Advertisement
ಅ. 16ರಂದು ನಡೆದ ಸಾಮಾನ್ಯಸಭೆಯಲ್ಲಿ ಪಿಡಿಒ ವರ್ಗಾವಣೆಯಲ್ಲಿ ಉಸ್ತುವಾರಿ ಸಚಿವರು ಜಿಲ್ಲಾ ಪಂಚಾಯತ್ ಆಡಳಿತದಲ್ಲಿ ಹಸ್ತಕ್ಷೇಪ ನಡೆಸಿದ್ದಾರೆ ಎಂದು ಬಿಜೆಪಿ ಸದಸ್ಯರು ಆಕ್ಷೇಪಿಸಿದ್ದರು. ಈ ಕುರಿತ ಚರ್ಚೆ ವೇಳೆ ಮರಳು ಸಾಗಾಟ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರ ಹೆಸರನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಉಲ್ಲೇಖ ಮಾಡಿರುವುದನ್ನು ಪ್ರತಿಭಟಿಸಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ್ದರು. ಬಳಿಕ ಸಭೆ ಮುಂದೂಡಲಾಗಿದ್ದು, ಮುಂದುವರಿದ ಸಾಮಾನ್ಯ ಸಭೆಯನ್ನು ಅ.26 ರಂದು ಕರೆಯಲಾಗಿತ್ತು.
Related Articles
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನಲ್ಲಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಂದ ಚುನಾಯಿತರಾದ ಒಟ್ಟು 36 ಸದಸ್ಯರಿದ್ದಾರೆ. ಇದಲ್ಲದೆ ಜಿಲ್ಲೆಯ 8 ಶಾಸಕರು, ಇಬ್ಬರು ವಿಧಾನಪರಿಷತ್ ಸದಸ್ಯರು. ಓರ್ವ ಸಂಸತ್ ಸದಸ್ಯರು ಹಾಗೂ 5 ತಾಲೂಕು ಪಂಚಾಯತ್ ಅಧ್ಯಕ್ಷರುಗಳು ಪರಿಷತ್‌ನ ಸಭೆಯಲ್ಲಿ ಭಾಗವಹಿಸಲು ಅವಕಾಶ ಪಡೆದಿರುತ್ತಾರೆ. ಹೀಗೆ ಒಟ್ಟು ಪರಿಷತ್ ಸಭೆಯ ಸದಸ್ಯಬಲ 52 ಆಗಿರುತ್ತದೆ. ಜಿ.ಪಂ. ಚುನಾಯಿತ ಸದಸ್ಯರಲ್ಲಿ 21 ಮಂದಿ ಬಿಜೆಪಿ ಹಾಗೂ 15 ಮಂದಿ ಕಾಂಗ್ರೆಸ್‌ಗೆ ಸೇರಿದ ಸದಸ್ಯರಿದ್ದಾರೆ. ಶಾಸಕರಲ್ಲಿ 7 ಕಾಂಗ್ರೆಸ್ ಹಾಗೂ ಓರ್ವ ಬಿಜೆಪಿ ಸದಸ್ಯರು, ತಾಲೂಕು ಪಂಚಾಯತ್ ಅಧ್ಯಕ್ಷರುಗಳಲ್ಲಿ 3 ಕಾಂಗ್ರೆಸ್ ಹಾಗೂ 2 ಬಿಜೆಪಿ ಹಾಗೂ ವಿಧಾನ ಪರಿಷತ್‌ಸದಸ್ಯರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ತಲಾ ಓರ್ವ ಸದಸ್ಯರು ಪರಿಷತ್ ಸಭೆಯ ಸದಸ್ಯರಾಗಿರುತ್ತಾರೆ. ಹೀಗೆ ಎಲ್ಲಾ ಸೇರಿದರೆ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 26 ಸದಸ್ಯರನ್ನು ಹೊಂದಿದ್ದು ಸಮಬಲದಲ್ಲಿದೆ. ಸಭೆ ನಡೆಸಬೇಕಾದರೆ ಕೋರಂಗೆ 26 ಸದಸ್ಯರ ಅವಶ್ಯವಿದೆ. ಆದರೆ ಸೋಮವಾರ ಆಯೋಜಿಸಿದ್ದ ಭೆಯಲ್ಲಿ ಬಿಜೆಪಿಯ 22 ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷರು ಸೇರಿ ಒಟ್ಟು 23 ಸದಸ್ಯರು ಹಾಜರಿದ್ದು ಕೋರಂಗೆ 3 ಸದಸ್ಯರು ಕೊರತೆ ಉಂಟಾಗಿತ್ತು.
Advertisement
ಸ್ಥಾಯಿಸಮಿತಿ ಅಧ್ಯಕ್ಷರ ಕೊಠಡಿಯಲ್ಲೇ ಉಳಿದ ಕಾಂಗ್ರೆಸ್ ಸದಸ್ಯರು ಕಾಂಗ್ರೆಸ್‌ಗೆ ಸೇರಿದ ಎಲ್ಲಾ 15 ಮಂದಿ ಸದಸ್ಯರು ಹಾಗೂ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರು ಜಿಲ್ಲಾ ಪಂಚಾಯತ್ ಕಚೇರಿಗೆ ಬೆಳಗ್ಗೆ 11 ಗಂಟೆಗೆ ಆಗಮಿಸಿದ್ದರು. ಆದರೆ ಅವರು ಜಿಲ್ಲಾ ಪಂಚಾಯತ್ ಸದನಕ್ಕೆ ಆಗಮಿಸದೆ ಕಾಂಗ್ರೆಸ್ ಸದಸ್ಯರು ಅಧ್ಯಕ್ಷರಾಗಿರುವ ಸ್ಥಾಯಿಸಮಿತಿ ಕಚೇರಿಯಲ್ಲೇ ಉಳಿದುಕೊಂಡು ಸಭೆ ನಡೆಸಿದರು.
ಅಧ್ಯಕ್ಷರ ನಡವಳಿಕೆಯಿಂದ ನೋವಾಗಿದೆ : ಕಾಂಗ್ರೆಸ್ಸಭೆಗೆ ಹಾಜರಾಗುವ ಉದ್ದೇಶದಿಂದಲೇ ಬಂದಿದ್ದೆವು. ಅ.16ರ ಸಾಮಾನ್ಯಸಭೆಯಲ್ಲಿ ಆಗಿರುವ ವಿಚಾರಗಳ ಬಗ್ಗೆ ಜಿ. ಪಂ. ಅಧ್ಯಕ್ಷರು ನಮ್ಮನ್ನು ಕರೆದು ಮಾತನಾಡುವ ಸೌಜನ್ಯವನ್ನೂ ಕೂಡಾ ತೋರ್ಪಡಿಸಲಿಲ್ಲ. ಸಭೆಯೊಳಗೆ ಮತ್ತೆ ವಿಷಯ ಪ್ರಸ್ತಾವವಾಗುವುದನ್ನು ನಾವು ಬಯಸುತ್ತಿಲ್ಲ. ಅವರು ನಮ್ಮನ್ನು ಕರೆದಿದ್ದರೆ ಅವರ ಕೊಠಡಿಗೆ ಹೋಗಿ ಮಾತನಾಡಿ ವಿಷಯವನ್ನು ಸೌಹಾರ್ದಯುತವಾಗಿ ಖಂಡಿತವಾಗಿ ಮುಕ್ತಾಯ ಮಾಡುತ್ತಿದ್ದೆವು. ಅಧ್ಯಕ್ಷರ ನಡವಳಿಕೆ ನಮಗೆ ನೋವು ತಂದಿದೆ ಎಂದು ಜಿ. ಪಂ. ವಿಪಕ್ಷ ನಾಯಕ ಎಂ.ಎಸ್. ಮಹಮ್ಮದ್ ಹಾಗೂ ಹಿರಿಯ ಸದಸ್ಯೆ ಮಮತ ಗಟ್ಟಿ ಅವರು ಸುದ್ದಿಗಾರರಿಗೆ ತಿಳಿಸಿದರು. ಕಾಂಗ್ರೆಸ್ ಧೋರಣೆ ಸರಿಯಲ್ಲ:
ಜಿಲ್ಲಾ ಪಂಚಾಯತ್ ಅಧ್ಯಕ್ಷರು ಗುರುವಾರ ನಿಗದಿಯಾಗಿದ್ದ ಜಿ.ಪಂ. ಮುಂದುವರಿದ ಸಾಮಾನ್ಯಸಭೆಯಲ್ಲಿ ಪಡಿತರ ಚೀಟಿ, ಹಕ್ಕುಪತ್ರ ಸಮಸ್ಯೆ ಸೇರಿದಂತೆ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕಾಗಿತ್ತು. ಆದರೆ ಸಭೆಗೆ ಬಾರದೆ ಹೊರಗೆ ಉಳಿದಿರುವ ಕಾಂಗ್ರೆಸ್ ಸದಸ್ಯರ ಧೋರಣೆ ಸರಿಯಲ್ಲ. ನಾನು ಮರಳಿನ ಸಮಸ್ಯೆಯ ಬಗ್ಗೆ ಕಳೆದ ಸಭೆಯಲ್ಲಿ ಪ್ರಸ್ತಾವಿಸಿದ್ದೇನೆ. ಇದಕ್ಕೆ ಕಾಂಗ್ರೆಸ್ ಸದಸ್ಯರು ನಾನು ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದು ಧರಣಿ ನಡೆಸಿದ್ದರಿಂದ ಸಭೆ ಮುಂದೂಡಬೇಕಾಯಿತು. ಕಾಂಗ್ರೆಸ್ ಸದಸ್ಯರ ನಡೆವಳಿಕೆಯಿಂದ ನಮಗೂ ನೋವಾಗಿದೆ. ಆದರೆ ಮಾತುಕತೆಗೆ ಸಿದ್ಧ ಎಂದು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ತಿಳಿಸಿದ್ದಾರೆ.