Advertisement

ಮದುಮಗಳ ಅಂದಕ್ಕೆ ಗೌನ್‌ ಶೃಂಗಾರ ಕಾವ್ಯ

01:20 PM Sep 21, 2018 | |

ಮದುವೆಗೆ ಸೀರೆಯೇ ಉಡಬೇಕು ಎಂಬ ಕಾಲ ಹೋಗಿದೆ. ಸೀರೆಯಲ್ಲೇ ಹೆಣ್ಮಕ್ಕಳ ಸೊಬಗು ಎಂದು ಮನೆಯ ಹಿರಿಯಜ್ಜಿಯೋ, ಅಮ್ಮನೋ ಮಾತು ಬೆಳೆಸಿದರೂ, ಬಿಟ್ಟು ಕೊಡುವವರಲ್ಲ ನಮ್ಮ ಹೆಣ್ಮಕ್ಳು. ಧಾರಾಕಾರ್ಯಕ್ಕೆ ಸೀರೆ ಉಟ್ಟು, ರಿಸೆಪ್ಷನ್‌ ಗೆ ಗೌನ್‌ನಲ್ಲೇ ಮಿಂಚಬೇಕೆಂಬ ಆಸೆಯೊಂದಿಗೇ ಹೊಸ ಗೌನ್‌ ಖರೀದಿಸಿ ಧರಿಸುವುದು ಹುಡುಗಿಯರ ಇಷ್ಟ. ಡಿಸೈನ್‌ ಹೊಂದಿರುವ ಫುಲ್‌ ಹ್ಯಾಂಡ್‌ ಗೌನ್‌ಗಳು ಆಕರ್ಷಕ ಲುಕ್‌ ನೀಡುತ್ತವೆ.

Advertisement

ಹಬ್ಬಗಳ ಸೀಸನ್‌ ಜತೆಗೆ ಮದುವೆ ಸೀಸನ್‌ ಕೂಡಾ ಶುರುವಾಗಿದೆ. ಹಬ್ಬಕ್ಕೊಂದು, ಮದುವೆಗೊಂದು ಇರಲಿ ಅಂತ ಬಟ್ಟೆಗಳ ಖರೀದಿಯೂ ಜೋರಾಗಿದೆ. ಇದರ ಜತೆ ಜತೆಗೆ ಮದುಮಗಳ ಸಿಂಗಾರಕ್ಕೂ ಹೊಸ ಬಟ್ಟೆಗಳು ಶೃಂಗಾರ ಕಾವ್ಯ ಹಾಡಿವೆ. ಮದುಮಗಳು ಮದುವೆ ಮಂಟಪಕ್ಕೆ ಬರುವಾಗ ಸೀರೆ ಉಡಲೇಬೇಕು ಎಂಬುದೆಲ್ಲ ಈಗ ಹಳೆ ಫ್ಯಾಶನ್‌ ಮಂತ್ರ. ಸದ್ಯ ಏನಿದ್ದರೂ, ಡ್ರೆಸ್‌ ತೊಟ್ಟು ಶೋಭಿಸುವ ಆಸೆ ಮದುಮಗಳಿಗೆ. ಮದುಮಗಳ ಶೃಂಗಾರಕ್ಕೆಂದೇ ವೆರೈಟಿ ಡ್ರೆಸ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಗೌನ್‌, ಲೆಹಂಗಾಗಳು ಹೊಸತನದೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದ್ದು, ಮದುಮಗಳ ಸೌಂದರ್ಯವನ್ನು ಸೆಳೆಯುತ್ತಿವೆ.

ಗೌನ್‌ ಗಮ್ಮತ್ತು
ಸ್ಯಾಂಡಲ್‌ವುಡ್‌ ನಟಿಯರಾದ ಅಮೂಲ್ಯಾ, ರಾಧಿಕಾ ಪಂಡಿತ್‌ ತಮ್ಮ ಮದುವೆ, ಎಂಗೇಜ್ಮೆಂಟ್‌ನಲ್ಲಿ ಗೌನ್‌ ಹಾಕಿ ಫೋಟೋಕ್ಕೆ ಪೋಸ್‌ ಕೊಟ್ಟಾಗಲೇ ಫ್ಯಾಶನ್‌ ಪ್ರಿಯ ಹೆಣ್ಮಕ್ಕಳ ಆಸೆ ಚಿಗುರೊಡೆದಿತ್ತು. ತಿಳಿ ಪಿಂಕ್‌ ಬಣ್ಣದ ಎಂಗೇಜ್ಮೆಂಟ್‌ ಗೌನ್‌ನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಆ ಆಸೆಗಳಿಗೆ ಇನ್ನಷ್ಟು ರೆಕ್ಕೆಪುಕ್ಕ ತುಂಬಿದ್ದರು. ಅಲ್ಲಿಂದೀಚೆಗೆ ಸಾಮಾನ್ಯ ಹೆಣ್ಣು ಮಕ್ಕಳೂ ಮದುವೆಯಲ್ಲಿ ಗೌನ್‌ ತೊಟ್ಟು ಮದುವೆ ಮಂಟಪದಲ್ಲಿ ಶೋಭಿಸಬೇಕೆಂಬ ಕನಸು ಕಂಡವರೇ. ಈಗಂತೂ ಕಳೆದ ಕೆಲ ಸಮಯಗಳಿಂದ ಮದುವೆಗೆ ಗೌನ್‌ ತೊಡುವುದು ಟ್ರೆಂಡ್‌ ಆಗಿದೆ. 

ಲೆಹಂಗಾ ಬ್ಯೂಟಿ
ಪ್ರಸ್ತುತ ಮದುಮಗಳ ಧಿರಿಸಿನಲ್ಲಿ ಗೌನ್‌ ಹೆಚ್ಚು ಚಾಲ್ತಿಯಲ್ಲಿದ್ದರೆ, ಲೆಹಂಗಾ ಧರಿಸುವಿಕೆಯೂ ತೆರೆಗೆ ಸರಿದಿಲ್ಲ. ಮದುವೆಗೆ ಲೆಹೆಂಗಾ ಧರಿಸುವುದು ಕಡಿಮೆಯಾದರೂ, ಎಂಗೇಜ್ಮೆಂಟ್‌ಗೆ ಇದು ಜಾಸ್ತಿ ಬಳಕೆಯಾಗುತ್ತದೆ. ಲೆಹೆಂಗಾದಲ್ಲಿಯೂ ನಾನಾ ರೀತಿಯ ಡಿಸೈನ್‌ಗಳನ್ನು ಹೊಂದಿದವುಗಳಿದ್ದು, ಆಯ್ಕೆಗೆ ಅವಕಾಶಗಳಿವೆ. 

ಗೌನ್‌ ವೆರೈಟಿ
ಗೌನ್‌ನಲ್ಲಿ ವಿವಿಧ ರೀತಿಯವುಗಳಿವೆ. ಸಿಂಪಲ್‌ನಿಂದ ಹಿಡಿದು ಗ್ರ್ಯಾಂಡ್ ವರ್ಕ್‌ ಇರುವ ಅನೇಕ ಗೌನ್‌ಗಳಿವೆ. ಎಂಗೇಜ್ಮೆಂಟ್‌ ಗಾಗಲೀ, ಮದುವೆಗಾಗಲೀ ಗ್ರ್ಯಾಂಡ್  ಮತ್ತು ಹೆಚ್ಚಿನ ಲುಕ್‌ನಿಂದಿರುವ ಗೌನ್‌ಗಳೇ ಆಕರ್ಷಕ. ಫುಲ್‌ ಡಿಸೈನ್‌ ಹೊಂದಿರುವ ಗೌನ್‌ಗಳು ಹೆಚ್ಚು ಸುಂದರವಾಗಿ ಕಾಣುತ್ತವೆ. ಪ್ರತ್ಯೇಕ ಬಟ್ಟೆ ಖರೀದಿಸಿ, ಇಲ್ಲವೆ ಸೆಮಿ ಸ್ಟಿಚ್‌ಡ್‌ ಗೌನ್‌ಗಳನ್ನು ಖರೀದಿಸಿ ಸ್ಟಿಚ್‌ ಮಾಡುವ ವ್ಯವಸ್ಥೆಯೂ ಇರುವುದರಿಂದ ಬೇಕಾದ ರೀತಿಯ ವಿನ್ಯಾಸದಲ್ಲಿ ಹೊಲಿಸಬಹುದು. 

Advertisement

ವಿರುದ್ಧ ಕಲರ್‌ ಆಯ್ಕೆ ಮಾಡಿ
ಹೆಚ್ಚಾಗಿ ಗೌನ್‌ ಧರಿಸುವಾಗ ಬ್ಲೌಸ್‌ ಮತ್ತು ಸ್ಕರ್ಟ್‌ ವಿರುದ್ಧ ಬಣ್ಣಗಳಿದ್ದಾಗ ಸೌಂದರ್ಯ ಹೆಚ್ಚುತ್ತದೆ. ಧರಿಸುವಾಗ ಸ್ವಲ್ಪ ಡಲ್‌ ಕಾಣುವುದರಿಂದ ಆಕರ್ಷಕ ಲುಕ್‌ ಸಿಗದು. ಹಾಗಾಗಿ ಬಣ್ಣಗಳ ಆಯ್ಕೆಯಲ್ಲಿ ಜಾಗರೂಕರಾಗಿರಬೇಕು. 

ಆನ್‌ಲೈನ್‌ನಲ್ಲಿ ಹುಡುಕಾಟ
ಮ್ಯಾಚಿಂಗ್‌ ಆಭರಣ, ಮ್ಯಾಚಿಂಗ್‌ ಡ್ರೆಸ್‌..ಇದೆಲ್ಲ ಹೆಣ್ಮಕ್ಕಳ ಕನಸುಗಳ ಸಾಲಿನಲ್ಲಿ ಸಾಮಾನ್ಯ ವಿಷಯಗಳು. ನೆಚ್ಚಿನ ನಟಿಯೋ, ಗೆಳತಿಯೋ ಗೌನ್‌ ಹಾಕಿ ತಮ್ಮ ಮದುವೆಯಲ್ಲಿ ಮೆರೆದರಂತೂ ಮುಗಿದೇ ಹೋಯ್ತು. ತಾನೂ ಅಂತೆಯೇ ಕಾಣಬೇಕೆಂಬ ಕನಸು ಹಲವು ಹೆಣ್ಣು ಮಕ್ಕಳದ್ದು. ಇದಕ್ಕಾಗಿಯೇ ನಾಲ್ಕೈದು ತಿಂಗಳ ಮೊದಲೇ ಆನ್‌ ಲೈನ್‌ನಲ್ಲಿ ಡಿಸೈನ್‌ಗಾಗಿ ಹುಡುಕಾಟ ನಡೆಯುತ್ತದೆ. ಒಂದೊಳ್ಳೆ ಡಿಸೈನ್‌ ಆಯ್ಕೆ ಮಾಡಿ ನೆಚ್ಚಿನ ಧಿರಿಸನ್ನು ರೆಡಿ ಮಾಡಿಯೂ ಆಗುತ್ತದೆ.

ಸೀರೆಯ ಅಂದ ನೋಡಾ…
ಮದುವೆಗೆ ಸೀರೆ ಉಡುವುದು ಕಡಿಮೆಯಾಗುತ್ತಿದೆ. ಧಾರಾಕಾರ್ಯಕ್ಕಷ್ಟೇ ಸೀರೆ ಉಟ್ಟು, ಆನಂತರದ ರಿಸೆಪ್ಷನ್‌ಗೆ ಗೌನ್‌ ತೊಡುವುದೇ ಈಗೀಗ ನಗರ ಪ್ರದೇಶಗಳಲ್ಲಿ ಟ್ರೆಂಡಿಯಾಗಿದೆ. ಆದರೂ ಗ್ರಾಮೀಣ ಭಾಗಗಳಲ್ಲಿ ಮದುಮಗಳ ಸಿಂಗಾರಕ್ಕೆ ಸೀರೆಯೇ ಭೂಷಣ. ಸೀರೆಯಲ್ಲಿ ಕಾಣುವ ಸೌಂದರ್ಯ ಇನ್ಯಾವ ಡ್ರೆಸ್‌ನಲ್ಲಿಯೂ ಕಾಣದು ಎಂಬುದು ಮನೆಯ ಹಿರಿಯರ ವಾದ. ಅದಕ್ಕಾಗಿಯೇ ಮದುವೆಗೊಮ್ಮೆ ಡ್ರೆಸ್‌ ಹಾಕುತ್ತೇನೆ ಎಂದರೂ, ಸೀರೆಯೇ ಫೈನಲ್‌ ಎಂದು ಕಟ್ಟಾಜ್ಞೆ ಹೊರಡಿಸುವ ತಾಯಂದಿರು, ಮನೆಯ ಇತರ ಮಹಿಳೆಯರು ಕೊನೆಗೂ ಸೀರೆಯಲ್ಲಿ ತಮ್ಮ ಮನೆ ಮಗಳ ಅಂದವನ್ನು ನೋಡಿ ಖುಷಿ ಪಡುತ್ತಾರೆ. 

ಧನ್ಯಾ ಬಾಳೆಕಜೆ 

Advertisement

Udayavani is now on Telegram. Click here to join our channel and stay updated with the latest news.

Next