Advertisement

ಸಾಧಕರಿಗೆ ಅನುಗ್ರಹ ಪ್ರಶಸ್ತಿ ಪ್ರದಾನ

05:16 PM Aug 09, 2017 | Team Udayavani |

ರಾಯಚೂರು:ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ 346 ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ನಿಮಿತ್ತ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ನಾಲ್ವರು ಸಾಧಕರಿಗೆ ಮಂಗಳವಾರ ಸಂಜೆ ಶ್ರೀ ರಾಘವೇಂದ್ರಾನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀಮಠದ ಸಭಾಮಂಟಪದಲ್ಲಿ ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಶ್ರೀಮಠದ ಪೀಠಾ ಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಪ್ರಶಸ್ತಿ ಪ್ರದಾನ ಮಾಡಿದರು. ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ವಾಂಸರಾದ
ಬೆಂಗಳೂರಿನ ವಿದ್ವಾನ್‌ ವೆಂಕಟೇಶ ಬಾಯರಿ, ರಾಜಮಂಡ್ರಿಯ ವಿದ್ವಾನ್‌ ಗೋಪಾಲಕೃಷ್ಣ ಶಾಸ್ತ್ರಿ, ಸಾಮಾಜಿಕ ಕ್ಷೇತ್ರದಲ್ಲಿ ಕೊಯಂಬತ್ತೂರಿನ ಖ್ಯಾತ ಲೆಕ್ಕ ಪರಿಶೋಧಕ ಪಿ.ಆರ್‌.ವಿಠಲ್‌, ಶೈಕ್ಷಣಿಕ ಕ್ಷೇತ್ರದಲ್ಲಿ ಹಾವೇರಿಯ ಡಾ| ಗುರುರಾಜ ವೈದ್ಯರಿಗೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಆಶೀರ್ವಚನ ನೀಡಿದ ಶ್ರೀ ಸುಬುಧೇಂದ್ರ ತೀರ್ಥರು, ಇದು ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ ಪ್ರವೇಶಿಸಿದ ಅತೀ ಮುಖ್ಯ ಸಂದರ್ಭ. ಈ ಕಾರಣಕ್ಕೆ ಈ ಆಚರಣೆಯನ್ನು ದೇಶ ವಿದೇಶಗಳಲ್ಲಿ ಜಾತಿ ಮತ ಪಂಥವೆನ್ನದೇ ಮಾನವ ಉತ್ಸವವನ್ನಾಗಿ ಆಚರಿಸಲಾಗುತ್ತಿದೆ ಎಂದು ಬಣ್ಣಿಸಿದರು. ದೇವರೆಂದರೆ ತಿರುಪತಿ ತಿಮ್ಮಪ್ಪ. ಗುರುಗಳೆಂದರೆ ಮಂತ್ರಾಲಯ ರಾಘಪ್ಪ ಎನ್ನುವ ಮಾತಿದೆ. ಅದರಂತೆ ರಾಘವೇಂದ್ರ ಸ್ವಾಮಿಗಳು ನಂಬಿದವರಿಗೆ ಎಂದೂ ಕೈಬಿಡದ
ಕಲ್ಪವೃಕ್ಷವಾಗಿದ್ದಾರೆ. ಶ್ರೀಗಳು ಬೃಂದಾವನ ಪ್ರವೇಶಿಸಿದ ದಿನದಿಂದ ಇಂದಿನವರೆಗೆ ವಿಶ್ವದ ಧಾರ್ಮಿಕ ಕ್ಷೇತ್ರದಲ್ಲಿ ರಾಯರ ಆರಾಧನೆ ಅನುಚಾನವಾಗಿ ನಡೆದುಕೊಂಡು ಬರುತ್ತಿದೆ. ಭಕ್ತಿ ಮಾರ್ಗ ಹಾಕಿಕೊಡುವ ಮೂಲಕ ರಾಯರು ಎಲ್ಲರಿಗೂ ಆರಾಧ್ಯದೈವವಾಗಿದ್ದಾರೆ. ರಾಘವೇಂದ್ರ ಸ್ವಾಮಿಗಳು ಭಕ್ತರ ಹೃದಯ ಸಿಂಹಾಸನದಲ್ಲಿ ಸದಾ ನೆಲೆಸಿರುತ್ತಾರೆ. ಎಲ್ಲರೂ ರಾಯರ ಅನುಗ್ರಹ ಪಡೆದು ಪುನೀತರಾಗಬೇಕು ಎಂದು ಆಶಿಸಿದರು.  ಇದೇ ವೇಳೆ ಸಮಾಜ ಸೇವಕ ವೆಂಕಟೇಶ್ವರಲು ಸಿಂಧನೂರು ಸೇರಿದಂತೆ ಇತರರನ್ನು ಗೌರವಿಸಲಾಯಿತು.ವಿವಿಧ ಅನುವಾದಿತ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಶ್ರೀಗಳ ಪೂರ್ವಾಶ್ರಮದ ತಂದೆ ಶ್ರೀ ಗಿರಿಯಾಚಾರ್‌, ನಿವೃತ್ತ ನ್ಯಾಯಾ ಧೀಶರಾದ ಶ್ರೀಧರ್‌, ಉಪ ಲೋಕಾಯುಕ್ತ ನ್ಯಾ| ಸುಭಾಶ ಆಡಿ, ವಿ.ಆರ್‌.ಪಂಚಮುಖೀ, ವಿರೋಧ
ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ, ನಿವೃತ್ತ ಪೊಲೀಸ್‌ ಅಧಿಕಾರಿ ಗುಣ ಪ್ರಭಾಕರ, ತಿರುಮಲ ತಿರುಪತಿದೇವಸ್ಥಾನದ ಆಡಳಿತಾಧಿ ಕಾರಿ ಅನಿಲ್‌ ಸಿಂಗ್‌ ಸೇರಿದಂತೆ ಇತರರು ಇದ್ದರು. ವಿದ್ಯಾಪೀಠದ ಪ್ರಾಚಾರ್ಯ ವಾದಿರಾಜಾಚಾರ್ಯ ನಿರೂಪಿಸಿದರು. ಶ್ರೀಗಳ ಆಪ್ತ
ಕಾರ್ಯದರ್ಶಿ ಸುಯಮೀಂದ್ರಾಚಾರ್‌ ಸೇರಿದಂತೆ ಇತರರು ಪಾಲ್ಗೊಂಡಿದ್ದರು 

Advertisement
Advertisement

Udayavani is now on Telegram. Click here to join our channel and stay updated with the latest news.

Next