ನಟ ಶ್ರೀನಗರ ಕಿಟ್ಟಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ “ಗೌಳಿ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು.
ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನಡೆದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಟ ಶರಣ್, ಶಾಸಕ ರವಿ ಸುಬ್ರಹ್ಮಣ್ಯ ಸೇರಿದಂತೆ ಮೊದಲಾದ ಗಣ್ಯರು ಹಾಜರಿದ್ದು, ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ರಘು ಸಿಂಗಂ ನಿರ್ಮಾಣದಲ್ಲಿ ಮೂಡಿಬಂದಿರುವ “ಗೌಳಿ’ ಸಿನಿಮಾಕ್ಕೆ ಸೂರ ನಿರ್ದೇಶನವಿದೆ. ಶ್ರೀನಗರ ಕಿಟ್ಟಿ ಅವರಿಗೆ ಪಾವನಾ ಗೌಡ ನಾಯಕಿಯಾಗಿ ಜೋಡಿಯಾಗಿದ್ದು, ಉಳಿದಂತೆ ರಂಗಾಯಣ ರಘು, ಶರತ್ ಲೋಹಿತಾಶ್ವ, ಯಶ್ ಶೆಟ್ಟಿ, ಬೇಬಿ ನಮನ, ಕಾಕ್ರೋಜ್ ಸುಧಿ, ರುದ್ರೇಶ್ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ನಟ ಶರಣ್, “ಟ್ರೇಲರ್‌ನಲ್ಲಿ ಅದ್ಭುತವಾದ ಮೇಕಿಂಗ್ ಇದೆ. ಇತ್ತೀಚೆಗೆ ಈ ತರದ ಸಿನಿಮಾಗಳು ಕನ್ನಡದಲ್ಲಿ ಹೆಚ್ಚಾಗಿ ಬರುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಸೌಂಡ್ ಮಾಡುತ್ತಿವೆ. ಟ್ರೇಲರ್ ನೋಡುವಾಗ ಪ್ರತಿ ಫ್ರೇಮ್‌ನಲ್ಲೂ ನಿರ್ದೇಶಕರ ಕನಸು ಕಂಡೆ. ಅವರ ಕನಸಿಗೆ ತಂಡದ ಶ್ರಮ ಕೊಡ ಅಷ್ಟೇ ಇದೆ. ಕಿಟ್ಟಿ ಒಳ್ಳೆ ಕಲಾವಿದ. ಇದರಲ್ಲಿ ಡಿಗ್ಲಾಮ್ ಪಾತ್ರವನ್ನು ಅದ್ಭುತವಾಗಿ ಮಾಡಿದ್ದಾರೆ. ಈ ತರದ ಸಿನಿಮಾಗಳು ಗೆದ್ದಾಗ ಇನ್ನಷ್ಟು ಚಿತ್ರಗಳು ಬರುತ್ತವೆ’ ಎಂದು ಟ್ರೇಲರ್ ಬಗ್ಗೆ ಮೆಚ್ಚುಗೆ ಸೂಚಿಸಿದರು.
ಇದೇ ವೇಳೆ ಮಾತನಾಡಿದ ನಾಯಕ ನಟ ಶ್ರೀನಗರ ಕಿಟ್ಟಿ, “ಸದ್ಯ ಕಾತುರದ ಕ್ಷಣ ರಿವೀಲ್ ಆಯ್ತು. ಇದು ಎಲ್ಲರ ಪ್ರಯತ್ನದ ಸಿನಿಮಾ. ಈ “ಗೌಳಿ’ ಜತೆಗೆ ತಂತ್ರಜ್ಞರೆಲ್ಲ ಬದುಕಿದ್ದಾರೆ. ನಾನು ಎರಡು ಸಿನಿಮಾ ನಿರ್ಮಾಣ ಮಾಡಿದ್ದರೂ ಸಿನಿಮಾಗಳ ರಿಲೀಸ್ ಶ್ರಮ ಏನೆಂದು ಗೊತ್ತಿರಲಿಲ್ಲ ಹಾಗೂ ವ್ಯವಹಾರದ ಬಗ್ಗೆ ತಿಳಿದಿರಲಿಲ್ಲ ಈ ಸಿನಿಮಾದಿಂದ ಎಲ್ಲಾ ಗೊತ್ತಾಯಿತು. ನಿರ್ದೇಶಕರು ಬಂದು ಈ ಕಥೆ ಹೇಳಿದಾಗ ಮೈ ಜುಂ ಎನಿಸಿತ್ತು. ಎಲ್ಲರಿಗೂ ಇಷ್ಟವಾಗುವಂಥ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ’ ಎಂದರು.
“ಈ ಸಿನಿಮಾದಲ್ಲಿ ನಾನು, ಗಿರಿಜಾ ಎಂಬ ಪಾತ್ರ ಮಾಡಿದ್ದೇನೆ. ಈ ಕನಸು ಈಡೇರಲು 10 ವರ್ಷ ಕಾಯಬೇಕಾಯ್ತು. ಮಾಸ್ ಸಿನಿಮಾಗಳನ್ನು ಗಂಡಸರಷ್ಟೇ ಎಂಜಾಯ್ ಮಾಡಲ್ಲ. ಹುಡುಗಿಯರು ಎಂಜಾಯ್ ಮಾಡುತ್ತಾರೆ. ಇಡೀ ಸಿನಿಮಾದಲ್ಲಿ ತಂಡದ ಪರಿಶ್ರಮ ತುಂಬ ಇದೆ. ಸಿನಿಮಾದಲ್ಲಿರುವ ಪ್ರತಿ ಪಾತ್ರ ಹಾಗೂ ಡಿಪಾರ್ಟ್‌ಮೆಂಟ್ ಗೆದ್ದರೆ ಸಿನಿಮಾ ಗೆಲ್ಲುತ್ತದೆ. ಈ ಸಿನಿಮಾದಲ್ಲಿ ಭಾಗವಾಗಿರುವುದಕ್ಕೆ ಖುಷಿಯಾಗುತ್ತಿದೆ. ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಯಿದೆ’ ಎಂಬುದು ನಾಯಕಿ ಪಾವನಾ ಮಾತು.
ಟ್ರೇಲರ್ ಬಿಡುಗಡೆ ವೇಳೆ ಹಾಜರಿದ್ದ ಚಿತ್ರದ ನಿರ್ದೇಶಕ ಸೂರ, ನಿರ್ಮಾಪಕ ರಘು ಸಿಂಗಂ, ಸಂಗೀತ ನಿರ್ದೇಶಕ ಶಶಾಂಕ್ ಶೇಷಗಿರಿ ಸೇರಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು “ಗೌಳಿ’ ಜೊತೆಗಿನ ಅನುಭವ ಹಂಚಿಕೊಂಡರು.
ಅಂದಹಾಗೆ, ಟ್ರೇಲರ್ ಮೂಲಕ ಹೊರಬಂದಿರುವ “ಗೌಳಿ’, ಇದೇ ಫೆ. 24ರಂದು ಬಿಡುಗಡೆಯಾಗಿ ತೆರೆಗೆ ಬರುತ್ತಿದೆ.