ನಿರ್ದೇಶಕ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಈಗ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಸಮರ್ಜಿತ್ ಲಂಕೇಶ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾಕ್ಕೆ “ಗೌರಿ’ ಎಂದು ಟೈಟಲ್ ಇಡಲಾಗಿದ್ದು, ಸಮರ್ಜಿತ್ ಲಂಕೇಶ್ ಚೊಚ್ಚಲ ಸಿನಿಮಾಕ್ಕೆ ಅವರ ತಂದೆ ಇಂದ್ರಜಿತ್ ಲಂಕೇಶ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ.
ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ. ಆದಿಚುಂಚನಗಿರಿ ಮಠದ ಶ್ರೀನಿರ್ಮಲಾ ನಂದನಾಥ ಸ್ವಾಮೀಜಿ ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದು, ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ಮುಹೂರ್ತದ ಬಳಿಕ ಮಾತನಾಡಿದ ನಾಯಕ ನಟ ಸಮರ್ ಜಿತ್ ಲಂಕೇಶ್, “ಹಲವು ವರ್ಷಗಳಿಂದ ನಟನೆ ಮತ್ತು ಸಿನಿಮಾಕ್ಕೆ ಬೇಕಾದ ತರಬೇತಿ ಮಾಡಿಕೊಳ್ಳುತ್ತಿದ್ದೇನೆ. “ರಂಗಶಂಕರ’, “ನ್ಯೂಯಾರ್ಕ್ ಫಿಲಂ ಅಕಾಡೆಮಿ’ಯಲ್ಲಿ ಅಭಿನಯಕ್ಕೆ ಬೇಕಾದ ತರಬೇತಿ ಪಡೆದುಕೊಂಡಿದ್ದೇನೆ. ಸಿನಿಮಾಕ್ಕೆ ಬೇಕಾದ ಫೈಟ್ಸ್, ಡ್ಯಾನ್ಸ್ ಎಲ್ಲ ಥರದ ತಯಾರಿ ಮಾಡಿಕೊಂಡಿದ್ದೇನೆ. ಜೊತೆಗೆ “ಗರಡಿ’, “ಕರಟಕ ಧಮನಕ’ ಸಿನಿಮಾದಲ್ಲಿ ಯೋಗರಾಜ್ ಭಟ್ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಈ ಸಿನಿಮಾದ ಮೂಲಕ ನಾಯಕನಾಗಿ ಪರಿಚಯವಾಗುತ್ತಿದ್ದಾನೆ. ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿ, “ಇದೊಂದು ನೈಜ ಘಟನೆಯಿಂದ ಪ್ರೇರಣೆ ಪಡೆದು ಮಾಡುತ್ತಿರುವ ಸಿನಿಮಾ. ಆ ಘಟನೆಯ ಬಗ್ಗೆ ಈಗಲೇ ಹೆಚ್ಚೇನೂ ಹೇಳಲಾಗದು. ನಾವು ಯಾರಿಗೂ ಕಮ್ಮಿಯಿಲ್ಲ ಎಂದು ಬಯಸುವ ಇಂದಿನ ಜನರೇಶನ್‌ನ ಯುವಕರ ಮನಸ್ಥಿತಿ ಮತ್ತು ಇಂದಿನ ಯವಕರಿಗೆ ಪ್ರೇರಣೆಯಾಗುವಂಥ ಸಿನಿಮಾ ಇದಾಗಲಿದೆ. 2005ರಲ್ಲಿ “ಐಶ್ವರ್ಯ’ ಸಿನಿಮಾ ಮೂಲಕ ದೀಪಿಕಾ ಪಡುಕೋಣೆ ಅವರನ್ನು ನಾಯಕಿಯಾಗಿ ಪರಿಚಯಿಸಲಾಗಿತ್ತು. “ಗೌರಿ’ ಸಿನಿಮಾದ ಮೂಲಕ ಸಮರ್‌ಜಿತ್ ಮತ್ತು ಸಾನ್ಯಾ ಅಯ್ಯರ್ ಇಬ್ಬರು ನವ ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ. ನನ್ನ ಸೋದರಿ ಗೌರಿ ಲಂಕೇಶ್ ಮೇಲಿನ ಪ್ರೀತಿಯಿಂದ ಈ ಸಿನಿಮಾಕ್ಕೆ “ಗೌರಿ’ ಅಂಥ ಹೆಸರಿಡಲಾಗಿದೆ’ ಎಂದರು.
ಸಿನಿಮಾ ದಲ್ಲಿ ಸಮರ್ಜಿತ್ ಗೆ ನಾಯಕಿಯಾಗಿ ಕಿರುತೆರೆಯ” ಪುಟ್ಟಗೌರಿಯ ಮದುವೆ’ ಧಾರಾವಾಹಿ ಖ್ಯಾತಿಯ ಸಾನ್ಯಾ ಅಯ್ಯರ್ ನಾಯಕಿಯಾಗಿ ಅಭಿನಯಿ ಸುತ್ತಿದ್ದಾರೆ. “ಚಿಕ್ಕ ವಯಸ್ಸಿ ನಿಂದಲೂ ನಟಿಯಾ ಗಬೇಕೆಂಬ ಕನಸಿತ್ತು. ಆ ಕನಸು ಈ ಸಿನಿಮಾದ ಮೂಲಕ ನನಸಾಗುತ್ತಿದೆ. ಇಂದ್ರಜಿತ್ ಲಂಕೇಶ್ ಅವರಂಥ ಸ್ಟಾರ್ ನಿರ್ದೇಶರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗುತ್ತಿದೆ. ಪ್ರೇಕ್ಷಕರಿಗೆ ಇಷ್ಟವಾಗುವಂಥ ಸಿನಿಮಾ ಬರಲಿದೆ’ ಎಂಬುದು ನಾಯಕಿ ಸಾನ್ಯಾ ಅಯ್ಯರ್ ಮಾತು.
ಮುಹೂರ್ತದ ವೇಳೆ ಹಾಜರಿದ್ದ ನಟಿ ಮಾನಸಿ ಸುಧೀರ್, ಸಂಭಾಷಣೆಕಾರ ಬಿ. ಎ. ಮಧು, ಮಾಸ್ತಿ, ಚಿತ್ರ ಸಾಹಿತಿ ಕವಿರಾಜ್, ನಿರ್ಮಾಪಕಿ ಅರ್ಪಿತಾ ಲಂಕೇಶ್, ವಕೀಲ ಶ್ಯಾಮ್ ಸುಂದರ್, ಆನಂದ್ ಆಡಿಯೋ ಶ್ಯಾಮ್ ಮೊದಲಾದವರು ಸಿನಿಮಾದ ಬಗ್ಗೆ ಮಾತನಾಡಿದರು.
“ಗೌರಿ’ ಸಿನಿಮಾಕ್ಕೆ ಎ. ಜೆ ಶೆಟ್ಟಿ ಛಾಯಾಗ್ರಹಣ, ಕೆ. ಎಂ. ಪ್ರಕಾಶ್ ಸಂಕಲನವಿದೆ. ಇದೇ ಸೆಪ್ಟೆಂಬರ್‌ನಿಂದ “ಗೌರಿ’ ಸಿನಿಮಾದ ಶೂಟಿಂಗ್ ಆರಂಭವಾಗಲಿದ್ದು, ಮುಂದಿನ ಮಾರ್ಚ್ ವೇಳೆಗೆ ಸಿನಿಮಾ ತೆರೆಗೆ ತರುವ ಯೋಜನೆಯಿದೆ. ಕರ್ನಾಟಕದ ಹಲವು ಭಾಗಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ ಎಂಬುದು ಚಿತ್ರತಂಡ ಮಾಹಿತಿ.