Advertisement

Gowri-Ganesha Festival: ಹಬ್ಬಗಳು ನಮ್ಮ ಬದುಕಿನಿಂದ ಇನ್ನೂ ದೂರ ಸರಿದಿಲ್ಲ

02:53 PM Sep 18, 2023 | Team Udayavani |

‘ಏಕದಂತಂ ಮಹಾಕಾಯಂ

Advertisement

ಲಂಬೋದರಂ ಗಜಾನನಂ

ವಿಘ್ನ ನಾಶಕರ್ಮ ದೇವಂ

ಹೇರಂಭಂ ಪ್ರಣಮಾಮ್ಯಹಂ’

ಭಾರತದ ಪರಂಪರೆ ಬಹಳ ವಿಶಿಷ್ಟ ಹಾಗೂ ಅಪರೂಪವಾದದ್ದು. ಭಾರತೀಯರ ಸಾಂಸ್ಕೃತಿಕ ನೆಲೆಗಟ್ಟು ಬಹಳ ಪವಿತ್ರವಾದುದು. ನಮ್ಮಲ್ಲಿ ಸಂಬಂಧ, ಬಾಂಧವ್ಯಗಳಿಗೆ ಹೆಚ್ಚು ಬೆಲೆ ಕೊಡುತ್ತೇವೆ. ಹೀಗಾಗಿ ಪ್ರತಿಯೊಂದು ಸಂದರ್ಭಗಳನ್ನು ಹಬ್ಬಗಳಲ್ಲಿ ಕಾಣುವರು.

Advertisement

ಭಾರತೀಯರು ಸಂಪ್ರದಾಯದ ಪರಂಪರೆಯ ಮೇಲೆ ಅಪಾರ ಅಭಿಮಾನ ಉಳ್ಳವರು. ನಮಗೆ ಹಬ್ಬಗಳ ಮೇಲೆ ಅತ್ಯಂತ ವ್ಯಾಮೋಹ ಏಕೆಂದರೆ ” ನೆಮ್ಮದಿಯ, ಪ್ರೀತಿಯ ಬದುಕು” ಕಣ್ಣ ಮುಂದೆ ಹಾದು ಹೋಗುವುದು. ಬಹುಶಃ ಇಂದಿನ ದಿನಗಳಲ್ಲಿ ಅಂತಹ ಒಗ್ಗಟ್ಟು ಕಾಣದೇ ಹೋದರೂ ಕೂಡ ಹಬ್ಬಗಳು ನಮ್ಮ ಬದುಕಿನಿಂದ ಇನ್ನೂ ದೂರ ಸರಿದಿಲ್ಲ.

ಭಾರತೀಯ ಪರಂಪರೆಯಲ್ಲಿ ಪ್ರತಿಯೊಂದು ಹಬ್ಬದ ಹಿಂದೆಯೂ ಒಂದು ಸಕಾರಾತ್ಮಕ ಯೋಚನೆ ಅಡಗಿದೆ. “ದುಷ್ಟ ಶಿಕ್ಷಣ, ಶಿಷ್ಟ ರಕ್ಷಣ” ಎಂಬ ನಾಣ್ಣುಡಿ ನಿಜವಾಗಿದೆ. ಜಗನ್ನಾಥದಾಸರು “ಫಲವಿದು ಬಾಳ್ದುದಕೆ” ಮತ್ತು “ಹರಿಕಥಾಮೃತಸಾರ” ದಲ್ಲಿ ಕಠಿಣ ಕಲಿಯುಗದಲ್ಲಿ ಅನುಸಂಧಾನವೇ ಪುಣ್ಯ ಗಳಿಕೆಯ ಸುಲಭ, ಸರಳ ಮಾರ್ಗವೆಂದು ತಿಳಿಸಿದ್ದಾರೆ.

ಹಾಗಾಗಿಯೇ ಹಬ್ಬಗಳ ಆಚರಣೆ ಮಾಡುವುದು ಅಗತ್ಯವಾಗಿದೆ. ಇದರಲ್ಲಿ ಒಂದು ಹಬ್ಬವೇ ಗೌರಿ ಗಣೇಶ ಹಬ್ಬ. ತುಂಬಾ ಅದ್ದೂರಿಯಾಗಿ ಅದರ ಆಚರಣೆ ಕಣ್ತುಂಬುವಂತೆ ಮಾಡುತ್ತದೆ.

ಗೌರಿ ಗಣೇಶ ಹಬ್ಬಗಳು ಜೊತೆಯಾಗಿ ಬರುತ್ತವೆ. ಒಮ್ಮೊಮ್ಮೆ ಗೌರಿ ಹಬ್ಬ ಒಂದು ದಿನ ಮೊದಲು ಬರುತ್ತದೆ. ವಿವಾಹಿತ ಮಹಿಳೆಯರಿಗೆ ತವರು ಮನೆಯಿಂದ ಉಡುಗೊರೆ ಹಾಗೂ ಬಾಗಿನ ಕೊಡುವ ಸಂಪ್ರದಾಯವಿದೆ.

ಮನೆಗಳಲ್ಲಿ ಗೌರಿ ವಿಗ್ರಹವನ್ನು ವಿಶೇಷವಾಗಿ ಅಲಂಕರಿಸಿ ಪೂಜಿಸುತ್ತಾರೆ. ಮನೆಗಳನ್ನು ತಳಿರು ತೋರಣಗಳಿಂದ ಅಲಂಕರಿಸುತ್ತಾರೆ. ಗಿಣಿ ಹಸಿರು ಬಣ್ಣದ ಸೀರೆ ಅದೇ ಬಣ್ಣದ ಹಸಿರು ರವಿಕೆ ಬಟ್ಟೆಯನ್ನು ಗೌರಿ ದೇವತೆಗೆ ಹೊದಿಸಿ ನಂತರ ಅದನ್ನು ಮುತ್ತೈದೆಗೆ ಬಾಗಿನ ಕೊಡುತ್ತಾರೆ.

ಗೌರಿ ಹಬ್ಬವನ್ನು ಸ್ವರ್ಣಗೌರಿ ಹಬ್ಬವೆಂದೂ ಕೂಡ ಕರೆಯುತ್ತಾರೆ. ಕೈಗೆ ಅರಿಶಿನ ದಾರ, ಸೇವಂತಿಗೆ ಹೂ ಗೌರಿ ಹಬ್ಬಕ್ಕೆ ತುಂಬಾ ಶ್ರೇಷ್ಠ. ಗೌರಿ ಹಬ್ಬವನ್ನು ಆಚರಿಸುವುದರಿಂದ ಸಮಸ್ತ ಸಂಪತ್ತು ಬರುವುದು. ಶತ್ರುಗಳನ್ನು ಜಯಿಸುವರು. ನಿರ್ದೋಷವಾದ ಉತ್ತಮ ಪದವಿಯನ್ನು ಬೇಗನೆ ಹೊಂದುವರು. ಮಕ್ಕಳನ್ನು ಬಯಸುವವರು ಮಕ್ಕಳನ್ನು ಪಡೆಯುವರು. ವಿದ್ಯೆಯನ್ನು ಅಪೇಕ್ಷಿಸುವವರು ವಿದ್ಯೆಯನ್ನೂ, ಮೋಕ್ಷವನ್ನು ಬಯಸುವವರು ಮೋಕ್ಷವನ್ನು ಪಡೆಯುವರು. ಸ್ವರ್ಣಗೌರಿಯ ಪ್ರಸಾದದಿಂದ ಸರ್ವಕಾರ್ಯಗಳೂ ಸಿದ್ಧಿಸುವವು.

ಗಣೇಶನ ಹಬ್ಬಕ್ಕೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕಾತುರದಿಂದ ಕಾಯುತ್ತಿರುತ್ತಾರೆ. ಪಾರ್ವತಿ ಪುತ್ರನಾದ ಗಣಪ ಪರಶಿವನಿಂದ ಹತನಾಗುವುದು, ಅನಂತರ ಆನೆಯ ತಲೆ ಜೋಡಿಸಿ ಬದುಕುವುದು.

ಕಡುಬು, ಮೋದಕ, ಪಾಯಸವನ್ನು ಹೊಟ್ಟೆ ಪೂರ್ತಿ ಉಂಡು ಗಣಪನ ವಾಹನವಾದ ಇಲಿಯ ಮೇಲೆ ಸುತ್ತುವುದನ್ನು ನೋಡಿದ ಚಂದ್ರ ಶಾಪಗ್ರಸ್ತನಾಗುವುದು. ಈ ರೀತಿ ಗಣೇಶನ ಜೀವನೇತಿಹಾಸ ನವಿರಾದ ಹಾಸ್ಯದಿಂದ ತುಂಬಿದೆ.

ಸಿದ್ಧಿ ಬುದ್ಧಿಗಳಿಗೆ ಒಡೆಯನಾದ ಗಣೇಶ ಕೇಳಿದ ವರಗಳನ್ನು ನೀಡುವ ದೇವರು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿಯೂ ಗಣೇಶನ ವಿಗ್ರಹವನ್ನು ಕೂರಿಸಿ ವಿಶೇಷವಾಗಿ ಹಬ್ಬ ಆಚರಿಸುತ್ತಾರೆ. ಕೊನೆಗೆ ಗಣೇಶನನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ಗಣೇಶನ ಉತ್ಸವವನ್ನು ದೇಶದ ಎಲ್ಲಾ ಕಡೆ ವಿಜೃಂಭಣೆಯಿಂದ ಆಚರಿಸುತ್ತಾರೆ.

ಭಾದ್ರಪದ ಶುಕ್ಲಪಕ್ಷದ ತದಿಗೆಯಂದು ತೊಡಗಿ 16 ವರ್ಷಗಳಲ್ಲಿ ಗೌರೀವೃತವನ್ನು ಷೋಡಶೋಪಚಾರ ಪೂಜೆಗಳಿಂದ ಪಾರ್ವತಿಯನ್ನು ಪೂಜಿಸಿದರೆ ಸೌಭಾಗ್ಯಗಳು ಹೇಗೆ ಲಭಿಸುವುದೊ ಚತುರ್ಥಿಯಲ್ಲಿ ಗಣಪತಿಯನ್ನು ಪೂಜಿಸಿದರೆ ವಿಘ್ನಪರಿಹಾರಗಳೂ, ಸಂತತಿ- ಸಂಪತ್ತುಗಳು ಲಭಿಸುವವು.

ಕುಷ್ಠವ್ಯಾಧಿಗಳಂತಹ ಭೀಕರ ಆರೋಗ್ಯ ಸಮಸ್ಯೆಗಳು ನಾಶವಾಗುವುದು. ಮನಸ್ಸಿನಲ್ಲಿ ಆಲೋಚಿಸಿದ ಕಾರ್ಯಗಳೆಲ್ಲವೂ ಕೈಗೂಡುವವು. ಹೀಗೆ ಇಷ್ಟ ಸಿದ್ಧಿಯನ್ನು ಕೊಡುವ ಕಾರಣದಿಂದಲೇ ಗಣಪತಿಯು ‘ ಸಿದ್ಧಿ ವಿನಾಯಕ’ನೆಂದು ಪ್ರಸಿದ್ಧನಾದನು.

ಗಣಪತಿಯನ್ನು ಪೂಜಿಸಿದರೆ ವಿಷ್ಣುವೂ, ರುದ್ರನೂ, ಸೂರ್ಯನೂ, ಪಾರ್ವತಿಯೂ, ಅಗ್ನಿಯೇ ಮೊದಲಾದ ದೇವತೆಗಳೂ ಸಂತುಷ್ಟರಾಗುವರು. ಮಾತೃದೇವತೆಗಳೂ ಕೂಡ ಸಂತುಷ್ಟರಾಗುವರು.

ಕಲಿಯುಗದಲ್ಲಿ ಆಯುಷ್ಯ ಕಡಿಮೆಯಾಗಿದೆ. ಸಾಧನೆಗೆ ವಿಘ್ನಗಳು ಹೆಚ್ಚು. ಸಾಧನೆಯು ಮರುಭೂಮಿಯಲ್ಲಿನ ಮರೀಚಿಕೆಯಂತೆ ಆಗಿದೆ. ದಾಸರೂ, ಅಪರೋಕ್ಷ ಜ್ನಾನಿಗಳು, ಯತಿವರೇಣ್ಯರು ಕರ್ಮಗಳನ್ನು ಹೇಗೆ ಅನುಸಂಧಾನ ಪೂರ್ವಕವಾಗಿ ಅರ್ಪಿಸಬೇಕೆಂಬುದನ್ನು ತಿಳಿಸಿಕೊಟ್ಟು ಮಹದುಪಕಾರ ಮಾಡಿದ್ದಾರೆ. ಕೇವಲ ದೇವರ ನಾಮಸ್ಮರಣೆಯಿಂದ ಕಲಿಯುಗದಲ್ಲಿ ಸಾಧನೆ ಸಾಧ್ಯ ಎಂದು ತೋರಿಸಿ ಕೊಟ್ಟಿದ್ದಾರೆ.

//ಓಂ ತತ್ಸತ್//

-ಅನ್ವಿತಾ ಎಂ ತಂತ್ರಿ

ದ್ವಿತೀಯ  ಬಿಎಸ್ಸಿ

ಎಂ.ಜಿ.ಎಂ. ಕಾಲೇಜು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next