Advertisement

ಜಿ.ಪಂ. ಗಮನಕ್ಕೆ ಬಾರದೆ ಸ.ಶಾಲೆ ಸ್ಥಳಾಂತರ: ಅಧ್ಯಕ್ಷರ ಅಸಮಾಧಾನ

07:20 AM Aug 17, 2017 | Team Udayavani |

ಉಡುಪಿ: ಉಡುಪಿಯ ಸರಕಾರಿ ಮಹಾತ್ಮಗಾಂಧಿ ಮಾ.ಹಿ.ಪ್ರಾ. ಶಾಲೆಯ ಸ್ಥಳಾಂತರ ಅಥವಾ ವಿಲೀನ ಪ್ರಕ್ರಿಯೆ ಬಗ್ಗೆ ಜಿ.ಪಂ.ಗೆ ಯಾವುದೇ ರೀತಿಯ ಮಾಹಿತಿ ನೀಡದಿರುವುದರ ಬಗ್ಗೆ ಜಿ. ಪಂ. ಅಧ್ಯಕ್ಷ ದಿನಕರ ಬಾಬು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಅವರು ಬುಧವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಜುಲೈ ತಿಂಗಳ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಜಿ.ಪಂ. ವ್ಯಾಪ್ತಿಯಡಿ ಬಂದರೂ ಸಂಬಂಧಪಟ್ಟ ಅಧಿಕಾರಿಗಳು ಜಿ.ಪಂ.ಗಮನಕ್ಕೆ ತಾರದೆ ಮಕ್ಕಳನ್ನು ಬೇರೆ ಶಾಲೆಗೆ ವರ್ಗಾಯಿಸಿರುವುದು ಹಾಗೂ ಶಾಲೆಯನ್ನು ಬೇರೆ ಶಾಲೆ ಜೊತೆ ವಿಲೀನಗೊಳಿಸುವ ಪ್ರಕ್ರಿಯೆ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ಬಂದಿರುವುದು ದುರದೃಷ್ಟಕರ ಎಂದ ಅಧ್ಯಕ್ಷರು, ಸಾಮಾನ್ಯ ಸಭೆಯಲ್ಲಿ ಶಾಲೆಯನ್ನು ದುರಸ್ತಿಪಡಿಸಿ ಉಳಿಸಿಕೊಳ್ಳುವ ಸಂಬಂಧ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಶಾಲೆಯಲ್ಲಿರುವ ಶಿಕ್ಷಕರನ್ನು ಏನು ಮಾಡಿದಿರಿ ಎಂದು ಡಿಡಿಪಿಐ ಅವರನ್ನು ಪ್ರಶ್ನಿಸಿದ ಅಧ್ಯಕ್ಷರು, ಈ ಸಂಬಂಧದ ಕಡತ ಮಂಡಿಸಲು ಆದೇಶ ನೀಡಿದರು. ಶಿಥಿಲಾವಸ್ಥೆಯಲ್ಲಿರುವ, ಅಪಾಯಕಾರಿ ಸ್ಥಿತಿಯಲ್ಲಿರುವ ಶಾಲೆಗಳ ಕಟ್ಟಡಗಳ ಮಾಹಿತಿ ನೀಡಲು ಈಗಾಗಲೇ ಸೂಚಿಸಲಾಗಿದ್ದು, ಪಟ್ಟಿಯಲ್ಲಿ ಈ ಶಾಲೆ ಇರಲಿಲ್ಲ ಎಂದು ಅಧ್ಯಕ್ಷರು ಹೇಳಿದರು.

ಒಂದು ತಿಂಗಳ ಹಿಂದೆ ಜಿ.ಪಂ. ಸೊತ್ತುಗಳ ಬಗ್ಗೆ ಮಾಹಿತಿ ಕೇಳಿ ಟಪ್ಪಣಿ ಹಾಕಿದ್ದು ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಸಿಇಒ ಗಮನಕ್ಕೆ ತಂದರು. ಇಲಾಖಾ ಆರ್‌ಟಿಸಿ ಹಾಗೂ ಜಿ.ಪಂ. ಸೊತ್ತುಗಳ ಬಗ್ಗೆ ಮಾಹಿತಿ ನೀಡಲು ಅಗತ್ಯ ನಿರ್ದೇಶನ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಒ ಶಿವಾನಂದ ಕಾಪಶಿ ಉತ್ತರಿಸಿದರು. 

ಸೌಪರ್ಣಿಕ ಏತ ನೀರಾವರಿ ಯೋಜನೆಯಡಿ ರೈತರಿಗೆ ನೀರೊದಗಿಸುವ ಬಗ್ಗೆ, ಗ್ರಾ.ಪಂ.ಗಳಲ್ಲಿ ತೆರಿಗೆ ಪರಿಷ್ಕರಣೆ ಮಾಡುವ ಬಗ್ಗೆ, ಕುಂದಾಪುರದ ನಾವುಂದ ಗ್ರಾ.ಪಂ. ವ್ಯಾಪ್ತಿಯ  ಕಟ್ಟಡ ಪರವಾನಿಗೆ ಬಗ್ಗೆ, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ಸುಗಳು ಸಮಯಕ್ಕೆ ಸರಿಯಾಗಿ ಸಾರ್ವಜನಿಕ ಹಿತಾಸಕ್ತಿ ಗಮನಿಸದೆ ಸಂಚರಿಸುವ ಬಗ್ಗೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಅವರು ಪ್ರಸ್ತಾವಿಸಿ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬೇಕೆಂದರು. 

Advertisement

ಜಿಲ್ಲೆಯ ವಸತಿ ಯೋಜನೆಗಳಿಗೆ ಪಿಡಬ್ಲೂಡಿ, ಕೆಆರ್‌ಐಡಿಎಲ್‌ ಮತ್ತು ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಇಲಾಖೆ ಮರಳು ನೀಡಿರುವ ಮಾಹಿತಿ ಯನ್ನು ಸಾಮಾನ್ಯ ಸಭೆಗೆ ಒದಗಿಸಿ ಎಂದು ಬಾಬು ಶೆಟ್ಟಿ ಹೇಳಿದರು. ಗ್ರಾ.ಪಂ.ಗೆ ಮರಳು ರಾಯಧನ ನೀಡುತ್ತಿಲ್ಲ ಎಂದ ಬಾಬು ಶೆಟ್ಟಿ ಅವರು,  ಬೈಂದೂರು ಚುನಾವಣಾ ಶಾಖೆಯಲ್ಲಿ ಸಿಬಂದಿಗಳ ಕೊರತೆ ನೀಗಿಸಿ ಎಂದರು. 

ಜಿಲ್ಲೆಯಲ್ಲಿ ಡೆಂಗ್ಯು ಇಳಿಮುಖ ವಾಗಿದ್ದು, ಮಲೇರಿಯಾ ಕಳೆದ ಬಾರಿಗೆ ಹೋಲಿಸಿದರೆ ಹತೋಟಿಯಲ್ಲಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ರೋಹಿಣಿ ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ಜಿ.ಪಂ.ಗೆ ಅನುದಾನ ಸಂಪೂರ್ಣವಾಗಿ ಬಿಡುಗಡೆಯಾಗಿದ್ದು ಕ್ರಿಯಾಯೋಜನೆಗೂ ಅನುಮೋದನೆ ನೀಡಲಾಗಿದೆ. ಕ್ರಿಯಾ ಯೋಜನೆಯಂತೆ ಎಲ್ಲ ಕೆಲಸಗಳನ್ನು ನಿಗದಿತ ಸಮಯದೊಳಗೆ ಸಂಪೂರ್ಣ ಗೊಳಿಸಿ ಎಂದು ಸಿಪಿಒ ಶ್ರೀನಿವಾಸ ರಾವ್‌ ತಿಳಿಸಿದರು. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ, ಉಪಕಾರ್ಯದರ್ಶಿ ನಾಗೇಶ್‌ ರಾಯ್ಕರ್‌ ಉಪಸ್ಥಿತರಿದ್ದರು. 

ಅಧಿಕಾರಿಗಳ ಗೈರು: ನೊಟೀಸು
ಕಡತ ಪರಿಶೀಲಿಸಿ ಮಾಹಿತಿ ನೀಡುವುದಾಗಿ ಮುಖ್ಯ ಯೋಜನಾಧಿಕಾರಿ ಅಧ್ಯಕ್ಷರಿಗೆ ಉತ್ತರಿಸಿದರು. ಬೈಕಾಡಿ ಅಂಗನವಾಡಿ ಕೇಂದ್ರದ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಇಲಾಖಾ ಕಟ್ಟಡಗಳ ಆರ್‌ಟಿಸಿ ಮಾಡುವ ಬಗ್ಗೆ ಅನುಪಾಲನಾ ಕ್ರಮಗಳ ಬಗ್ಗೆಯೂ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೊಟೀಸು ನೀಡಲು ಸೂಚನೆ ನೀಡಿದರು. 
 

Advertisement

Udayavani is now on Telegram. Click here to join our channel and stay updated with the latest news.

Next