗಾಗಿ ದಾಖಲಾತಿಗೆ ಬರುವಂತೆ ಒತ್ತಾಯಿಸುವಂತಿಲ್ಲ ಮತ್ತು ಒಟ್ಟಿಗೆ ಪೂರ್ಣ ಶುಲ್ಕ ಪಾವತಿಸುವಂತೆ ಒತ್ತಾಯಿ ಸಬಾರದು ಎಂದು ನಿರ್ದೇಶನ ನೀಡಿದ್ದಾರೆ.